ಸಾರಾಂಶ
ಹುಬ್ಬಳ್ಳಿ:
ಗುರುಶಿಷ್ಯ ಪರಂಪರೆಯ ದೇಶದ ಏಕೈಕ ಗುರುಕುಲ ಎನಿಸಿದ ಇಲ್ಲಿನ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನ್ನು ಸರ್ಕಾರ ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಸೇರಿಸಿ ಆದೇಶಿಸಿದೆ. ಇದರಿಂದಾಗಿ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಿಂದ ವಿವಿ ವ್ಯಾಪ್ತಿಗೆ ಸೇರ್ಪಡೆಯಾದಂತಾಗಿದೆ.ಈ ಗುರುಕುಲ ಇಲ್ಲಿಂದ ಸ್ಥಳಾಂತರ ಮಾಡುತ್ತಾರೋ ಅಥವಾ ಇಲ್ಲಿಯೇ ಉಳಿಸಿಕೊಂಡು ಆಡಳಿತ ಮಾತ್ರ ಅಲ್ಲಿಂದ ನಡೆಸುತ್ತಾರೋ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಹಾಗೇನಾದರೂ ಸ್ಥಳಾಂತರ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯ ಸಂದೇಶವನ್ನು ಇಲ್ಲಿನ ಕಲಾಪ್ರೇಮಿಗಳು ನೀಡಿದ್ದಾರೆ.2007ರಲ್ಲಿ ಪ್ರಾರಂಭವಾಗಿದ್ದ ಈ ಗುರುಕುಲದಲ್ಲಿ 36 ವಿದ್ಯಾರ್ಥಿಗಳು ದೇಶ-ವಿದೇಶಗಳಿಂದ ಪ್ರವೇಶ ಪಡೆದು ನಾಲ್ಕು ವರ್ಷಗಳ ಕಾಲ ಸಂಗೀತದ ವಿವಿಧ ಪ್ರಕಾರಗಳ ತರಬೇತಿ ಪಡೆಯುತ್ತಿದ್ದರು. 6 ಜನ ಶಿಕ್ಷಕರು ಇದ್ದರು. ಜಿಲ್ಲಾಧಿಕಾರಿಗಳು ಈ ಟ್ರಸ್ಟ್‌ನ (ಗುರುಕುಲ) ಕಾರ್ಯಾಧ್ಯಕ್ಷರಾಗಿರುತ್ತಿದ್ದರು.ಪ್ರತಿವರ್ಷ ಇದಕ್ಕೆ ಉನ್ನತ ಶಿಕ್ಷಣ ಇಲಾಖೆಯಿಂದ ಅನುದಾನ ಬರುತ್ತಿತ್ತು. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಸರಿಯಾಗಿ ಅನುದಾನ ಬರುತ್ತಿರಲಿಲ್ಲ. ಅಲ್ಲಿನ ಶಿಕ್ಷಕರು, ಸಿಬ್ಬಂದಿಗೆ ಐದಾರು ತಿಂಗಳಿಂದ ಸಂಬಳ ಕೂಡ ಸಿಕ್ಕಿರಲಿಲ್ಲ. ವಿದ್ಯಾರ್ಥಿಗಳ ವಸತಿಗೂ ಸಮಸ್ಯೆ ಎದುರಾಗಿತ್ತು. ಇದಕ್ಕೆ ಅನುದಾನ ನೀಡಿ ಎಂಬ ಬೇಡಿಕೆ ಒಂದೆಡೆ ಇರುತ್ತಿದ್ದರೆ, ಇದನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಸೇರಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ ಸರ್ಕಾರ ಪ್ರತಿವರ್ಷ ಇದಕ್ಕೆ ₹ 2.13 ಕೋಟಿ ವೆಚ್ಚ ಮಾಡಬೇಕಾಗುತ್ತದೆ. ಇದು ಸರ್ಕಾರಕ್ಕೆ ಹೊರೆಯಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಸೇರಿಸುವುದು ಅಷ್ಟೊಂದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಜತೆಗೆ ಈಗಾಗಲೇ ಮೈಸೂರಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ವಿವಿಯೇ ಇದೆ. ಅಲ್ಲಿ ಸಂಗೀತದ ಎಲ್ಲ ಪ್ರಕಾರಗಳ ತರಬೇತಿಯನ್ನೂ ನೀಡಲಾಗುತ್ತದೆ. ಇದನ್ನು ಪ್ರತ್ಯೇಕವಾಗಿ ನಡೆಸುವ ಬದಲು ಆ ವಿವಿ ವ್ಯಾಪ್ತಿಯೊಳಗೆ ಸೇರಿಸುವುದು ಉತ್ತಮ ಎಂದು ನಿರ್ಧರಿಸಿದೆ. ಅದರ ವ್ಯಾಪ್ತಿಗೆ ಇದರ ಆಡಳಿತವನ್ನು ಸೇರಿಸಿ ಆದೇಶಿಸಿದೆ. ಆದೇಶದ ಪ್ರತಿಯನ್ನು ಧಾರವಾಡ ಜಿಲ್ಲಾಧಿಕಾರಿ ಹಾಗೂ ಬೆಳಗಾವಿಯಲ್ಲಿ ಪ್ರಾದೇಶಿಕ ಆಯುಕ್ತರಿಗೆ ರವಾನಿಸಿದೆ. ಹಸ್ತಾಂತರ ಪ್ರಕ್ರಿಯೆ ಶುರು ಮಾಡುವಂತೆ ಸರ್ಕಾರ ಸೂಚನೆಯನ್ನೂ ನೀಡಿದೆ. ಈ ಆದೇಶವು ಜಿಲ್ಲಾಡಳಿತಕ್ಕೆ ಮಾ. 13ರಂದು ಬಂದಿದೆ. ಅದರಂತೆ ಇದೀಗ ಹಸ್ತಾಂತರ ಪ್ರಕ್ರಿಯೆ ಶುರುವಾಗಲಿದೆ.ಷರತ್ತು ಅನ್ವಯ:
ಗುರುಕುಲದ ಎಲ್ಲ ಕಾರ್ಯಚಟುವಟಿಕೆಗಳು ಇನ್ಮೇಲೆ ಮೈಸೂರು ವಿವಿ ವ್ಯಾಪ್ತಿಗೆ ಬರುತ್ತವೆ. ವಿವಿ ಕುಲಪತಿಗಳ ಅನುಮತಿಯಿಲ್ಲದೇ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸೂಚನೆ ನೀಡಿದೆ. ಗುರುಕುಲದ ಎಲ್ಲ ಚರ ಹಾಗೂ ಸ್ಥಿರ ಆಸ್ತಿಗಳನ್ನು ವಿವಿಗೆ ಹಸ್ತಾಂತರಿಸಬೇಕು. ಯಾವುದೇ ಹುದ್ದೆಗಳನ್ನು ನೇಮಿಸಿಕೊಳ್ಳಬೇಕು ಎಂದರೆ ವಿವಿ ಅನುಮತಿ ಪಡೆಯಬೇಕು.ಟ್ರಸ್ಟ್‌ನ ಖರ್ಚು-ವೆಚ್ಚಗಳಿಗೆ ವಿವಿ ಮೂಲಕವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ವಿವಿ ಮೂಲಕವೇ ಅನುದಾನ ಪಡೆಯಬೇಕು ಎಂಬ ಸೂಚನೆಯೂ ಇದರಲ್ಲಿ ಅಡಕವಾಗಿದೆ. ಜತೆಗೆ ಗುರುಕುಲ ಪ್ರಾರಂಭವಾದಾಗಿನಿಂದ ಈ ವರೆಗೆ ಖರ್ಚು ಮಾಡಿರುವ ಹಾಗೂ ಬಿಡುಗಡೆ ಆದ ಅನುದಾನದ ಅಡಿಟ್ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಆಕ್ರೋಶ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಸೇರಿಸಬೇಕಿತ್ತು. ಅದು ಮೈಸೂರು ಸಂಗೀತ ವಿವಿಗೆ ಸೇರಿಸಬಾರದಿತ್ತು ಎಂಬ ಅಭಿಪ್ರಾಯ ಇಲ್ಲಿನ ಕಲಾಸಕ್ತರದ್ದು. ಸದ್ಯಕ್ಕೆ ವಿವಿ ಆಡಳಿತಕ್ಕೊಳಪಡಿಸಲಾಗಿದೆ. ಆಡಳಿತ ವಿವಿಗೆ ಸೇರಿದ್ದರೂ ಇದನ್ನು ಇಲ್ಲಿಯೇ ಮುಂದುವರಿಸಿಕೊಂಡು ಹೋಗಬೇಕು. ಇಲ್ಲಿಂದ ಸ್ಥಳಾಂತರ ಮಾಡುವ ಪ್ರಯತ್ನವನ್ನೇನಾದರೂ ಮಾಡಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ. ಅನುದಾನಕ್ಕೆ ವಿವಿ ಕಿರಿಕಿರಿ ಮಾಡದೇ ಪ್ರತಿವರ್ಷ ಸರಿಯಾಗಿ ಅನುದಾನ ಬಿಡುಗಡೆ ಮಾಡಬೇಕು ಎಂಬ ಒಕ್ಕೊರಲಿನಿಂದ ಆಗ್ರಹ ಕೇಳಿ ಬಂದಿದೆ.