ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಭೂಮಿಗೆ ಬಿದ್ಧ ಫಲ, ಎದೆಗೆ ಬಿದ್ದ ಅಕ್ಷರ ಎರಡೂ ಕೂಡ ಫಲಕೊಡುತ್ತವೆ. ನಾವು ಫಲಕೊಡುವ ವ್ಯಕ್ತಿಗಳಾಗಬೇಕು. ಬದುಕಿನಲ್ಲಿ ಶ್ರಮಪಡಬೇಕು. ಹುಟ್ಟು ಸಾವುಗಳ ನಡುವಿನ ಈ ಬದುಕು ಕ್ಷಣಿಕ ಇದನ್ನು ಅರ್ಥಪೂರ್ಣಗೊಳಿಸಬೇಕು ಡಾ.ಪ್ರಭಾಕರ ಕೋರೆಯವರು ಸಮಾಜಮುಖಿಯಾಗಿ ಬದುಕನ್ನು ಭವ್ಯತೆಗೇರಿಸಿಕೊಂಡವರು ಎಂದು ಕೊಪ್ಪಳ ಗವಿಸಿದ್ಧೇಶ್ವರಮಠದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು.ತಾಲೂಕಿನ ಅಂಕಲಿಯಲ್ಲಿ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ 78ನೇ ಹುಟ್ಟಹಬ್ಬ ನಿಮಿತ್ತ ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ, ಬಾವನ್ ಸೌಂದತ್ತಿಯ ಶಿವಶಕ್ತಿ ಶುಗರ್ಸ್ ಲಿಮಿಡೆಟ್, ಯಡ್ರಾಂವದ ಹರ್ಮ್ ಡಿಸ್ಟಿಲರಿ ಪ್ರೈವೈಟ್ ಲಿಮಿಡೆಟ್, ಅಂಕಲಿಯ ಡಾ.ಪ್ರಭಾಕರ ಕೋರೆ ಕೋ ಆಪ್ ರೇಟಿವ್ ಕ್ರೇಡಿಟ್ ಸೊಸೈಯಿಟಿ, ಕೆಎಲ್‌ಇ ಸಂಸ್ಥೆಯ ಅಂಗ ಸಂಸ್ಥೆಗಳು, ಜನಶಕ್ತಿ ಫೌಂಡೇಶನ್, ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ಮೊಬೈಲ್ ಗೀಳು ಬಹಳ ಕೆಟ್ಟದ್ದು, ಮೊಬೈಲ್ ಹೇಳುತ್ತೆ ತಲೆ ತಗ್ಗಿಸುವುದನ್ನು, ಪುಸ್ತಕ ಹೇಳುತ್ತೆ ತಲೆ ಎತ್ತಿ ನಿಲ್ಲುವುದನ್ನು ಕಳಿಸುತ್ತದೆ. ಪ್ರಭಾಕರ ಎಂಬ ಹೆಸರಿನಲ್ಲಿಯೇ ಬೆಳಕು ಅಡಗಿದೆ. ಅವರು ಸಮಾಜಕ್ಕೆ ಮಹಾಬೆಳಕಾಗಿದ್ದಾರೆ. ನಾವು ಅಳಿದರೂ ಸಮಾಜವು ನಮ್ಮ ಸ್ಮರಿಸುವಂತ ಕೆಲಸ ಮಾಡಬೇಕು ಎಂದು ತಿಳಿಸಿದರು. ನನ್ನದು ಎಂಬುವುದನ್ನು ಮರೆತು ಎಲ್ಲವೂ ಸಮಾಜದ್ದು, ದೇವರು ಕೊಟ್ಟದ್ದು ಎಂಬ ಭಾವ ಹೃದಯದಲ್ಲಿ ಮಡುಗಟ್ಟಿದರೇ ಬದುಕು ಸುಂದರ. ಸಾವಿಗೆ ಭಯಪಡದೇ ನಿಸರ್ಗ ಕೊಟ್ಟ ಬದುಕನ್ನು ಅಮರವನ್ನಾಗಿ ಮಾಡಬೇಕು. ಜ್ಞಾನ ಹಾಗೂ ಆತ್ಮಸಂಪತ್ತನ್ನು ಗಳಿಸಬೇಕು. ಪುಣ್ಯವನ್ನು ಪಡೆಯುವುದು ಹಾಗೂ ಸಮಾಜಕ್ಕೆ ಅದರ ಫಲಗಳನ್ನು ಕೊಟ್ಟುಹೋಗುವ ಕೆಲಸ ಮಾಡಬೇಕು ಎಂದರು.