ಕನ್ನಡಪ್ರಭ ವಾರ್ತೆ ಬೀದರ್

ಬಸವಲಿಂಗ ಅವಧೂತರು ಸಮಾಜದ ಉನ್ನತಿಗೆ ಅವಿರತ ಶ್ರಮಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ನೆರೆಯ ತೆಲಂಗಾಣದ ಜಹೀರಾಬಾದ್ ಸಮೀಪದ ಮಲಯ್ಯಗಿರಿ ಆಶ್ರಮದಲ್ಲಿ ಬುಧವಾರ ನಡೆದ ಆಶ್ರಮದ ಪೀಠಾಧಿಪತಿ ಡಾ.ಬಸವಲಿಂಗ ಅವಧೂತರ 50ನೇ ಜನ್ಮದಿನಾಚರಣೆ ಹಾಗೂ ಅವಧೂತ ವೈಭವ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅನಿಷ್ಟ ಪದ್ಧತಿ, ಭಕ್ತರ ಸಂಕಷ್ಟ ನಿವಾರಣೆ ಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಸರಳತೆಗೆ ಇನ್ನೊಂದು ಹೆಸರಾಗಿದ್ದಾರೆ. ಮಠದಿಂದ ಸ್ವಾಮೀಜಿ ಅಲ್ಲ, ಸ್ವಾಮೀಜಿಯಿಂದ ಮಠ ಎಂಬುದನ್ನು ತೋರಿಸಿ ದ್ದಾರೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಆಶ್ರಮದ ಪೀಠಾಧಿಪತಿ ಡಾ.ಬಸವಲಿಂಗ ಅವಧೂತರು ಮಾತನಾಡಿ, ಮಲ್ಲಯ್ಯಗಿರಿ ಹಾಗೂ ಕಲಬುರಗಿ ಜಿಲ್ಲೆಯ ದೇಗಲಮಡಿಯಲ್ಲಿ ಬಹಳ ಪರಿಶ್ರಮ ಪಟ್ಟು ಆಶ್ರಮ ಕಟ್ಟಿ ಬೆಳೆಸಿದ್ದಾರೆ. ಜನರಿಗೆ ಸನ್ಮಾರ್ಗವನ್ನು ತೋರುತ್ತಿದ್ದಾರೆ. ಮಲ್ಲಯ್ಯಗಿರಿ ಆಶ್ರಮ ಬೃಹತ್ ಆಗಿ ಬೆಳೆಯಲು ಭಕ್ತರೇ ಕಾರಣ. ಸಮಾಜದ ಒಳಿತು ಹಾಗೂ ಭಕ್ತರ ಕಲ್ಯಾಣವೇ ನನ್ನ ಧ್ಯೇಯ ಎಂದು ಹೇಳಿದರು.

ತಮ್ಮ 50ನೇ ಜನ್ಮದಿನದ ಸಂದರ್ಭದಲ್ಲಿ ಸಾಹಿತಿಗಳು ಹಾಗೂ ಲೇಖಕರು ಕನ್ನಡದಲ್ಲಿ ಅಭಿನಂದನಾ ಗ್ರಂಥ ಹೊರ ತಂದಿರುವುದು ಸಂತಸ ಉಂಟು ಮಾಡಿದೆ. ಬರುವ ದಿನಗಳಲ್ಲಿ ಗ್ರಂಥವನ್ನು ತೆಲುಗು, ಮರಾಠಿ ಹಾಗೂ ಇಂಗ್ಲಿಷ್‌ಗೆ ತರ್ಜುಮೆ ಮಾಡಲಾಗುವುದು ಎಂದು ತಿಳಿಸಿದರು.


ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಅವಧೂತ ವೈಭವ ಅದ್ಭುತ ಕೃತಿ ಯಾಗಿದೆ. 304 ಪುಟಗಳ ಕೃತಿ 62 ಲೇಖನ, ಕವನಗಳನ್ನು ಒಳಗೊಂಡಿದೆ. ಸಾಹಿತಿಗಳು, ಲೇಖಕರು ಹಾಗೂ ಬರಹಗಾರರು ಡಾ.ಬಸವಲಿಂಗ ಅವಧೂತರ ಜೀವನ ಹಾಗೂ ಸಾಧನೆಯನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಎಲ್ಲರೂ ಓದಲೇಬೇಕಾದ ಕೃತಿಯಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಆಶಯ ನುಡಿ ಆಡಿದರು. ಇದೇ ವೇಳೆ ಡಾ.ಬಸವಲಿಂಗ ಅವಧೂತರು ರಚಿಸಿದ ‘ಒಲಿದು ಹಾಡಿದ ಗೀತೆಗಳು’ ಕೃತಿ ಹಾಗೂ ಬೀದರಿನ ಶಿಕ್ಷಕಿ, ಸಾಹಿತಿ ಮಾಣಿಕಾ ದೇವಿ ಪಾಟೀಲ ಅವರ ‘ಬಾಳ್ವೆಗೆ ಬದುಕು’ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಡಾ.ಎಸ್.ಜಿ.ಸುಶೀಲಮ್ಮ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಬಿ.ಬಿ.ಪಾಟೀಲ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷೆ ಸುನಿತಾ ಪಾಟೀಲ, ಮುಖಂಡ ಹಣಮಂತರಾವ್ ಪಾಟೀಲ, ಅಭಿನಂದನಾ ಗ್ರಂಥದ ಸಂಪಾದಕ ದೇವೇಂದ್ರ ಕರಂಜೆ, ನಿವೃತ್ತ ಮುಖ್ಯ ಶಿಕ್ಷಕ ಸಿದ್ದಾರೆಡ್ಡಿ ನಾಗೋರಾ, ಕ.ಸಾ.ಪ. ಬೀದರ್ ತಾಲ್ಲೂಕು ಅಧ್ಯಕ್ಷ ಟಿ.ಎಂ.ಮಚ್ಚೆ, ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಈಶ್ವರಯ್ಯ ಕೊಡಂಬಲ್, ಡಾ.ರಾಮಚಂದ್ರ ಗಣಾಪುರ, ಮಲ್ಲಿಕಾರ್ಜುನ ಪಾಟೀಲ ಮುಗನೂರ, ಶಿವಕುಮಾರ ಮೂಲಗೆ, ಶಿವಕುಮಾರ ಪಟಪಳ್ಳಿ ಮತ್ತಿತರರು ಇದ್ದರು. ಪತ್ರಕರ್ತ ನಾಗೇಶ ಪ್ರಭಾ ನಿರೂಪಿಸಿದರು. ಗುರು ಪೂರ್ಣಿಮೆ ಅಂಗವಾಗಿ ಭಕ್ತರು ರುದ್ರಾಕ್ಷಿ ಹಾಗೂ ವಿಭೂತಿಗಳಿಂದ ಡಾ.ಬಸವಲಿಂಗ ಅವಧೂತರ ತುಲಾಭಾರ ಮಾಡಿದರು. ವಿವಿಧೆಡೆಯ ಅಪಾರ ಭಕ್ತರು ಪಾಲ್ಗೊಂಡಿದ್ದರು.