ಸಾರಾಂಶ
ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ । ಈ ಪ್ರಕರಣದ ಕುರಿತು ಬೆಳಕು ಚೆಲ್ಲಿದ್ದ ಕನ್ನಡಪ್ರಭ ಕನ್ನಡಪ್ರಭ ವಾರ್ತೆ ಕನಕಗಿರಿ
ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ಪರಿವರ್ತನಾ ವೆಚ್ಚ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತುಗೊಳಿಸಿದ್ದಾರೆ.ಆರ್‌ಟಿಐ ಹಾಗೂ ಗ್ರಾಮಸ್ಥರಿಂದ ಬಯಲಿಗೆ ಬಂದಿದ್ದ ಈ ಪ್ರಕರಣದ ಕುರಿತಂತೆ 2024ರ ಜ. 25ರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಜ.೧೯ರಂದು ಬೈಲಕ್ಕಂಪುರ ಗ್ರಾಮದ ಪ್ರಭಾರಿ ಮುಖ್ಯಶಿಕ್ಷಕರಾಗಿದ್ದ ಉಮೇಶ ಲಮಾಣಿ ಹಾಗೂ ಕನಕಗಿರಿಯ ಎಂಎಚ್‌ಪಿಎಸ್ ಶಾಲಾ ಶಿಕ್ಷಕ ಮಲ್ಲಿಕಾರ್ಜುನ ಶಿರಿಗೇರಿ ಗ್ರಾಮದ ಶಾಲೆಯಲ್ಲಿ ಹಾಗೂ ರಾತ್ರೋರಾತ್ರಿ ಮನೆ-ಮನೆಗಳಿಗೆ ತೆರಳಿ ಪ್ರತಿ ವಿದ್ಯಾರ್ಥಿಗೆ ₹೨೪೮ ಬದಲಾಗಿ ₹೨೫೦ವನ್ನು ನಗದು ರೂಪದಲ್ಲಿ ನೀಡಿದ್ದರು.
ಈ ಕುರಿತು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಪಂ ಸದಸ್ಯರು ಗ್ರಾಮದ ಪ್ರಮುಖರು ದೂರು ನೀಡಿದ್ದರು. ಅಕ್ಷರ ದಾಸೋಹ ಕಾರ್ಯಕ್ರಮದಡಿ ಬಿಡುಗಡೆಯಾದ ಡಿಬಿಟಿ ಹಣವನ್ನು ನಿಯಮ ಬಾಹಿರವಾಗಿ ₹೬೨೦೦ ನಗದನ್ನು ತಮ್ಮ ಸ್ವಂತಕ್ಕೆ ಡ್ರಾ ಮಾಡಿಕೊಂಡಿರುವುದು ಮತ್ತು ₹೧೨,೧೫೨ಗಳನ್ನು ಪ್ರಭಾರಿ ಮುಖ್ಯಶಿಕ್ಷಕ ತಮ್ಮ ಪತ್ನಿಯ ಬ್ಯಾಂಕ್ ಖಾತೆಗೆ ಜಮೆ ಮಾಡಿರುತ್ತಾರೆ.ಅಲ್ಲದೇ ಶಾಲೆಗೆ ಪಾತ್ರೆ, ಪರಿಕರ ಖರೀದಿಸಲು ನೀಡಲಾಗಿದ್ದ ₹೧೦ ಸಾವಿರವನ್ನು ಉಮೇಶ ಸ್ವಂತಕ್ಕೆ ಡ್ರಾ ಮಾಡಿಕೊಂಡಿದ್ದು, ಇದರಲ್ಲಿ ₹೭೫೦೦ಗಳನ್ನು ನಗದು ರೂಪದಲ್ಲಿ ತಮ್ಮ ಬಳಿ ಇಟ್ಟುಕೊಂಡಿರುವುದು ಸಾಬೀತಾಗಿದೆ. ಅಲ್ಲದೇ ಸದರಿ ನೌಕರರು ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸದೆ ಹಣವನ್ನು ನಿಯಮ ಬಾಹಿರವಾಗಿ ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿದ್ದು, ಕರ್ನಾಟಕ ಸಿವಿಲ್ ಸೇವಾ ನಿಯಮದಡಿ ಮುಖ್ಯಶಿಕ್ಷಕ ಉಮೇಶ ಲಮಾಣಿ ಅವರನ್ನು ಬಿಇಒ ವಿ. ರಾಮಚಂದ್ರ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಒಂದುವರೆ ತಿಂಗಳ ನಂತರ ಸಸ್ಪಂಡ್:ನಿಯಮ ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ತಟಸ್ಥ ನಿಲುವು ತೆಗೆದುಕೊಂಡಿರುವುದು ಬೈಲಕ್ಕಂಪುರ ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿತ್ತು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತು ಅಂತಿಮವಾಗಿ ಶಿಕ್ಷಕರನ್ನು ಸಸ್ಪಂಡ್ ಮಾಡಿದ್ದಾರೆ.