ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಡಾ.ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಸೂತ್ರಗಳನ್ನು ಹೇಳಿಕೊಟ್ಟಿದ್ದಾರೆ. ಪ್ರತಿಯೊಬ್ಬರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹೇಳಿದರು.ನಗರದ ಸಾರನಾಥ ಬುದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಮಹಿಳಾ ವಿಭಾಗ, ರಮಾಬಾಯಿ ಅಂಬೇಡ್ಕರ್ ಫೌಂಡೇಶನ್ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ತ್ಯಾಗಮೂರ್ತಿ ಮಾತಾ ರಮಾಬಾಯಿ ಅವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಎಲ್ಲ ಅವಕಾಶಗಳ ವಂಚಿತರು ಇತ್ತೀಚೆಗೆ ಕೆಲವು ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ವ್ಯವಸ್ಥಿತವಾಗಿ ಅಕ್ಷರದಿಂದ ದೂರವಿಟ್ಟಂತಹ ಪರಿಸ್ಥಿತಿಯಲ್ಲೂ ಕೂಡ ಮೂರನೇ ತಲೆಮಾರಿನಿಂದಾಚೆ ಶಿಕ್ಷಣ ಪಡೆಯಲಾಗಿದೆ. ಈ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾದರೆ ಹಾಗೂ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾದರೆ ಇಂತಹ ವಾತಾವರಣ ಹಾಗೂ ಕಾರ್ಯಕ್ರಮಗಳ ಖಂಡಿತವಾಗಲೂ ಬೇಕೇಬೇಕು ಎಂದರು.ಧ್ಯಾನ ಮನುಷ್ಯನ ವ್ಯಕ್ತಿತ್ವವನ್ನು ವಿಸ್ತಾರಗೊಳಿಸಲು, ಪ್ರಜ್ಞಾವಂತರನ್ನಾಗಿಸುವುದಕ್ಕೆ ವೇದಿಕೆ ಸಿದ್ಧಪಡಿಸುತ್ತದೆ. ನಮ್ಮಲ್ಲಿ ಸೋಮಾರಿತನ ಹೋಗಲಾಡಿಸುವುದು ಬಹಳ ಅಗತ್ಯ. ಮನುಷ್ಯ ದುಡಿದು ಬದುಕಬೇಕು. ಮಕ್ಕಳಿಗೆ ಯಾವುದೇ ಕೆಲಸ ಕೀಳಲ್ಲ ಎಂಬುದನ್ನು ಕಲಿಸಬೇಕು. ಯಾವುದೇ ದುಶ್ಚಟಗಳಿಗೆ ಒಳಗಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಶಿಕ್ಷಣ ಕಲಿಕೆಗೆ ಪೋಷಕರು ಆಸಕ್ತಿ ವಹಿಸಬೇಕು ಎಂದರು.ಭಾರತೀಯ ಬೌದ್ಧ ಮಹಾಸಭಾ ಮಹಿಳಾ ವಿಭಾಗದ ಉಪಾಧ್ಯಕ್ಷೆ ನಾಗಶಿಲ್ಪ ಉಮೇಶ್ ಕುದರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ನಿ ರಮಾಬಾಯಿ ಅಂಬೇಡ್ಕರ್ ಅವರ ಬದುಕಿನಲ್ಲಿ ಬೆನ್ನೆಲುಬಾಗಿ ನಿಲ್ಲುವ ಮೂಲಕ ತ್ಯಾಗಮೂರ್ತಿ ಆಗಿದ್ದಾರೆ ಎಂದು ತಿಳಿಸಿದರು. ಸನ್ಮಾನ: ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷೆ ಸಿ.ಕೆ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ರಮಾಬಾಯಿ ವೇಷಧಾರಿ ಪುಟಾಣಿಗಳು ವೀಕ್ಷಕರ ಗಮನ ಸೆಳೆದರು. ಸಮಾರಂಭದ ಅಧ್ಯಕ್ಷತೆಯನ್ನು ಮಾತಾ ರಮಾಬಾಯಿ ಫೌಂಡೇಶನ್ ಅಧ್ಯಕ್ಷೆ ಸಿ.ಎಸ್.ಪುಷ್ಪಮರಿಸ್ವಾಮಿ ವಹಿಸಿದ್ದರು. ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಸವರಾಜು ಮಾತನಾಡಿದರು. ಬೌದ್ಧ ಉಪಾಸಕರು, ಉಪಾಸಕಿಯರು ಭಾಗವಹಿಸಿದ್ದರು.
--------9ಸಿಎಚ್ಎನ್12
ಚಾಮರಾಜನಗರದ ಸಾರನಾಥ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ತ್ಯಾಗಮೂರ್ತಿ ಮಾತಾ ರಮಾಬಾಯಿ ಅವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಎಸ್ಪಿ ಡಾ. ಬಿ.ಟಿ. ಕವಿತಾ ಅವರು ಉದ್ಘಾಟಿಸಿದರು.