ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳವರ ಜೀವನವೇ ಒಂದು ಶಿಸ್ತು, ಸರಳತೆ ಹಾಗೂ ದೇವರ ಭಕ್ತಿಯ ಆದರ್ಶವಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ ತಿಳಿಸಿದರು.ನಗರದ ಜೆಎಸ್ಎಸ್ ತಾಂತ್ರಿಕ ಸಂಸ್ಥೆಗಳು ಎಸ್.ಜೆ.ಸಿ.ಇ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 109ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮೀಜಿಗಳಿಗೆ ಪವಾಡದ ಅವಶ್ಯಕತೆಯಿಲ್ಲ. ಹಸಿದ ಹೊಟ್ಟೆಗೆ ಅನ್ನ ನೀಡಿದರೂ ಅವರು ಸ್ಮರಣೀಯರಾಗಿ ಉಳಿಯುತ್ತಾರೆ ಎಂದರು.
ರಾಜೇಂದ್ರ ಶ್ರೀಗಳ ವಿಧೇಯತೆ, ವಿಶ್ವಪ್ರೇಮ, ದಯೆ ಮತ್ತು ನಿರ್ಲೋಭ ಸೇವೆಯು ಮಾನವೀಯ ತತ್ತ್ವದಲ್ಲಿ ಅಡಗಿತ್ತು. ಅವರ ಪರಿಶುದ್ಧ ಜೀವನದಲ್ಲಿ ಶಿಸ್ತು ಮತ್ತು ಆತ್ಮಸಾಧನೆಯು ಪ್ರಮುಖವಾಗಿದ್ದು. ತಮ್ಮ ಜೀವನ ಸಂದೇಶವು ಎಲ್ಲಾ ವರ್ಗದವರಿಗೂ ತಲುಪುವಂತೆ ಮಾಡಿದರು ಎಂದರು.ಸಹಾನುಭೂತಿ, ಶಾಂತಿ, ಸಾಮರಸ್ಯ ಮತ್ತು ಒಕ್ಕೂಟದ ಮೌಲ್ಯಗಳನ್ನು ಜಗತ್ತಿಗೆ ಸಾರುವುದರ ಜೊತೆಗೆ ಅವುಗಳನ್ನು ಉತ್ತೇಜಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ರಾಜೇಂದ್ರ ಶ್ರೀಗಳು ಸ್ಥಾಪಿಸಿದ ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳು ಇಂದು ಜಗತ್ತಿನಾದ್ಯಂತ ಪಸರಿಸಿವೆ. ಶ್ರೀಗಳ ಆಧ್ಯಾತ್ಮಿಕ ಮಾರ್ಗದರ್ಶನದಿಂದ ಲಕ್ಷಾಂತರ ಜನರು ತಮ್ಮ ಜೀವನದಲ್ಲಿ ಗುರಿ ಮತ್ತು ದಿಶೆಯನ್ನು ಕಂಡುಕೊಂಡಿದ್ದಾರೆ ಎಂದರು.
ಸಮಾಜಕ್ಕೆ ಆರೋಗ್ಯ, ಅಭಯ, ಆಶ್ರಯ, ಜ್ಞಾನ, ದಾಸೋಹದ ಸೇವೆ ನೀಡುವ ಮೂಲಕ ರಾಜೇಂದ್ರ ಶ್ರೀಗಳು ಮಾದರಿಯಾಗಿದ್ದು, ಪ್ರಸ್ತುತ ಅವರ ಕಾರ್ಯಗಳನ್ನು ಅನುಸರಿಸುವ ಅಗತ್ಯವಿದೆ. ಸಣ್ಣ ಸಹಾಯಕ್ಕೆ ದೊಡ್ಡ ಪುರಸ್ಕಾರದ ಆಸೆ ಪಡುವವರ ನಡುವೆ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಿದ ಶ್ರೀಗಳು ತಮ್ಮ ಗುಣದಿಂದ ದೊಡ್ಡವರಾಗುತ್ತಾರೆ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮಾತನಾಡಿ, ಮಠದ ಪರಂಪರೆ ಮಾನವೀಯತೆಯನ್ನು ತನ್ನ ರಕ್ತಗತವಾಗಿ ರೂಢಿಸಿಕೊಂಡು ಬಂದಿದ್ದು, ಶಿಕ್ಷಣ ಧಾರ್ಮಿಕ ಕ್ಷೇತ್ರದಲ್ಲಿ ಸಮಾಜದ ಬೆನ್ನೆಲುಬಾಗಿ ನಿಂತಿದೆ ಎಂದು ತಿಳಿಸಿದರು.
ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ಕುಲಪತಿ ಡಾ.ಎ.ಎನ್. ಸಂತೋಷ್ ಕುಮಾರ್, ಕುಲಸಚಿವ ಡಾ.ಎಸ್.ಎ. ಧನರಾಜ್, ಎಸ್.ಜೆ.ಸಿ.ಇ ಪ್ರಾಂಶುಪಾಲ ಡಾ.ಸಿ. ನಟರಾಜು, ಜೆಎಸ್ಎಸ್ ವಿಶೇಷಚೇತನ ಪಾಲಿಟೆಕ್ನಿಕ್ ಪ್ರಾಂಶುಪಾಲ ಇಳಂಗೋವನ್, ಜೆಎಸ್ಎಸ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ಕೆ.ಎಸ್. ಭಕ್ತವತ್ಸಲ, ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ಎಸ್.ಎಸ್. ಲೋಕೇಶ್, ಎಸ್.ಜೆ.ಸಿ.ಇ ಸ್ಟೆಪ್ಸಿಇಓ ಶಿವಕುಮಾರ್, ಜೆಎಸ್ಎಸ್ ಪಬ್ಲಿಕ್ ಶಾಲೆ ಪ್ರಾಂಶುಪಾಲೆ ಸುಮಾ, ಪಿಯು ಕಾಲೇಜಿನ ಪ್ರಾಂಶುಪಾಲ ಶಾಂತಮಲ್ಲಪ್ಪ ಮೊದಲಾದವರು ಇದ್ದರು.