ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭಾರತೀಯರ ನೆಮ್ಮದಿ ಜೀವನಕ್ಕೆ ಅಗತ್ಯವಾದ ಸರ್ವಶ್ರೇಷ್ಠ ಸಂವಿಧಾನ ನೀಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ನವ ಭಾರತ ನಿರ್ಮಾಣದ ಶಿಲ್ಪಿಯಾಗಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.ಪಟ್ಟಣದ ಕೆ.ಪಿ.ಎಸ್.ಶಾಲೆ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಶೋಷಿತರ ಜೀವನದ ಆಶಾಜ್ಯೋತಿ ಅಂಬೇಡ್ಕರ್ ಅವರು ಸೂರ್ಯನಂತೆ ಬೆಳಕು ನೀಡಿ ಸ್ವಾಭಿಮಾನದ ಶಕ್ತಿ ತುಂಬಿದ್ದಾರೆ ಎಂದರು.
ಇದೇ ವೇಳೆ ಪಟ್ಟಣದ ಮುಖ್ಯ ಜಾಗದಲ್ಲಿ ಅಂಬೇಡ್ಕರ್ ಪುತ್ಥಳಿಯ ಸ್ಥಾಪನೆಗೆ ಕ್ರಮ ವಹಿಸುವುದಾಗಿ ತಿಳಿಸಿದ ಶಾಸಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಜಾಗೃತ ಕರ್ನಾಟಕ ಸಂಘಟನೆ ಸಂಚಾಲಕ ಡಾ.ಎಚ್.ವಿ.ವಾಸು ಉಪನ್ಯಾಸ ನೀಡಿ, ಅಂಬೇಡ್ಕರ್ ತತ್ವ ಹಾಗೂ ಸಿದ್ಧಾಂತ ಪಾಲಿಸಲು ಯುವಕರಿಗೆ ಕರೆ ನೀಡಿದರು.
ಎಲ್ಲಾ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಕೆ ಮಾಡಿಕೊಂಡು ರಾಜಕೀಯ ಮೌಲ್ಯಗಳ ಅಧಃಪತನ ಮಾಡುತ್ತಿವೆ. ಬಡವರು, ಶೋಷಿತರು ಹಾಗೂ ತುಳಿತಕ್ಕೊಳಗಾದ ಜನರಿಗೆ ಸಾಮಾಜಿಕ ನ್ಯಾಯ ಇಂದಿಗೂ ಕನಸಿನ ಗಂಟಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ತಹಸೀಲ್ದಾರ್ ಡಾ.ಅಶೋಕ್, ಕಾಂಗ್ರೆಸ್ ನಾಯಕ ಬಿ.ಎಲ್.ದೇವರಾಜು, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಜಿಪಂ ಮಾಜಿ ಸದಸ್ಯರಾದ ಡಾ.ಕೃಷ್ಣಮೂರ್ತಿ, ರಾಮದಾಸು, ಪುರಸಭೆ ಅಧ್ಯಕ್ಷೆ ಪಂಕಜಾ, ಉಪಾಧ್ಯಕ್ಷೆ ಸೌಭಾಗ್ಯ, ಚೀಫ್ ಆಫೀಸರ್ ನಟರಾಜ್, ತಾಪಂ ಇಒ ಸುಷ್ಮ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಸುಮಾರಾಣಿ, ಆನಂದೇಗೌಡ, ಸಮಾಜ ಕಲ್ಯಾಣ ಅಧಿಕಾರಿ ದಿವಾಕರ್, ಸಿಡಿಪಿಒ ಅರುಣಕುಮಾರ್, ದಲಿತ ಮುಖಂಡರಾದ ಡಿ.ಪ್ರೇಮ್ ಕುಮಾರ್, ಬಸ್ತಿ ರಂಗಪ್ಪ, ಮಾಂಬಳ್ಳಿ ಜಯರಾಮ್, ಕಿಕ್ಕೇರಿ ರಾಜಣ್ಣ, ಸೋಮಸುಂದರ್, ರಾಜಯ್ಯ, ಸಿ.ಬಿ.ಸುನಿಲ್ ಕುಮಾರ್, ಊಚನಹಳ್ಳಿ ನಟರಾಜ್, ನಿಂಗಯ್ಯ, ಜೈನಹಳ್ಳಿ ಹರೀಶ್, ಗಿರೀಶ್, ಕಲ್ಪನಾ ದೇವರಾಜ್ ಸೇರಿದಂತೆ ಹಲವು ಮುಖಂಡರು ಇದ್ದರು.
ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಅಲಂಕೃತ ಸಾರೋಟಿನಲ್ಲಿ ಡಾ.ಬಿ.ಆರ್.ಅಂಬೆಡ್ಕರ್ ಅವರ ಭಾವಚಿತ್ರವನ್ನು ಜನಪದ ಕಲಾ ತಂಡಗಳ ಮೆರವಣಿಗೆಯೊಂದಿಗೆ ಮುಖ್ಯ ವೇದಿಕೆಗೆ ತರಲಾಯಿತು.ದೆಹಲಿ ಕರ್ನಾಟಕ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆನವದೆಹಲಿಯ ಕರ್ನಾಟಕ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ವಿಜಯರಾಮೇಗೌಡ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಕರ್ನಾಟಕ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಸಾಧನೆ ನೆನಪು ಮಾಡಿಕೊಳ್ಳುವ ಒಂದು ಸಣ್ಣ ಪ್ರಯತ್ನವನ್ನು ಸಮಸ್ತ ಭಾರತೀಯರು ಮಾಡಬೇಕೆಂದು ಕರೆ ನೀಡಿದರು.