ಕೊಲ್ಲಾಪುರ ಜೈನಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಯಾರೂ ಬಡವರಾಗಿ ಸಾಯಬಾರದು. ಸಮಾಜ ಸೇವೆ ಮುಖ್ಯವಾಗಬೇಕು. ಪ್ರೀತಿ, ವಾತ್ಸಲ್ಯ ಬಹಳಷ್ಟಿದೆ. ಜೀವನದಲ್ಲಿ ಹೋರಾಟವಿದೆ. ಸಮಾಜದ ಬಗ್ಗೆ ಕಳಕಳಿ ಇದೆ. ವಯಸ್ಸಾದರೂ ಕೂಡ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತ ಎಲ್ಲರ ಮೇಲೆ ವಿಶ್ವಾಸವಿಟ್ಟು ಮುನ್ನಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸಮಾರಂಭ ಉದ್ಘಾಟಿಸಿ ಮಾತನಾಡಿ, 40 ವರ್ಷಗಳಲ್ಲಿ ಕೆಎಲ್‌ಇ ಸಂಸ್ಥೆಯನ್ನು ಉತ್ತುಂಗಕ್ಕೇರಿಸಿ, ಕಲೆ, ಶಿಕ್ಷಣ, ಆರೋಗ್ಯ, ವೈದ್ಯಕೀಯ ಹಾಗೂ ಸಂಶೋಧನೆಯ ಮೂಲಕ ಜನಸೇವೆ ಮಾಡುತ್ತಿದ್ದಾರೆ. ಅವರಿಗೆ ಇನ್ನೂ ದೇವರು ಆಯುಷ್ಯಾರೋಗ್ಯ ದಯಪಾಲಿಸಲಿ ಎಂದು ಶುಭಹಾರೈಸಿದರು. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಕಿತ್ತೂರು ನಾಡಿಗೆ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಲು ಪ್ರಕಾಶ ಹುಕ್ಕೇರಿ ಕೊಡುಗೆಯಿದೆ. ಜನ್ಮ ಕೊಟ್ಟ ಊರಿನ ಋಣ, ತಂದೆ ತಾಯಿಯವನ್ನು ಸದಾ ಸ್ಮರಿಸುತ್ತೇನೆ. ನಮ್ಮ ತಂದೆ ಮರಾಠಿ ಶಾಲೆ ಪ್ರಾರಂಭಿಸಿದರು. ನಮ್ಮ ಕುಟುಂಬದಲ್ಲಿ ನಾನು ಕನ್ನಡ ಕಲಿತ ಮೊದಲಿಗ. ಶಿಕ್ಷಣದಲ್ಲಿ ಫೇಲಾದರೂ ನಾನು ಮುಂದುವರೆಸಿದೆ ಎಂದು ಸ್ಮರಿಸಿದರು.ಭಾಷಾ ಅಭಿಮಾನವಿರಲಿ, ದ್ವೇಷ ಬೇಡ. ನಾವು ಯಾವಾಗಲೂ ಎಲ್ಲ ಭಾಷೆಗಳನ್ನು ಪ್ರೀತಿಸುವವರು. ವಿಶ್ವಕನ್ನಡ ಸಮ್ಮೇಳನ ಮಾಡಿದ್ದೇವೆ. ಕನ್ನಡ ಭವನದ ಮೂಲಕ ಎಲ್ಲ ಭಾಷೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ. ಶಿಕ್ಷಣಕ್ಕೆ ಶ್ರೀಮಂತಿಕೆ, ಬಡತನ ಇರಲಿಲ್ಲ. ಆದರೂ ಇಂದಿನ ಶಿಕ್ಷಣ ವ್ಯತ್ಯಾಸವೆನಿಸುತ್ತಿದೆ ಎಂದರು. ಸಿನಿಮಾ ಹುಚ್ಚಿನಿಂದ ಹಳ್ಳಿಯಲ್ಲಿ ಸಿನಿಮಾ ಥೇಟರ್ ಮಾಡಿದೆ. ರಾಜ್ಯದಲ್ಲಿಯೇ ಇದೊಂದು ಥೇಟರ್ ಹಳ್ಳಿಯಲ್ಲಿಯೇ ನಡೆಯುತ್ತಿದೆ. ಕನ್ನಡ ಸಿನಿಮಾ ಹಾಕುವುದು ಕಠಿಣ ಇತ್ತು. ಕೇವಲ ಮರಾಠಿ ಇತ್ತು. ಈ ಭಾಗದಲ್ಲಿ ಕನ್ನಡ ಪಸರಿಸಲು ಮಯೂರ ಚಿತ್ರ ಮಂದಿರ ಕಾರಣ. ಮೊದಲನೇ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭ. ಚುನಾವಣೆ ಮೂಲಕ ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ, 84ರಲ್ಲಿ ಕಾರ್ಯಾಧ್ಯಕ್ಷರಾಗಿ ಬಂದೆ. ಶಿಕ್ಷಣ ಸಂಸ್ಥೆ ನಡೆಸಲು ಗೊತ್ತಿರಲಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ಉ.