ಡಾ. ಚೆನ್ನಣ್ಣ ವಾಲಿಕಾರ್ ಆದರ್ಶ ಮುಂದಿನ ಪೀಳಿಗೆಗೆ ಮುಟ್ಟಬೇಕು: ಕುಲಕರ್ಣಿ

| Published : Apr 09 2024, 12:47 AM IST

ಡಾ. ಚೆನ್ನಣ್ಣ ವಾಲಿಕಾರ್ ಆದರ್ಶ ಮುಂದಿನ ಪೀಳಿಗೆಗೆ ಮುಟ್ಟಬೇಕು: ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದ ಮೇರು ಸಾಹಿತಿ ಡಾ. ಚೆನ್ನಣ್ಣ ವಾಲಿಕಾರ್ ಜನಮನದ ಕವಿಯಾಗಿ ಬೆಳೆದವರು ಮತ್ತು ಆದರ್ಶದ ಸಾಹಿತಿಯಾಗಿ ಬದುಕು ಮಾಡಿದವರಾಗಿದ್ದು ಅವರ ಆದರ್ಶವನ್ನು ಮುಂದಿನ ಜನಾಂಗಕ್ಕೆ ಮುಟ್ಟಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಸಾಹಿತಿಗಳಾದ ಡಾ. ಸ್ವಾಮಿರಾವ್ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಭಾಗದ ಮೇರು ಸಾಹಿತಿ ಡಾ. ಚೆನ್ನಣ್ಣ ವಾಲಿಕಾರ್ ಜನಮನದ ಕವಿಯಾಗಿ ಬೆಳೆದವರು ಮತ್ತು ಆದರ್ಶದ ಸಾಹಿತಿಯಾಗಿ ಬದುಕು ಮಾಡಿದವರಾಗಿದ್ದು ಅವರ ಆದರ್ಶವನ್ನು ಮುಂದಿನ ಜನಾಂಗಕ್ಕೆ ಮುಟ್ಟಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಸಾಹಿತಿಗಳಾದ ಡಾ. ಸ್ವಾಮಿರಾವ್ ಕುಲಕರ್ಣಿ ಹೇಳಿದರು.

ಕಲ್ಬುರ್ಗಿಯ ಮಹಾಲಕ್ಷ್ಮಿ ಲೇಔಟ್ ನ ‘ಸಾಹಿತ್ಯ ಸದನ’ ದಲ್ಲಿ ಸೋಮವಾರ ಡಾ. ಚನ್ನಣ್ಣ ವಾಲಿಕಾರ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗೆ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಅವರು ಹತ್ತು ಸಾವಿರ ರುಪಾಯಿಯ ಚೆಕ್ ಹಸ್ತಾಂತರಿಸುವ ಸರಳ ಸಮಾರಂಭದಲ್ಲಿ ಮಾತನಾಡಿ, ವಾಲೀಕಾರ್ ಕಟ್ಟಿದ ಜೀವನ ಮೌಲ್ಯವು ಈ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದ್ದು ಆ ಚಿಂತನೆಗಳ ದಾರಿಯಲ್ಲಿ ಸಮಾಜವನ್ನು ಬೆಳೆಸಲು ಅವರ ಹೆಸರಿನಲ್ಲಿ ಕಟ್ಟಿದ ಸಂಸ್ಥೆಗೆ ಶಿಷ್ಯಂದಿರು ಮತ್ತು ಅಭಿಮಾನಿಗಳು ನೀಡುವ ದೇಣಿಗೆ ಮತ್ತು ಸಹಕಾರದಿಂದ ಚೆನ್ನಣ್ಣ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಸಾಧ್ಯ ಎಂದು ಹೇಳಿದರು.

ಈಗಾಗಲೇ ರಾಜ್ಯ ಸರ್ಕಾರವು ಡಾ. ಚನ್ನಣ್ಣ ವಾಲೀಕಾರ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಲು ಮುಂದಾಗಿರುವುದು ಸಂತಸದ ವಿಷಯ. ಚುನಾವಣೆ ಮುಗಿದ ಕೂಡಲೇ ಟ್ರಸ್ಟಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಕ್ರಿಯಾಶೀಲ ಕಾರ್ಯ ಚಟುವಟಿಕೆ ಪ್ರಾರಂಭಿಸಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ನೂತನ ಸದಸ್ಯರಾಗಿ ನೇಮಕ ಹೊಂದಿದ ಸಾಹಿತಿ, ಸಂಘಟಕ ಬಿ.ಎಚ್ ನಿರಗುಡಿ ಅವರು ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ ಯಾವುದೇ ಸ್ಥಾನಮಾನಗಳು ಆ ಭಾಗದ ಅಭಿವೃದ್ಧಿಗೆ ನೆರವಾಗಬೇಕಾಗಿದೆ.ಚೆನ್ನಣ್ಣರ ಮೌಲಿಕ ಬದುಕು ನಮಗೆಲ್ಲ ಪ್ರೇರಣೆಯಾಗಿದೆ,

ಸರಕಾರದ ಟ್ರಸ್ಟ್ ರಚನೆಯಿಂದ ಮತ್ತು ಖಾಸಗಿಯಾಗಿ ನಡೆಸುವ ಈ ಸಂಸ್ಥೆಯಿಂದ ಸಮಾಜಕ್ಕೆ ಚೆನ್ನಣ್ಣನ ಚಿಂತನೆಗಳನ್ನು ತಿಳಿಸುವ ಪ್ರಯತ್ನವಾಗಲಿ ಎಂದು ಆಶಿಸಿದರು. ವಾಲಿಕಾರ್ ಹೆಸರಿನಲ್ಲಿ ಸ್ವಾಮಿರಾವ್ ಕುಲಕರ್ಣಿ ಮತ್ತು ಸಮಾನ ಮನಸ್ಕ ಸಾಹಿತಿಗಳು ಖಾಸಗಿಯಾಗಿ ಪ್ರಾರಂಭಿಸಿದ ಸಂಸ್ಥೆ ಇಂದು ಚೆನ್ನಣ್ಣನ ಸಂದೇಶಗಳನ್ನು ನಾಡಿಗೆ ಪಸರಿಸುವ ಉತ್ತಮ ಕೆಲಸವನ್ನು ಮಾಡಿ ವ್ಯೋಮಾಯೋಮ ವಾರ್ಷಿಕ ಪ್ರಶಸ್ತಿ ಪ್ರದಾನ, ಚೆನ್ನಣ್ಣನ ಸಾಹಿತ್ಯದ ಬಗ್ಗೆ ಉಪನ್ಯಾಸ- ಚರ್ಚೆಯನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮ ಕಾರ್ಯವಾಗಿದ್ದು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಚೆನ್ನಣ್ಣನ ಶಿಷ್ಯ ಬಳಗ ಮತ್ತು ಅಭಿಮಾನಿಗಳು ಸಂಸ್ಥೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಚೆನ್ನಣ್ಣವರದು ಪ್ರೇರಣದಾಯಿವ್ಯಕ್ತಿತ್ವವಾಗಿದ್ದು ಕವಿಯಾಗಿ ಮತ್ತು ಸಾಹಿತಿಯಾಗಿ ಉತ್ತಮ ಸಮಾಜವನ್ನು ಕಟ್ಟಿ ಬೆಳೆಸಲು ಪ್ರಯತ್ನ ಪಟ್ಟವರು ಎಂದು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಡಾ. ಕೆ ಎಸ್ ಬಂಧು ಮಾತನಾಡಿ ಚೆನ್ನಣ್ಣ ವಾಲಿಕಾರ್ ತಮ್ಮ ಬದುಕಿನಲ್ಲಿ ಇತರರನ್ನು ಬೆಳೆಸುವುದರ ಮೂಲಕವೇ ಸಂತಸ ಕಂಡವರು. ಅವರು ಕಟ್ಟಿದ ಶಿಷ್ಯವರ್ಗವು ಇವತ್ತು ನಾಡಿನ ಉದ್ದಗಲಕ್ಕೂ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಆದ ಹೆಸರನ್ನು ಉಳಿಸಿಕೊಂಡು ಬೆಳೆಯುತ್ತಿರುವುದು ಹೆಮ್ಮೆ. ಭೌತಿಕವಾಗಿ ಚೆನ್ನಣ್ಣ ನಮ್ಮೊಡನೆ ಇಲ್ಲದಿದ್ದರೂ ಅವರ ಆದರ್ಶವನ್ನು ಶಿಷ್ಯರ ಮೂಲಕ ಈಗ ಪಸರಿಸಲಾಗುತ್ತಿದೆ ಎಂದು ಹೇಳಿದರು.ಹಿರಿಯ ಸಾಹಿತಿ ಡಾ. ಚಿ.ಸಿ ನಿಂಗಣ್ಣ ಸ್ವಾಗತಿಸಿ ಮಾತನಾಡಿದರು. ಸಂಸ್ಥೆಯ ಕೋಶಾಧಿಕಾರಿ ನ್ಯಾಯವಾದಿ ಅಪ್ಪಾಸಾಹೇಬ್ ವಾಲಿಕಾರ್, ಶ್ರೀಮತಿ ಅಮೃತಾ ದೇಶಪಾಂಡೆ ಉಪಸ್ಥಿತರಿದ್ದರು.