ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಭಾರತೀಯರಾದ ನಾವೆಲ್ಲರೂ ಜಾತಿಭೇದ, ಮತ-ಪಂಥವನ್ನು ಬಿಟ್ಟು ಸಮಾನತೆಯಿಂದ ಬದುಕುವುದನ್ನು ಕಲಿಯಬೇಕು ಎಂದು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದಲ್ಲಿನ ಅಸ್ಪೃಶ್ಯತೆ, ಜಾತಿವ್ಯವಸ್ಥೆ ತೊಲಗಿಸಿ ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣವನ್ನು ತಂದುಕೊಡಲು ಸಾಕಷ್ಟು ಹೋರಾಟ ನಡೆಸಿದರು. ಸಂವಿಧಾನದ ಮೂಲಕ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಆದರೂ ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿವ್ಯವಸ್ಥೆ, ಕೀಳಿರಿಮೆ ನಾಶವಾಗಿಲ್ಲ ಎಂದು ವಿಷಾದಿಸಿದರು.ಹಿಂದಿನಿಂದಲೂ ಸಮಾಜದಲ್ಲಿನ ಕೆಲವು ಮೇಲ್ವರ್ಗದವರು, ನಮ್ಮಂತಹ ರಾಜಕಾರಣಿಗಳು ಸಮಾಜವನ್ನು ಹೊಡೆದು ಆಳುವ ಸಂಸ್ಕೃತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಇವುಗಳನ್ನು ನಾವು ಅರ್ಥಮಾಡಿಕೊಂಡು ತಿರಸ್ಕೃರಿಸಿ ಎಲ್ಲರು ಒಂದಾಗಿ ಬಾಳುವುದನ್ನು ಕಲಿಯಬೇಕು ಎಂದು ಸಲಹೆ ಮಾಡಿದರು.
ಉಪವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವಮಾನ್ಯತೆ ಪಡೆದು ಶ್ರೇಷ್ಠ ನಾಯಕ, ಜಾತ್ಯತೀತ ರಾಷ್ಟ್ರ, ಸಮಸಮಾಜ ನಿರ್ಮಾಣ ಹಾಗೂ ವ್ಯಕ್ತಿಗೌರವ ಎತ್ತಿಹಿಡಿದ ಮಹಾನ್ ನಾಯಕ ಎಂದು ಬಣ್ಣಿಸಿದರು.
ಸಂವಿಧಾನ ರಚನೆಯಾಗಿ ಏಳು ದಶಕಗಳು ಕಳೆದರೂ ಇನ್ನೂ ಸಮಾಜದಲ್ಲಿ ಎಸ್ಸಿ, ಎಸ್ಟಿಗಳು ಶೇ.64 ರಷ್ಟು ಮಾತ್ರ ಶಿಕ್ಷಣವಂತರಾಗಿದ್ದಾರೆ. ಉಳಿದ ಶೇ.36ರಷ್ಟು ಮಂದಿ ಅವಿದ್ಯಾವಂತರಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಶೇ.5 ರಷ್ಟು ಮಂದಿಯೂ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರೆ ನಮ್ಮ ಸರ್ಕಾರಿ ವ್ಯವಸ್ಥೆಯತ್ತ ಸಾಗುತ್ತಿದೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು.
ಸಮಾಜದಲ್ಲಿ ಹಣ, ಹೆಂಡವಿಲ್ಲದೆ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ದುಬಾರಿ ಶಿಕ್ಷಣ, ಆರೋಗ್ಯದಿಂದ ಜನರು ಬಡತನಕ್ಕೆ ಒಳಗಾಗುತ್ತಿದ್ದಾರೆ. ಸಮಾಜದಲ್ಲಿ ಇನ್ನೂ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆತಾಂಡವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಎಸ್.ಕೆ.ಲೀಲಾ ಉಪನ್ಯಾಸ ನೀಡಿದರು. ತಹಸೀಲ್ದಾರ್ ಬಸವರೆಡ್ಡಪ್ಪರೋಣದ, ತಾಪಂ ಇಒ ವೀಣಾ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಸಹಾಯಕ ನಿರ್ದೇಶಕಿ ಕೋಮಲ, ಟಿಎಚ್‌ಒ ಡಾ.ಸಿ.ಎ.ಅರವಿಂದ್, ಪುರಸಭೆ ಸಿಒ ಸತೀಶ್ ಸೇರಿದಂತೆ ಹಲವು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.