ದೇಶ ಕಂಡ ಶ್ರೇಷ್ಠ ಶಿಕ್ಷಣ ತಜ್ಞ ಡಾ.ಎಚ್‌.ನರಸಿಂಹಯ್ಯ

| Published : Jun 08 2024, 12:32 AM IST

ದೇಶ ಕಂಡ ಶ್ರೇಷ್ಠ ಶಿಕ್ಷಣ ತಜ್ಞ ಡಾ.ಎಚ್‌.ನರಸಿಂಹಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮೌಢ್ಯತೆ, ಕಂದಾಚಾರ, ಅಂಧಶ್ರದ್ಧೆ, ರಾಷ್ಟ್ರದ ಪ್ರಗತಿಗೆ ಮಾರಕ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿಯೂ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಡಾ.ಎಚ್. ನರಸಿಂಹಯ್ಯರವರು ಸಾಕಷ್ಟು ಶ್ರಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಷ್ಟ್ರದ ಅಭಿವೃದ್ಧಿಯ ಜೀವಾಳವಾದ ಶಿಕ್ಷಣ ಕ್ಷೇತ್ರ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ, ವೈಚಾರಿಕತೆ, ವೈಜ್ಞಾನಿಕ ಕ್ಷೇತ್ರ, ಕಲೆ,ಸಾಹಿತ್ಯ,ಸಂಸ್ಕೃತಿಯ ಬೆಳವಣಿಗೆಗೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಗಾಂಧಿವಾದಿ ಹಾಗೂ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯನವರು ಈ ದೇಶ ಕಂಡ ಶ್ರೇಷ್ಠ ಶಿಕ್ಷಣ ತಜ್ಞರಲ್ಲಿ ಒಬ್ಬರು, ವಿಚಾರವಾದಿಯಾಗಿದ್ದಾರೆ ಎಂದು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಕೆ.ಎಂ. ರೆಡ್ಡಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಆವಲಗುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಗಾಂಧಿವಾದಿ ಹಾಗೂ ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯರವರ 104ನೇ ಜನ್ಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ

ಡಾ.ಎಚ್.ನರಸಿಂಹಯ್ಯರವರು ತಮ್ಮ ಜೀವನದ ಆರಂಭದಿಂದ ಅಂತ್ಯದವರೆಗೂ ಸರಳ ಜೀವನ ನಡೆಸಿದವರು, ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ವಿಶ್ವವಿದ್ಯಾಲಯದ ಹಂತದಲ್ಲಿ ಬೋಧಿಸುವ ವ್ಯವಸ್ಥೆ ಮಾಡಿದರು, ಅಮೆರಿಕಾದ ಓಹಿಯೋ ವಿಶ್ವ ವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪಿಎಚ್ ಡಿ ಪದವಿ ಪಡದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿ ದೇಶಕ್ಕಾಗಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಿ, ಜನಮನಕ್ಕೆ ಜೀವನದಲ್ಲಿ ಪ್ರತಿಯೊಬ್ಬರೂ ಪ್ರಶ್ನೆಸಿದೆ ಏನನ್ನೂ ತಪ್ಪಬಾರದು ಎಂಬ ಸಂದೇಶವನ್ನು ನೀಡಿದರೆಂದು ತಿಳಿಸಿದರು.

ಶಾಲೆಯ ಸಹಶಿಕ್ಷಕಿ ಎಂ. ಚಂದ್ರಕಲಾ ಮಾತನಾಡಿ. ಡಾ.ಎಚ್. ನರಸಿಂಹಯ್ಯ 1936 ರಲ್ಲಿ, ನರಸಿಂಹಯ್ಯನವರು ಮಹಾತ್ಮ ಗಾಂಧಿ ಶಾಲೆಗೆ ಭೇಟಿ ನೀಡಿದಾಗ ಅವರನ್ನು ಭೇಟಿಯಾಗುವ ಅವಕಾಶವನ್ನು ಪಡೆದರು. ಅವರು ನಿಷ್ಠಾವಂತ ಗಾಂಧಿ ಅನುಯಾಯಿ. ಗಾಂಧಿಯವರ ಹಿಂದಿ ಭಾಷಣಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಮೂಲಕ ಅವರಿಗೆ ಇಂಟಪ್ರಿಟರ್ ಆಗಿ ಸೇವೆ ಸಲ್ಲಿಸಿದರು ಎಂದರು.ಮೌಢ್ಯಗಳು ಪ್ರಗತಿಗೆ ಮಾರಕ

ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಜೆ. ತಿರುನಾವುಕ್ಕರಸು ಮಾತನಾಡಿ, ಮೌಢ್ಯತೆ, ಕಂದಾಚಾರ, ಅಂಧಶ್ರದ್ಧೆ, ರಾಷ್ಟ್ರದ ಪ್ರಗತಿಗೆ ಮಾರಕ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿಯೂ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಡಾ.ಎಚ್. ನರಸಿಂಹಯ್ಯರವರು ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿಯೊಬ್ಬರು ಪ್ರಶ್ನಿಸದೇ ಯಾವುದೇ ವಿಷಯಗಳನ್ನು ಒಪ್ಪಿಕೊಳ್ಳಬಾರದೆಂಬ ಅವರ ಅಚಲ ನಿಲವು ಶ್ಲಾಘನೀಯ. ಮಾನವೀಯ ಮೌಲ್ಯಗಳ ರಕ್ಷಕರಾಗಿ ಹೀಗೆ ಹತ್ತು ಹಲವು ಪ್ರಕಾರದಲ್ಲಿ ದೇಶ ಮರೆಯದ ಕಾರ್ಯವನ್ನು ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಎಂ.ವಿ. ಅನುಪಮ, ಬಿ.ಎಸ್. ರಮಾಮಣಿ, ಬಿ.ಆರ್. ವಸಂತಕುಮಾರಿ, ಪಿ.ಎನ್.ಶಾಂತಮ್ಮ ಎಂ. ಚಂದ್ರಕಲಾ, ಎಂ. ಮುನಿಕೃಷ್ಣಪ್ಪ, ಕೆ.ಮುನಿರಾಜು, ಸಿ.ಆರ್. ಪ್ರಶಾಂತ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದರು.