ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಸಂತೋಷ ಎನ್ನುವುದನ್ನು ಇನ್ನೊಬ್ಬರ ಮುಖದಲ್ಲಿ ಕಂಡಾಗ ನಾವೂ ಕೂಡ ಸುಖಿಯಾಗಿರಲು ಸಾಧ್ಯ. ಆದ್ದರಿಂದಲೇ ಡಾ.ಪ್ರಭಾಕರ ಕೋರೆ ಅವರು ಎಲ್ಲವನ್ನು ಸಾಧ್ಯವಾಗಿಸಿದ್ದಾರೆ ಎಂದು ಹಿರಿಯ ನಟ ರವಿಚಂದ್ರನ್ ಹೇಳಿದರು.ಡಾ.ಪ್ರಭಾಕರ ಕೋರೆ ಅವರ ಒಡೆತನದ ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ ಹಾಗೂ ಕೆಎಲ್ಇ ಸಂಸ್ಥೆಯ ಎಸ್.ಸಿ.ಪಾಟೀಲ ಕನ್ನಡ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣದ ಜೊತೆಗೆ ಬದುಕು ನೀಡಿ, ಅವರ ಬಾಳಿಗೆ ಬೆಳಕಾಗಿದ್ದಾರೆ. ಎಲ್ಲವೂ ಸಾಧ್ಯವಾದದ್ದು, ಕೋರೆ ಅವರು ಇನ್ನೊಬ್ಬರ ಮುಖದಲ್ಲಿ ನಗು ಕಂಡವರು. ನಮ್ಮ ಮನೆ ಪಕ್ಕ ಕೆಎಲ್ಇ ಕಾಲೇಜು ಇದೆ. ಅತಿಥಿಗಳಿಗೆ ಪ್ರೀತಿ ಎಂದರೆ ಕೋರೆ ಅವರನ್ನು ನೋಡಿ ಕಲಿಬೇಕು. ಕನ್ನಡ ಹೋರಾಟಕ್ಕೆ ನಾವು ಸದಾ ಸಿದ್ಧ. ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಸ್ವಚ್ಚವಾಗಿರುತ್ತದೆ. ಸಾಧನೆಗಳು ನಿರಂತರವಾಗಿರುತ್ತವೆ. ತಂದೆ ಸಮಾನರಾದ ಡಾ.ಕೋರೆ ಅವರ ಪ್ರೀತಿ, ವಾತ್ಸಲ್ಯ ಹಾಗೂ ಅವರ ಸಾಧನೆ ಇಂದಿನ ಜನರಿಗೆ ಪ್ರೇರಣಾದಾಯಿ ಎಂದರು.ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಅವರು ಮಾತನಾಡಿ, ಪುಟ್ಟ ಹಳ್ಳಿಯಲ್ಲಿ ಎಲ್ಲ ಸೌಲಭ್ಯವಿರುವುದು ಅಪರೂಪ. ಆದರೆ ಇಲ್ಲಿ ಎಲ್ಲವೂ ಇದೆ. ಹಳ್ಳಿಗಳನ್ನು ಉದ್ಧಾರ ಮಾಡಿದರೆ ನಗರೀಕರಣವನ್ನು ತಡೆಗಟ್ಟಬಹುದು ಎಂಬುವುದಕ್ಕೆ ಅಂಕಲಿ ಗ್ರಾಮ ಒಳ್ಳೆಯ ಉದಾಹರಣೆ. ಪ್ರತಿಯೊಬ್ಬರು ಹುಟ್ಟಿದ ಹಾಗೂ ಕಲಿತ ಶಾಲೆಗೆ ಋಣಿಯಾಗಿರಬೇಕು ಅದರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದ ಅವರು, ೨೦೦೭ರಲ್ಲಿ ಬೆಳಗಾವಿಯಲ್ಲಿ ಮರೆಯಲಾರದ ಘಟನೆ ನನ್ನ ಜೀವನದಲ್ಲಿ ನಡೆದಿದೆ. ಆಗ ಕೋರೆಯವರು ಮಾತಾಡ ಮಾತಾಡ ಮಲ್ಲಿಗೆ ಚಿತ್ರದ ಯಶಸ್ವಿಗಾಗಿ ದೊಡ್ಡದಾದ ವಿಜಯೋತ್ಸವ ಮಾಡಿದ್ದರು ಎಂದು ಸ್ಮರಿಸಿದರು. ಮಾತಾಡ ಮಾತಾಡ ಮಲ್ಲಿಗೆ ವಿಜಯೋತ್ಸವ. ಲಕ್ಷ್ಮಿ ಮತ್ತು ಸರಸ್ವತಿ ಕೂಡಿರುವುದು ಕಠಿಣ. ನಮ್ಮ ಊರುಗಳನ್ನೆ ಅಭಿವೃದ್ಧಿ ಮಾಡಿದರೆ ನಗರೀಕರಣ ತಡೆಯಬಹುದು ಎಂದರು.
ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುಟ್ಟ ಗ್ರಾಮ ಅಂಕಲಿಯ ಚಿತ್ರಣವನ್ನೇ ಕೆಎಲ್ಇ ಸಂಸ್ಥೆ ಬದಲಾಯಿಸಿದೆ. 314 ಸಂಸ್ಥೆಗಳ ಮೂಲಕ 1.5 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಮೈಸೂರಿನ ನಾಡಿನವರಿಗೆ ರಾಜರ ಕೃಪೆಯಿಂದ ಎಲ್ಲ ವ್ಯವಸ್ಥೆ ಸಿಕ್ಕಿದೆ. ಆದರೆ ಮುಂಬೈ ಪ್ರೆಸಿಡೆನ್ಸಿಯಲ್ಲಿ ಶಿಕ್ಷಣ ಪಡೆಯುವುದು ದುರ್ಲಬವಾಗಿತ್ತು. 7 ಜನ ಶಿಕ್ಷಕರಿಂದ ಪ್ರಾರಂಭವಾದ ಸಂಸ್ಥೆ ಈ ಭಾಗದಲ್ಲಿ ಕನ್ನಡದ ಕಂಪು ಪಸರಿಸಿದೆ. ಮಲೇಶಿಯಾದ ವಿದ್ಯಾರ್ಥಿಗಳಿಗೂ ವೈದ್ಯಕೀಯ ಶಿಕ್ಷಣವನ್ನು ನೀಡುತ್ತಿದೆ. ಈ ಭಾಗದಲ್ಲಿ ಶಿಕ್ಷಣದ ಜೊತೆಗೆ ಆರೋಗ್ಯ ಕೊರತೆ ನೀಗಿಸಲಾಗಿದೆ. ರೈತರೇ ಅಧಿಕವಿರುವ ಈ ಭಾಗದಲ್ಲಿ 2400 ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸಿ ಸೇವೆ ನೀಡಲಾಗುತ್ತಿದೆ. ಪಕ್ಷ ಬೇದ ಇಲ್ಲದೇ ಸಂಸ್ಥೆಯನ್ನು ಬೆಳೆಸಲಾಗುತ್ತಿದೆ ಎಂದು ಹೇಳಿದರು.ನಟ ಡಾಲಿ ಧನಂಜಯ ಅವರು ಮಾತನಾಡಿ, ತುಂಬಾ ಪ್ರೀತಿ ಸಿಕ್ಕಾಗ ಮಾತೆ ಬರಲ್ಲ. ಕೆಎಲ್ಇ ಗೊತ್ತುಇತ್ತು ಆದರೆ ಕನ್ನಡ ಉಳಿಯಲಿಕ್ಕೆ ಹೇಗೆ ಕಾರ್ಯ ಮಾಡಿದ್ದಾರೆ. ಕನ್ನಡಕ್ಕೆ ಆದ್ಯತೆ ನೀಡಿರುವುದು ನಮಗೆ ಬಹಳ ಖುಷಿಪಡಿಸಿದೆ. ಹಳ್ಳಿಗಳಲ್ಲಿ ಪಟ್ಟಣಗಳಲ್ಲಿ ಕುಟುಂಬಗಳು ಚಿತ್ರ ನೋಡಲು ಸಾಧ್ಯವಿಲ್ಲ. ಒಳ್ಳೆಯ ವ್ಯವಸ್ಥೆ ಕೊಟ್ಟರೆ ಕುಟುಂಬ ಸಮೇತ ನೋಡಬಹುದು. ಮಯೂರ ಚಿತ್ರ ಮಂದಿರ ಎಲ್ಲರಿಗೂ ಮಾದರಿ. ಒಂದೇ ಕಡೆ ಕಾರ್ಯನಿರ್ವಹಿಸುವುದು ಬಹಳ ಕಠಿಣ. ಕನ್ನಡ ಕಲಾವಿದರ ಮೇಲೆ ನಿಮ್ಮ ಅಭಿಮಾನ ಹೀಗೆ ಇರಲಿ ಎಂದು ಕೋರಿದರು.
ಮಂಡ್ಯ ರಮೇಶ, ನಟಿಯರಾದ ಅನುಪ್ರಭಾಕರ, ಅಮೂಲ್ಯಾ, ಸಪ್ತಮಿ ಗೌಡಾ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ವಹಿಸಿದ್ದರು. ವೇದಿಕೆ ಮೇಲೆ ಮುರುಗೇಶ ನಿರಾಣಿ, ಗಣೇಶ ಹುಕ್ಕೇರಿ, ಧುರ್ಯೋಧನ ಐಹೊಳೆ, ಸಂಸ್ಥೆಯ ಕಾರ್ಯದರ್ಶಿ ಬಿ ಜಿ ದೇಸಾಯಿ, ಜಯಣ್ಣ (ರಾಜು) ಮುನವಳ್ಳಿ ಉಪಸ್ಥಿತರಿದ್ದರು.ಸಂಗೀತ ನಿರ್ದೇಶಕರು ಹಾಗೂ ಹಿನ್ನಲೆ ಗಾಯಕರಾದ ವಿಜಯ ಪ್ರಕಾಶ ಅವರು ಕನ್ನಡದ ವಿವಿಧ ಹಾಡುಗಳನ್ನು ಹಾಡುವದರ ಮೂಲಕ ನೆರೆದಿದ್ದ ಜನರನ್ನು ಮನರಂಜಿಸಿದರು. ಹಳೆಯ ಹಾಡು ಜೀವ ತುಂಬಿ ಹಾಡಿದಾಗ ಯುವ ಜನರು ಕುಣಿದು ಕುಪ್ಪಳಿಸಿದರು.
ಸಮಾರಂಭದಲ್ಲಿ ಮಯೂರ ಚಿತ್ರಮಂದಿರದ ಮಾಲಕರಾದ ಆಶಾ ಪ್ರಭಾಕರ ಕೋರೆ, ಪ್ರೀತಿ ದೊಡವಾಡ, ಕೆಎಲ್ಇ ಸಂಸ್ಥೆ, ಚಿದಾನಂದ ಬಸವಪ್ರಭು ಕೋರೆ ಸಕ್ಕರೆ ಕಾರಖಾನೆ, ಶಿವಶಕ್ತಿ ಶುಗರ್ಸ, ಡಾ. ಪ್ರಭಾಕರ ಕೋರೆ ಸಹಕಾರ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ಮಹೇಶ ಗುರನಗೌಡರ ನಿರೂಪಿಸಿದರು.
ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಮುಖ್ಯ ಕಾರಣ ಕೆಎಲ್ಇ ಸಂಸ್ಥೆ. ಇಂದು ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮ ನಿಮಿತ್ತ ಎಲ್ಲ ಕಲಾವಿದ, ದಿಗ್ಗಜರನ್ನು ಅಂಕಲಿ ಎಂಬ ಪುಟ್ಟ ಹಳ್ಳಿಗೆ ಕರೆಸಬೇಕು. ನಮ್ಮ ಚಿತ್ರರಂಗ, ಕಲಾರಂಗ ಯಾವಾಗಲೂ ಜೀವಂತವಾಗಿ ಉಳಿಯಬೇಕೆಂಬ ಹಂಬಲದಿಂದ ನಿರಂತರ ಕನ್ನಡ ಸೇವೆ ಮಾಡಲಾಗುತ್ತಿದೆ. ಎಲ್ಲ ಕಡೆ ಚಿತ್ರ ಮಂದಿರಗಳು ಮುಚ್ಚಿವೆ ಆದರೆ ಸಣ್ಣ ಹಳ್ಳಿಯಲ್ಲಿ ಇನ್ನೂ ಚಾಲನೆಯಲ್ಲಿದ್ದು, ಕನ್ನಡ ಉಳಿಯಲು ಕಂಕಣಬದ್ಧವಾಗಿದೆ. ಡಾ.ಪ್ರಭಾಕರ ಕೋರೆ, ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