ಧಾರವಾಡ: ದೇಶದ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಂ ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿಯಿಂದ ಸಮಾಜ ಪ್ರಗತಿಪರ ಮಾರ್ಗದಲ್ಲಿ ಸಾಗುತ್ತಿದೆ. ಜೊತೆಗೆ ಸದೃಢ ಶಕ್ತಿಯುತ ರಾಷ್ಟ್ರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹಾದೇವ ಹರಿಜನ ಹೇಳಿದರು.
ಇಲ್ಲಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಂ ಜಯಂತಿ ಆಚರಣೆಯ ಅಂಗವಾಗಿ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.ಬಾಬು ಜಗಜೀವನ ರಾಂ ಅವರು ದೇಶದ ಸಾಮಾಜಿಕ ಸುಧಾರಣೆಗೆ, ಮಹಿಳಾ ಶಿಕ್ಷಣಕ್ಕೆ, ಅಲ್ಪಸಂಖ್ಯಾತ ಹಕ್ಕುಗಳಿಗೆ ಮತ್ತು ಪರಿಸರ ಸಂರಕ್ಷಣೆಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದರು.ದೇಶದ ಪ್ರಗತಿಯು ನಿತ್ಯದ ಶ್ರಮ, ಸಮಗ್ರ ಯೋಜನೆ ಮತ್ತು ಸಮುದಾಯದ ಸಹಕಾರದ ಮೂಲಕ ಸಾಧ್ಯ ಎಂಬುದನ್ನು ಅವರು ತಿಳಿಸಿದ್ದರು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ ಹೆಬ್ಬಳ್ಳಿ ಮಾತನಾಡಿ, ದಲಿತರ ಮತ್ತು ಹಿಂದುಳಿದ ವರ್ಗಗಳ ಬದುಕಿಗೆ ಬೆಳಕಾದ ಮಹಾನ ನಾಯಕರು ಅವರು. ತಮ್ಮ ದಯಾಮಯ ವ್ಯಕ್ತಿತ್ವದಿಂದ ಸಮಾಜದ ನೊಂದವರ ಕಣ್ಣೀರನ್ನು ಒರೆಸಿದವರು ಎಂದರು.ಜಿಪಂ ಸಹಾಯಕ ಕಾರ್ಯದರ್ಶಿ ಅಜಯ ಎನ್., ಮಹಾದೇವ ಹುಲಗಜ್ಜಿ, ಸಮಾಜ ಕಲ್ಯಾಣ ಇಲಾಖೆಯ ಎಂ.ಬಿ. ಸನ್ನೇರಿ ಇದ್ದರು. ಪ್ರವೀಣ ಮಸಕಿ ನಿರೂಪಿಸಿದರು. ವಿಚಾರಗೋಷ್ಠಿಯಲ್ಲಿ ಸಮಾಜದ ಪ್ರಮುಖರು, ದಲಿತ ಚಿಂತಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.
ಬಾಬೂಜಿ ಸೇವೆ ಸ್ಮರಣೀಯ: ಶಾಸಕ ಪಾಟೀಲ
ಹುಬ್ಬಳ್ಳಿ: ಬಾಬೂ ಜಗಜೀವನ ರಾಮ್ ಜಯಂತಿ ನಿಮಿತ್ತ ಇಲ್ಲಿಯ ಇಂದಿರಾ ಗಾಜಿನಮನೆ ಆವರಣದಲ್ಲಿ ಬಾಬೂಜಿ ಅವರ ಪ್ರತಿಮೆಗೆ ಶಾಸಕ ಎಂ.ಆರ್. ಪಾಟೀಲ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.ನಂತರ ಮಾತನಾಡಿದ ಅವರು, ಬಾಬೂಜಿ ಅವರ ದೇಶಕ್ಕಾಗಿ ಸಲ್ಲಿಸಿದ ಸೇವೆ ಅಮೋಘ. ಶೋಷಿತ ಸಮಾಜವನ್ನು ಮೇಲಕ್ಕೆತ್ತು ಕಾರ್ಯ ಮಾಡಿದರು. ತಮ್ಮ ಅಧಿಕಾರವನ್ನು ಎಂದಿಗೂ ಅವರು ದುರುಪಯೋಗ ಮಾಡಿಕೊಳ್ಳಲಿಲ್ಲ. ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದರು.ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಹದೇವ ಮಾಳಗಿ, ಗುರುಮೂರ್ತಿ ಬೆಂಗಳೂರು, ಮಂಜುನಾಥ ಕೊಂಡಪಲ್ಲಿ, ಸುರೇಶ ಕಲ್ಲಮ್ಮನವರ, ಪ್ರಕಾಶ ಹುಬ್ಬಳ್ಳಿ ಸೇರಿದಂತೆ ಹಲವರಿದ್ದರು.