ಡಾ.ಜಿ.ಶಂಕರ್ 70: ‘ಸಮಾಜಸೇವಾ ಹರಿಕಾರ’ ಕೃತಿ ಅನಾವರಣ

| Published : Oct 07 2025, 01:03 AM IST

ಸಾರಾಂಶ

ಉದ್ಯಮಿ, ನಾಡೋಜ ಡಾ.ಜಿ.ಶಂಕರ್ ಅವರಿಗೆ 70 ತುಂಬಿದ ಹಿನ್ನೆಲೆಯಲ್ಲಿ ಅವರ ಜೀವನ ಸಾಧನೆಗಳ ಕುರಿತ ‘ಸಮಾಜಸೇವಾ ಹರಿಕಾರ’ ಎಂಬ ಪುಸ್ತಕವನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉದ್ಯಮಿ, ನಾಡೋಜ ಡಾ.ಜಿ.ಶಂಕರ್ ಅವರಿಗೆ 70 ತುಂಬಿದ ಹಿನ್ನೆಲೆಯಲ್ಲಿ ಅವರ ಜೀವನ ಸಾಧನೆಗಳ ಕುರಿತ ‘ಸಮಾಜಸೇವಾ ಹರಿಕಾರ’ ಎಂಬ ಪುಸ್ತಕವನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅನಾವರಣಗೊಳಿಸಿದರು.ಇಲ್ಲಿನ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಈ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು, ಬಡ ಕುಟುಂಬದಲ್ಲಿ ಜನಿಸಿದ ಜಿ.ಶಂಕರ್, ಸ್ವಂತ ಪರಿಶ್ರಮದ ಮೂಲಕ ಔದ್ಯೋಗಿಕ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ, ಮೇರು ಸಾಧಕರಾಗಿದ್ದಾರೆ. ಗಳಿಸಿದ ಸಂಪತ್ತಿನ ಬಹುಅಂಶವನ್ನು ಸಮಾಜಕ್ಕೆ ಮರಳಿಸುವ ಮೂಲಕ ಬಡವರಿಗೆ ನೆರವಾಗುತ್ತಾ, ನಿಜಾರ್ಥದಲ್ಲಿ ಸಮಾಜಸೇವಾ ಹರಿಕಾರರಾಗಿದ್ದಾರೆ ಎಂದು ಬಣ್ಣಿಸಿದರು.ಪ್ರತಿಭಾವಂತ ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವು, ಸಾಮೂಹಿಕ ವಿವಾಹ, ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರಿಗೆ ನೆರವು ಹೀಗೆ ಅವರ ಬಹುಮುಖ ಸಮಾಜ ಸೇವೆ ಇತತರಿಗೆ ಮಾದರಿ. ಜಾತಿ, ಧರ್ಮ, ಲಿಂಗ ಭೇದವಿಲ್ಲದೇ ವಿವಿಧ ಕೊಡುಗೆಗಳನ್ನು ನೀಡುತ್ತಿರುವ ಡಾ.ಜಿ.ಶಂಕರ್, ಬೇರೆಯವರ ಏಳಿಗೆಗಾಗಿ ತನ್ನ ಬದುಕು ಎಂಬ ಭಾವದಿಂದ ಬಾಳುತ್ತಿರುವ ಆದರ್ಶ ವ್ಯಕ್ತಿ ಎಂದರು.ಪುಸ್ತಕ ಲೇಖಕ ಉದಯಕುಮಾರ್ ಹಟ್ಟಿಯಂಗಡಿ ಹಾಗೂ ಸಾಹಿತಿ ಡಾ.ಗಾಯತ್ರಿ ನಾವಡ ಅವರು ಪುಸ್ತಕವನ್ನು ಪರಿಚಯಿಸಿದರು. ಡಾ.ಜಿ. ಶಂಕರ್ ಕೊಡುಗೆ ಅನ್ಯರಿಗೆ ಪ್ರೇರಣೆಯಾಗಲಿ ಎಂಬ ಆಶಯದಿಂದ ಅವರ ಸಿದ್ಧಿ ಸಾಧನೆಗಳ ಕೃತಿ ಹೊರತರಲಾಗಿದೆ ಎಂದು ತಿಳಿಸಿದರು.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವಿಶ್ವಸ್ಥೆ ಶ್ಯಾಮಿಲಿ ನವೀನ್, ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಸಂಶೋಧಕ ಸಾಹಿತಿ ಪ್ರೊ. ಎ.ವಿ. ನಾವಡ, ಜಾನಪದ ಸಂಶೋಧಕ ಬನ್ನಂಜೆ ಬಾಬು ಅಮೀನ್ ವೇದಿಕೆಯಲ್ಲಿದ್ದರು. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವಿಶ್ವಸ್ಥರಾದ ಆನಂದ ಎಸ್.ಕೆ. ಸ್ವಾಗತಿಸಿ, ನಿರೂಪಿಸಿದರು. ಶಂಕರ ಸಾಲ್ಯಾನ್ ವಂದಿಸಿದರು.