ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳು ಸದಾ ಜೀವಂತ : ತಮ್ಮಯ್ಯ

| Published : Oct 11 2024, 11:56 PM IST

ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳು ಸದಾ ಜೀವಂತ : ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳು ಸದಾ ಜೀವಂತ, ಅವುಗಳನ್ನು ನಮ್ಮ ಜೀನವದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಜೀವನ ನಿರ್ವಹಿಸಲು ಸಾಧ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ನಾಗಪುರದ ಡಾ. ಬಿ.ಆರ್. ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ, ನಾಗಪುರಕ್ಕೆ 150 ಮಂದಿ ಪ್ರಯಾಣ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳು ಸದಾ ಜೀವಂತ, ಅವುಗಳನ್ನು ನಮ್ಮ ಜೀನವದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಜೀವನ ನಿರ್ವಹಿಸಲು ಸಾಧ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ನಾಗಪುರದ ಡಾ. ಬಿ.ಆರ್. ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವ ಕಂಡ ಧೀಮಂತ ವ್ಯಕ್ತಿಗಳಲ್ಲಿ ಅಗ್ರ ಗಣ್ಯರು, ಅವರ ವಿಚಾರಧಾರೆಗಳಿಗೆ, ಜ್ಞಾನ ಭಂಡಾರಕ್ಕೆ ವಿಶ್ವಾದಾಂತ್ಯ ತಮ್ಮ ಅನುಯಾಯಿಗಳನ್ನು ಹೊಂದಿದ್ದಾರೆ. ವಿಶ್ವದ ಅನೇಕ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಸಂವಿಧಾನ ರೂಪಿಸಿ ಕೊಡುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪಾತ್ರ ಬಹು ಮುಖ್ಯ ವಾಗಿದೆ ಎಂದರು.

ಸಮಾಜದ ಕಟ್ಟಕಡೆ ವ್ಯಕ್ತಿಯ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆ ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರಿಗೂ ಸ್ವತಂತ್ರ ಜೀವನ ರೂಪಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಬುದ್ಧನ ವಿಚಾರಧಾರೆಗಳಿಂದ ಪ್ರೇರಿತರಾಗಿ ಅವುಗಳನ್ನು ಅನುಸರಿಸು ವುದಲ್ಲದೇ 1954 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಬೌದ್ಧ ಧರ್ಮದ ದೀಕ್ಷೆ ಪಡೆಯುವ ಮೂಲಕ ಬೌದ್ಧ ಧರ್ಮಕ್ಕೆ ಮರುಹುಟ್ಟು ನೀಡಿದರು. ಕರುಣೆ, ಮೈತ್ರಿ, ಪ್ರೀತಿ, ವಾತ್ಸಲ್ಯ ಮತ್ತು ಸಮಾನತೆ ಸಂದೇಶ ಸಾರುವ ಬೌದ್ಧ ಧರ್ಮದ ತತ್ವಗಳನ್ನು ತಮ್ಮಲ್ಲಿ ಅಳವಡಿಸಿಕೊಂಡ ತಮ್ಮ ಅನುಯಾಯಿಗಳಿಗೂ ಬೋಧಿಸಿದರು.

ಚಿಕ್ಕಮಗಳೂರು ಜಿಲ್ಲೆಯಿಂದ ಸುಮಾರು 150 ಕ್ಕೂ ಹೆಚ್ಚು ಬುದ್ಧ ಹಾಗೂ ಅಂಬೇಡ್ಕರ್ ಅನುಯಾಯಿಗಳು ನಾಗಪುರದ ದೀಕ್ಷಾ ಭೂಮಿ ಯಾತ್ರೆ ಯಲ್ಲಿ ಪಾಲ್ಗೊಂಡಿದ್ದು, ಇದರಿಂದ ಬುದ್ಧ ಹಾಗೂ ಅಂಬೇಡ್ಕರ್ ವಿಚಾರವನ್ನು ಇನ್ನಷ್ಟು ಅಧ್ಯಯನ ನಡೆಸಿ ತಮ್ಮ ಅಳವಡಿಸಿಕೊಳ್ಳುವ ಜೊತೆಗೆ ಇತರರಿಗೂ ಬೌದ್ಧ ಧರ್ಮದ ತತ್ವ ಸಾರುವುದರಿಂದ ಸಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದ ಅವರು, ಸರ್ಕಾರ ಈ ಯಾತ್ರೆ ಆಯೋಜಿಸಿರುವುದು ಶ್ಲಾಘನೀಯ ಎಂದರು.ವಕೀಲರ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳು ಸಮಾಜದಲ್ಲಿನ ಜಾತಿ ಪದ್ಧತಿ ನಿರ್ಮೂಲನೆ ಮಾಡಿ, ಸಮ ಸಮಾಜ ರೂಪಿಸಲು ಉತ್ತಮ ಮಾರ್ಗಗಳಾಗಿವೆ. ಅಸಮಾನತೆ ಶೋಷಣೆ ವಿರುದ್ಧ ನಿಂತು ಅನಿಷ್ಟ ಪದ್ಧತಿ ಗಳನ್ನು ಹೋಗಲಾಡಿಸುವಲ್ಲಿ ಶ್ರಮಿಸಿದ್ದಾರೆ. ಸಮಾಜದ ಅಸಹಾಯಕರ ಬಾಳಿನ ಧರ್ಮ ಗ್ರಂಥವಾಗಿ ಸಂವಿಧಾನ ರಚಿಸಿ ಸಮಾಜದಲ್ಲಿ ಶಾಂತಿ ನಿರ್ಮಾಣಕ್ಕೆ ಕಾರಣ ಕರ್ತರಾಗಿರುವ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್ ಹಾಗೂ ವಿವಿಧ ಸಂಘಟನೆಗಳ ಮುಖಂಡದ ಹೊನ್ನೇಶ್, ಧರ್ಮೇಶ್, ಹರೀಶ್, ಹುಣಸೆಮಕ್ಕಿ ಲಕ್ಷ್ಮಣ್, ಮೋಹನ್‌ಕುಮಾರ್‌ ಇದ್ದರು. ಪೋಟೋ ಫೈಲ್‌ ನೇಮ್‌ 10 ಕೆಸಿಕೆಎಂ 4ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಾಗಪುರದ ಡಾ. ಬಿ.ಆರ್. ಅಂಬೇಡ್ಕರ್ ದೀಕ್ಷಾ ಭೂಮಿಗೆ ಹಮ್ಮಿಕೊಂಡಿರುವ ಯಾತ್ರೆಗೆ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಚಾಲನೆ ನೀಡಿದರು.