ಡಾ. ಸಿಪಿಕೆ-85 ವಾಟಾಳ್ ನಾಗರಾಜ್ ಅಭಿನಂದನೆ

| Published : Apr 09 2024, 12:48 AM IST

ಸಾರಾಂಶ

ಸಂಸತ್ ನಲ್ಲಿ ಕನ್ನಡದ ಪರವಾಗಿ ಯಾರೊಬ್ಬರು ಧ್ವನಿ ಎತ್ತುತ್ತಿಲ್ಲ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನೂ ಕೂಡ ಸ್ಪರ್ಧಿಸಿದ್ದೇನೆ. ನಾನು ಗೆದ್ದಿರುವುದಕ್ಕಿಂತ ಸೋತಿರುವುದೇ ಹೆಚ್ಚು.

ಕನ್ನಡಪ್ರಭ ವಾರ್ತೆ ಮೈಸೂರು

ಹಿರಿಯ ಸಾಹಿತಿ ಡಾ. ಸಿಪಿಕೆ ಅವರನ್ನು 85ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅಭಿಮಾನಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಸಂಸತ್ ನಲ್ಲಿ ಕನ್ನಡದ ಪರವಾಗಿ ಯಾರೊಬ್ಬರು ಧ್ವನಿ ಎತ್ತುತ್ತಿಲ್ಲ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನೂ ಕೂಡ ಸ್ಪರ್ಧಿಸಿದ್ದೇನೆ. ನಾನು ಗೆದ್ದಿರುವುದಕ್ಕಿಂತ ಸೋತಿರುವುದೇ ಹೆಚ್ಚು. ಯಾರೂ ಕೂಡ ನಾಡು, ನುಡಿ, ಜಲ ಮತ್ತು ಭಾಷೆಯ ಬಗ್ಗೆ ಧ್ವನಿ ಎತ್ತದಿರುವುದರಿಂದ ನಾನು ಸ್ಪರ್ಧಿಸುತ್ತಿರುವುದಾಗಿ ಹೇಳಿದರು.

ಕಾಯಂ ಆಗಿ ಜೈಲಿನಲ್ಲಿ ಇರಬೇಕಾದವರೆಲ್ಲಾ ಈಗ ಸ್ಪರ್ಧಿಸುತ್ತಿದ್ದಾರೆ. ಮುಂದೆ ಚುನಾಯಿತರೂ ಆಗಬಹುದು. ಆದ್ದರಿಂದ ಈಗ ಚುನಾವಣೆಗೆ ಅರ್ಥ ಹೋಗಿದೆ. ಚುನಾವಣೆ ಎಂಬುದು ದರೋಡೆಯಾದಂತಾಗಿದೆ. ಹಣ ಇದ್ದವರು ಮಾತ್ರ ಸ್ಪರ್ಧಿಸುತ್ತಿದ್ದಾರೆ. ಬಹುತೇಕ ಎಲ್ಲಾ ಪಕ್ಷದಲ್ಲಿಯೂ ಟಿಕೆಟ್ ಗಳನ್ನು ಮನೆಯವರೇ ಹಂಚಿಕೊಳ್ಳುತ್ತಿದ್ದಾರೆ. ಯದುವೀರ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಬಹುದಿತ್ತು. ಆದರೆ ಚುನಾವಣೆಗೆ ಯಾಕೆ ಸ್ಪರ್ಧಿಸಿದರೋ ಗೊತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರಮೋದಿ ಅವರು ಲಾರಿಗಟ್ಟಲೆ ಹೂವನ್ನು ಮೇ ಮೇಲೆ ಎರಚಿಸಿಕೊಳ್ಳುವ ಪ್ರವೃತ್ತಿ ಅವರಿಗೆ ಶೋಭೆಯನ್ನುಂಟು ಮಾಡುವುದಿಲ್ಲ. ಡಾ. ಸಿಪಿಕೆ ಅವರು ಆದರ್ಶ, ಪ್ರೀತಿ ಮತ್ತು ಅಭಿಮಾನದ ಸಂಕೇತ. ಅವರಿಗೂ ನನಗೂ ಹಲವು ದಶಕಗಳ ಬಾಂಧವ್ಯವಿದೆ. ಅವರ ಹಿನ್ನೆಲೆ ಗಮನಿಸಿ ಹುಟ್ಟುಹಬ್ದ ಶುಭಾಶಯ ಕೋರುತ್ತಿರುವುದಾಗಿ ಅವರು ಹೇಳಿದರು.

ತಾಯೂರು ವಿಠ್ಠಲಮೂರ್ತಿ, ಶಿವಶಂಕರ್, ಪ್ರೊ.ಎಸ್. ಶಿವರಾಜಪ್ಪ, ವೇಣುಗೋಪಾಲ್ ಇದ್ದರು.