ರಾಮನಗರ: ಶೋಷಿತ ವರ್ಗದಲ್ಲಿ ಜನಿಸಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ, ದೇಶದ ಆರ್ಥಿಕ-ಸಾಮಾಜಿಕ ಸುಧಾರಕರಾಗಿ, ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಸುದೀರ್ಘವಾಗಿ ತೊಡಗಿಸಿಕೊಂಡು, ದೇಶ ಕಟ್ಟಿದ ಡಾ. ಬಾಬು ಜಗಜೀವನ ರಾಂ ಅಪ್ರತಿಮ ನಾಯಕ ಎಂದು ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಬಣ್ಣಿಸಿದರು.

ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನ ರಾಂರವರ 119 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಡಾ. ಬಾಬು ಜಗಜೀವನ ರಾಂರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಬಾಲ್ಯದಲ್ಲಿ ಬಡತನ, ಶೋಷಣೆ ಅನುಭವಿಸಿದ್ದ ಜಗಜೀವನ ರಾಂ ಅವರು ಶೋಷಣೆ ವಿರುದ್ಧ ಹೋರಾಡಿಸಿ ವಿದ್ಯಾಭ್ಯಾಸ ಪಡೆದ ಮಹಾನ್ ವ್ಯಕ್ತಿ. ಆಡು ಮುಟ್ಟದ ಸೊಪ್ಪಿಲ್ಲ, ಬಾಬು ಜಗಜೀವನ ರಾಮ್ ಅವರು ನಿರ್ವಹಿಸದ ಖಾತೆ ಇಲ್ಲ ಎಂಬಂತೆ ತಮ್ಮ ಸುದೀರ್ಘ ರಾಜಕೀಯ ಜೀವನವನ್ನು ಹೊಂದಿರುವ ಡಾ. ಜಗಜೀವನ ರಾಂ ಅವರು ಇಂಡೋ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ರೈಲ್ವೆ ಸಚಿವರ ಖಾತೆಯನ್ನು ಉತ್ತಮವಾಗಿ ನಿಭಾಯಿಸಿದ್ದಕ್ಕಾಗಿ ಸ್ಮರಣಾರ್ಥವಾಗಿ ಮೊದಲ ವಿದ್ಯುತ್ ಚಾಲಿತ ರೈಲಿಗೆ ಇವರ ಹೆಸರನ್ನು ಇಡಲಾಗಿದೆ ಎಂದು ಹೇಳಿದರು.

ವಕೀಲರು ಹಾಗೂ ಸಾಮಾಜಿಕ ನ್ಯಾಯ ಚಳುವಳಿಗಾರರಾದ ಹನುಮೇಶ್ ಗುಂಡೂರು ಅವರು ಡಾ. ಬಾಬು ಜಗಜೀವನ ರಾಮ್ ಅವರ ಹೋರಾಟದ ಜೀವನ, ರಾಜಕೀಯ ಬದುಕು, ದೇಶಕ್ಕೆ ಅವರ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು.

2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ ಜಿಲ್ಲೆಯ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಬೆಳ್ಳಿ ರಥದಲ್ಲಿ ಡಾ. ಬಾಬು ಜಗಜೀವನ ರಾಂರವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಉಪ ವಿಭಾಗಾಧಿಕಾರಿ ಬಿನೋಯ್, ತಹಸೀಲ್ದಾರ್ ತೇಜಸ್ವಿನಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಜಿ. ಬಿಲಾಲ್ , ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಷರೀಫ್, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕಿ ಆಶಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ, ಸಮಾಜ ಕಲ್ಯಾಣ ಇಲಾಖೆ ರಾಮನಗರ ತಾಲೂಕು ಸಹಾಯಕ ನಿರ್ದೇಶಕ ಬಸವರಾಜು, ಕನಕಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ದೊಡ್ಡಯ್ಯ ಮತ್ತಿತರರು ಹಾಜರಿದ್ದರು.

5ಕೆಆರ್ ಎಂಎನ್ 3,4.ಜೆಪಿಜಿ

3.ರಾಮನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂರವರ 119 ನೇ ಜನ್ಮ ದಿನಾಚರಣೆ ಸಮಾರಂಭವನ್ನು ಅತಿಥಿಗಳು ಉದ್ಘಾಟಿಸಿದರು.

4.ರಾಮನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂರವರ 119 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.