ಹಿರೇಮಠ ಪ್ರತಿಷ್ಠಾನದ ವತಿಯಿಂದ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಸಾಹಿತಿ ಹಾಗೂ ವೈದ್ಯರಾದ ಡಾ. ದಯಾನಂದ ನೂಲಿ ಅವರಿಗೆ 2026ನೇ ಸಾಲಿನ ಸಾಹಿತ್ಯ ಪುರಸ್ಕಾರ ಮತ್ತು ಡಾ. ಅವಿನಾಶ ಕವಿ ಅವರಿಗೆ ಯುವ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.

ಧಾರವಾಡ:

ಸಂ.ಶಿ. ಭೂಸನೂರಮಠ ಪ್ರತಿಷ್ಠಾನದ ವತಿಯಿಂದ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಸಾಹಿತಿ ಹಾಗೂ ವೈದ್ಯರಾದ ಡಾ. ದಯಾನಂದ ನೂಲಿ ಅವರಿಗೆ 2026ನೇ ಸಾಲಿನ ಸಾಹಿತ್ಯ ಪುರಸ್ಕಾರ ಮತ್ತು ಡಾ. ಅವಿನಾಶ ಕವಿ ಅವರಿಗೆ ಯುವ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ದಯಾನಂದ ನೂಲಿ, ಕನ್ನಡ ಭಾಷಿಕರಿಗೆ ಸಂ.ಶಿ. ಭೂಸನೂರಮಠ ಅವರು ಅರಿವಿನ ಬೆಳಕನ್ನು ನೀಡಿದ ಮಹಾನ ಚೇತನ. ಅವರು ಬರೆದ ಭವ್ಯಮಾನವ ಕೃತಿಯು ತುಂಬಾ ಉತ್ಕೃಷ್ಟ ಗ್ರಂಥ. ಇಷ್ಟಲಿಂಗ, ಶಿವಾನುಭವ ಮತ್ತು ಅದರಲ್ಲಿರುವ ವೈಜ್ಞಾನಿಕ ವಿಚಾರಗಳನ್ನು ಇಂದಿನ ತಲೆಮಾರಿನ ಯುವಕರಿಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಭೂಸನೂರಮಠರು ತುಂಬ ವಿಸ್ತಾರ ಸಂಶೋಧನೆ ಮತ್ತು ಅನುಭಾವಪೂರ್ಣ ಸಾಹಿತ್ಯ ದಾಖಲಿಸುವ ಮೂಲಕ ಸಾರ್ವಕಾಲಿಕ ಸತ್ಯವನ್ನು ತಿಳಿಸಿದ್ದಾರೆ. ಶಿವಾನುಭವ ಮತ್ತು ಇಷ್ಟಲಿಂಗದ ಮಹತ್ವವನ್ನು ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಲು ಸಂತಸ ಎನಿಸಿದೆ ಎಂದರು.

ಯುವ ಸಾಹಿತ್ಯ ಪುರಸ್ಕೃತ ಡಾ. ಅವಿನಾಶ ಕವಿ, ಶೂನ್ಯ ಸಂಪಾದನೆ ಕುರಿತು ಉಪನ್ಯಾಸ ನೀಡಿ ಶೂನ್ಯ ಸಂಪಾದನೆ ಪರಾಮರ್ಶೆಯು ವಚನ ಸಾಹಿತ್ಯದ ತಾತ್ವಿಕ ಸಾರವನ್ನು ಬಿಂಬಿಸುವ ಮಹತ್ವದ ಕೃತಿ. ಗದ್ಯ, ನಾಟಕ ಮತ್ತು ಸಂವಾದದ ಮಾದರಿಯಲ್ಲಿ ರಚನೆಯಾಗಿದೆ. ಪ್ಲೇಟೋ, ಸಾಕ್ರಟೀಸ ಅವರ ಸಂವಾದದ ಮಾದರಿಯಲ್ಲಿ 15 ಮತ್ತು 16ನೇ ಶತಮಾನದಲ್ಲಿ ನಡೆದ ಅನುಭಾವದ ಚಿಂತನೆಗಳು ವೈಜ್ಞಾನಿಕವಾಗಿ ಮತ್ತು ತಾತ್ವಿಕವಾಗಿ ಈ ಗ್ರಂಥದಲ್ಲಿ ದಾಖಲಾಗಿದೆ. ಅನೇಕ ಅನುಭಾವಿಗಳ ನೆರವಿನಿಂದ ಅದರಲ್ಲಿರುವ ಉತ್ತಮ ಅಂಶಗಳು ಕಾಲದಿಂದ ಕಾಲಕ್ಕೆ ಬೆಳೆದು ಬಂದ ಬಗೆಯನ್ನು ವಿವರಿಸಿದರು. ‘ಶೂನ್ಯ ಎಂದರೆ ಎಲ್ಲವನ್ನು ಒಳಗೊಂಡಿದ್ದು, ಪರಿಪೂರ್ಣ ಪರಬ್ರಹ್ಮ ಅಥವಾ ಬಯಲು ಎಂಬ ಅರ್ಥವನ್ನು ನೀಡುತ್ತದೆ ಎಂದು ಹೇಳಿದರು.

ಸಾನ್ನಿಧ್ಯವನ್ನು ತೋಂಟದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸಿದ್ದರು. ಸಾಹಿತಿಗಳಾದ ಡಾ. ಶರಣಮ್ಮ ಗೊರೇಬಾಳ ಡಾ. ದಯಾನಂದ ನೂಲಿ ಅವರ, ಡಾ. ರುದ್ರೇಶ ಮೇಟಿ ಡಾ. ಅವಿನಾಶ ಕವಿ ಅವರ ಸಾಹಿತ್ಯ ಕೃತಿಗಳ ಕುರಿತು ಮಾತನಾಡಿದರು. ಪ್ರೊ. ಶಶಿಧರ ತೋಡಕರ ಹಿರಿಯ ನಾಗರಿಕರ ಪುರಸ್ಕಾರಕ್ಕೆ ಪಾತ್ರರಾದ ರಾಮಚಂದ್ರ ಧೊಂಗಡಿ ಸಾಧನೆಯ ಕುರಿತು ಅಭಿನಂದನ ನುಡಿ ಹೇಳಿದರು. ಭೂಸನೂರಮಠ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರೊ.ಎಸ್. ಕೆ. ಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಗಾಯತ್ರಿ ಸರದೇಶಪಾಂಡೆ ಪ್ರಾರ್ಥಿಸಿದರು. ಡಾ. ಸುಮಿತ್ರಾ ಕಾಡದೇವರಮಠ ಗೀತಗಾಯನ ಮಾಡಿದರು. ಕೋಶಾಧ್ಯಕ್ಷ ಡಾ. ಕುಮಾರ ಹಿರೇಮಠ ವಂದಿಸಿದರು. ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು.ಪ್ರೊ. ಸುಭಾಸ ಭೂಸನೂರಮಠ, ಪ್ರೊ. ಡಿ.ಎಂ. ಹಿರೇಮಠ ಮತ್ತಿತರರು ಇದ್ದರು.