ಕ ಮಹಾರಾಷ್ಟ್ರ ಪ್ರತಿಯೊಂದು ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆ ಮಾಡಿದೆ. ನನ್ನ ಅಣ್ಣ ತೀರಿಕೊಂಡ ನಂತರ ಹೃದ್ರೋಗಕ್ಕೆ ಚಿಕಿತ್ಸೆ ನೀಡುವ ಸೌಲಭ್ಯ ಸೇರಿದಂತೆ 1000 ಸಾವಿರ ಹಾಸಿಗೆಗಳ ಮೂಲಕ 1996ರಲ್ಲಿ ಚಿಕಿತ್ಸೆ ಪ್ರಾರಂಭ ಮಾಡಿದೆ. ನಂತರ 1200 ಹಾಸಿಗೆಗಳ ಮೂಲಕ ಉಚಿತ ಚಿಕಿತ್ಸೆ ನೀಡಿದೆ. 1200 ಹಾಸಿಗೆಗಳ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಪ್ರಾರಂಭವಾಗುತ್ತಿದೆ. ಭಗವಂತ ನೀಡಿದ ಅವಕಾಶದಿಂದ ಸಂಸ್ಥೆಯನ್ನು ಬೆಳೆಸಿದೆ. ಹಲವಾರು ಸಂಘರ್ಷಗಳನ್ನು ಕಂಡೆ. ನನ್ನ ಶ್ರೀಮತಿಯವರು ಕೌಟುಂಬಿಕ ಜವಾಬ್ದಾರಿಯನ್ನು ಹೊತ್ತು, ಸಮಾಜಸೇವೆಗೆ ಅವಕಾಶ ಮಾಡಿಕೊಟ್ಟರು. ಕೆಎಲ್‌ಇ ಸಂಸ್ಥೆಯಿಂದ ನಾನು ಜೀವನದಲ್ಲಿ ಏನೆಲ್ಲವನ್ನೂ ಸಾಧಿಸಿದೆ, ಬೆಳೆದೆ ಎಂದರು.ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅಧ್ಯಕ್ಷೀಯ ನುಡಿಗಳನ್ನಾಡಿ, ಶಿಕ್ಷಣದಲ್ಲಿ ಫೇಲಾದ ವ್ಯಕ್ತಿ ಇಂದು ಹಲವಾರು ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ರ್‍ಯಾಂಕ್ ನೀಡುವ ವ್ಯಕ್ತಿಯಾಗಿ ಬೆಳೆದಿದ್ದಾರೆ. ಡಾ.ಕೋರೆ ಅವರು ಉ.ಕ ಭಾಗದಲ್ಲಿ ಸರ್ಕಾರಿ ಶಾಲೆಗಳು ಕಡಿಮೆ. ದಕ್ಷಿಣದಲ್ಲಿ ಮಹಾರಾಜರರಿಂದ ಸರ್ಕಾರಿ ಶಾಲೆಗಳ ಅಧಿಕವಾಗಿದ್ದವು. ಉತ್ತರದಲ್ಲಿ ಸಂಸ್ಥೆಗಳು ಶಿಕ್ಷಣ ನೀಡಿ ಇಂದು ಈ ಭಾಗವನ್ನು ಶೈಕ್ಷಣಿಕೆವಾಗಿ ಉತ್ತುಂಗಕ್ಕೇರಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಶಾಸಕರಾದ ರಾಜು ಕಾಗೆ, ಗಣೇಶ ಹುಕ್ಕೇರಿ ಮಾತನಾಡಿದರು. ಡಾ.ಪ್ರಭಾಕೊರ ಕೋರೆ ಕೋ-ಆಫ್‌ರೇಟಿವ್ ಕ್ರೆಡಿಟ್ ಸೊಸೈಟಿ ಅಂಕಲಿಯವರು ₹5 ಲಕ್ಷಗಳನ್ನು ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಅರ್ಪಿಸಿದರು.ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯವರಿಗೆ ಹಾಗೂ ಆಶಾ ಕೋರೆಯವರಿಗೆ ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕೋಡಿ ಹಾಗೂ ಡಾ.ಪ್ರಭಾಕರ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ. ಪದಾಧಿಕಾರಿಗಳು ಸತ್ಕರಿಸಿ, ಅಭಿನಂದಿಸಿದರು.ಮಾಜಿ ವಿಧಾನ ಪರಿಷತ್ತ ಸದಸ್ಯರಾದ ಮಹಾಂತೇಶ ಕವಟಗಿಮಠ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಮಹೇಶ ಗುರನಗೌಡರ, ಗಂಗಾ ಅರಭಾವಿ ನಿರೂಪಿಸಿದರು. ಡಿ.ಎಸ್.ಕರೋಶಿ ವಂದಿಸಿದರು.ಇದೇ ಸಂದರ್ಭದಲ್ಲಿ ಅಂಕಲಿಯಲ್ಲಿ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಿಂದ ಬೃಹತ್ ಉಚಿತ ತಪಾಸಣೆ ಜರುಗಿತು. 8800 ಜನರು ಪ್ರಯೋಜನ ಪಡೆದರು. 800 ಜನರಿಗೆ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿದೆ. ಅಂತೆಯೇ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 320ಕ್ಕೂ ಅಧಿಕ ರಕ್ತದಾನಿಗಳು ರಕ್ತದಾನ ಮಾಡಿದರು.ಅಂತೆಯೆ ಜಂಗೀ ನಿಖಾಲಿ ಕುಸ್ತಿಯನ್ನು ಆಯೋಜಿಸಲಾಗಿತ್ತು. 78 ಕುಸ್ತಿ ಪಟುಗಳು ದೇಶ ವಿದೇಶದಿಂದ ಆಗಮಿಸಿದ್ದರು. ವೇದಿಕೆಯ ಮೇಲೆ ಹುಟ್ಟುಹಬ್ಬ ಸಮಿತಿಯ ಅಧ್ಯಕ್ಷ ಬಿ.ಆರ್.ಪಾಟೀಲ, ಮಲ್ಲಿಕಾರ್ಜುನ ಕೋರೆ, ಭರತೇಶ ಬನವಣೆ, ಸುರೇಶ ಪಾಟೀಲ, ಶಂಕರಣ್ಣ ಮುನವಳ್ಳಿ, ಜಯಾನಂದ ಮುನವಳ್ಳಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಆಸ್ಪತ್ರೆಯ ನಿರ್ದೇಶಕರಾದ ನಿ.ಕರ್ನಲ್ ಡಾ. ಎಂ.ದಯಾನಂದ, ಡಾ.ವಿ.ಡಿ.ಪಾಟೀಲ, ಡಾ.ನಿರಂಜನಾ ಮಹಾಂತಶೆಟ್ಟಿ, ಡಾ.ಪ್ರೀತಿ ದೊಡವಾಡ ಉಪಸ್ಥಿತರಿದ್ದರು.ಒಬ್ಬ ವ್ಯಕ್ತಿಯ ಹುಟ್ಟು ಹಬ್ಬವಾಗಬೇಕು. ಪ್ರಕೃತಿಯ ಪ್ರತಿಯೊಂದರಲ್ಲಿಯೂ ನಿತ್ಯೋತ್ಸವವಿದೆ. ಹಾಗಾಗಿ ಮನುಷ್ಯನ ಬದುಕಿನಲ್ಲಿಯೂ ನಿತ್ಯೋತ್ಸವ ಇರಬೇಕು. ದೇವರು ಕೊಟ್ಟ ಈ ಬದುಕನ್ನು ಹಸನಾಗಿಸಬೇಕಲು. ದೇವರು ಕೊಟ್ಟದ್ದನ್ನು ನಾವು ಸ್ವೀಕರಿಸಿ ಸಮಾಜಕ್ಕೆ ಸರ್ವೋತ್ತಮವಾದುದನ್ನು ನೀಡಬೇಕು. ಡಾ.ಕೋರೆಯವರು ಬದುಕಿನುದ್ದಕ್ಕೂ ಅರ್ಪಿಸುವ ಕೆಲಸ ಮಾಡಿದ್ದು, ತಾವು ಬದುಕಿನಲ್ಲಿ ಪಡೆದ ಭಾಗ್ಯವನ್ನು ಸಮಾಜಕ್ಕೆ ಹಂಚಿದ್ದಾರೆ. ಅವರು 100 ವರ್ಷ ಆರೋಗ್ಯವಾಗಿ ಬದುಕಿ ಸಮಾಜಕ್ಕೆ ಮತ್ತುಷ್ಟು ಕೊಡುಗೆ ನೀಡಲಿ.
-ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಕೊಪ್ಪಳ ಗವಿಸಿದ್ಧೇಶ್ವರಮಠ.41 ವರ್ಷದಲ್ಲಿ 310ಕ್ಕೂ ಅಧಿಕ ಅಂಗಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಬೆಳಗಾವಿ ಮತ್ತು ರಾಜ್ಯವನ್ನು ಶೈಕ್ಷಣಿಕವಾಗಿ ಉತ್ತುಂಗಕ್ಕೇರಿಸಿದ್ದಾರೆ. ಅನೇಕ ಮಹಾನರು ಆಗಿ ಹೋಗಿದ್ದಾರೆ. ಆದರಂತೆ ಕೋರೆ ಅವರ ಕೊಡುಗೆ ಅಪಾರ. ಕನಸ ಕಾಣಬೇಕು. ಅದನ್ನು ಪೂರ್ತಿ ಮಾಡಬೇಕು. ಅವರು ಯುವಕರಿಗೆ ಪ್ರೇರಣಾದಾಯಿ. 78 ವರ್ಷದಲ್ಲಿಯೂ ಯುವಕರಂತೆ ಕಾರ್ಯ. ಡಾ.ಕೋರೆಯವರು ಎಲ್ಲ ಕಷ್ಟ-ಸುಖಗಳನ್ನು ಎದುರಿಸಿ ಸಮಾಜಕ್ಕೆ ಮೌಲಿಕವಾದುದನ್ನು ಕೊಟ್ಟಿದ್ದಾರೆ. ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೆ ಅವರದು ಬಹುದೊಡ್ಡ ಕೊಡುಗೆ.
-ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಕೊಲ್ಲಾಪುರ ಜೈನಮಠ.ಸಪ್ತರ್ಷಿಗಳ ಆಶೀರ್ವಾದ, ಹಿರಿಯರ ಮಾರ್ಗದರ್ಶನ ದಾನಿಗಳ ಮಹಾದಾನಿಗಳ ಕೊಡುಗೆ ನನ್ನ ಬೆಳವಣಿಗೆ ಬಹಳವಿದೆ. ಅವರೆಲ್ಲರ ಕೃಪೆಯಿಂದ ಕೆಎಲ್‌ಇ ಸಂಸ್ಥೆಯು ಬೆಳೆದಿದೆ. ನಾನು ಸದಾ ನನ್ನೂರಿಗೆ ಸಂಸ್ಥೆಗೆ ಚಿರಋಣಿಯಾಗಿದ್ದೇನೆ. ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ಅಂಕಲಿಯಲ್ಲಿ ಬಹಳ ಅರ್ಥಪೂರ್ಣವಾಗಿ ಆಯೋಜಿಸುತ್ತ ಬಂದಿದ್ದಾರೆ. ಎಲ್ಲ ಸಂಘಟಕರಿಗೆ ಅನಂತ ಕೃತಜ್ಞತೆಗಳು.
-ಡಾ.ಪ್ರಭಾಕರ ಕೋರೆ, ಕೆಎಲ್‌ಇ ಕಾರ್ಯಾಧ್ಯಕ್ಷರು.;Resize=(128,128))
;Resize=(128,128))
;Resize=(128,128))