ಸಾರಾಂಶ
ಭಾಲ್ಕಿಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವದಲ್ಲಿ ನ್ಯಾ.ಫಣೀಂದ್ರ ಹೇಳಿಕೆ
ಕನ್ನಡಪ್ರಭ ವಾರ್ತೆ ಭಾಲ್ಕಿ
ಡಾ.ಚನ್ನಬಸವ ಪಟ್ಟದ್ದೇವರ ಬದುಕಿನ ಪರಿಚಯ ಹಾಗೂ ಅವರ ಸಾಧನೆಗಳನ್ನು ಸಾರ್ವಜನಿಕರ ಮೇಲೆ ಪ್ರೇರಣೆ ಮೂಡಿಸುವುದೇ ಜಯಂತಿ ಆಚರಿಸುವ ಉದ್ದೇಶ ಎಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಹೇಳಿದರು.ಪಟ್ಟಣದ ಚನ್ನಬಸವಾಶ್ರಮದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 135ನೇ ಜಯಂತ್ಯುತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರಿಯ ಸಾಹಿತಿ ಡಾ.ಸಿದ್ದು ಯಾಪಲಪರವಿ ಅವರು ತಮ್ಮ ಅನುಭಾವ ನುಡಿಗಳನ್ನು ನುಡಿದು ಜೀವನದಲ್ಲಿ ಬದಲಾವಣೆಗಳು ನಿರಂತರ ಆಗುತ್ತವೆ.ಆ ನಿಟ್ಟಿನಲ್ಲಿ ಭಾಲ್ಕಿ ಮಠದ ಪೂಜ್ಯರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಬಸವತತ್ವ ಪ್ರಸಾರ ಕಾರ್ಯ ಮತ್ತು ಶೈಕ್ಷಣಿಕ ಸೇವೆ ಅನನ್ಯವಾಗಿದೆ ಎಂದರು.
ಜಯಂತ್ಯುತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ವಹಿಸಿದ್ದರು. ಪೀಠಾಧೀಶರಾದ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರಾದ ಪ್ರಕಾಶ ಬನಸೋಡೆ, ಜಿಪಂ ಸಿಇಒ ಡಾ.ಗಿರೀಶ ಬದೋಲೆ ಇದ್ದರು.ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತರ ಸೇವೆಗೈದ ಡಾ.ರಾಮನಗೌಡ, ಡಾ.ಪ್ರಶಾಂತ ಅಳ್ಳೆ, ಡಾ.ವಿವೇಕ ನಿಂಬೂರ, ಡಾ. ವಿ.ವಿ ನಾಗರಾಜ, ಜಿ.ಬಿ. ವಿನಯಕುಮಾರ ಮತ್ತು ಪ್ರಕಾಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಚನ್ನಬಸವಾಶ್ರಮದಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾದ ಶಶಿಕಲಾ ಅಶೋಕ ಸಿಂಧನಕೆರೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಅಕ್ಕನ ಬಳಗದವರಿಂದ ತೊಟ್ಟಿಲು ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ರೋಟರಿ ಕ್ಲಬ್ ಅಧ್ಯಕ್ಷ ಸಂಜುಕುಮಾರ ಪಂಡರಗೇರೆ, ವಿಜಯಕುಮಾರ ರಾಜಭವನ, ಸಂಗಮೇಶ ಕಾರಬಾರಿ ಉಪಸ್ಥಿತರಿದ್ದರು. ನೀಲಮ್ಮ ವಿ.ಕೆ.ಪಾಟೀಲ ಅವರಿಂದ ಬಸವಗುರುಪೂಜೆ ನೆರವೇರಿತು. ಲೋಕನಾಥ ಚಾಂಗ್ಲೇರ ಮತ್ತು ಸಂಗಡಿಗರಿಂದ ವಚನ ಸಂಗೀತ ನಡೆಯಿತು.