ಸಾರಾಂಶ
ಸಾಧ್ಯವಾದರೆ ಒಳ್ಳೆಯದನ್ನು ಮಾಡಿ, ಅವಕಾಶ ಸಿಗದಿದ್ದರೆ ಉತ್ತಮ ಕೆಲಸ ಮಾಡುವವರ ಜೊತೆ ಕೈಜೋಡಿಸಿ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕೆಂಗೇರಿಯ ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ಹಾಸನ : ಯಾವ ಮನುಷ್ಯನಿಗೆ ಉತ್ತಮ ದೃಷ್ಟಿಕೋನ ಇರುತ್ತದೆಯೋ ಆತನಿಂದ ಉತ್ತಮ ಪರಿಸರ ಸೃಷ್ಟಿಸಲು ಸಾಧ್ಯ. ಅಂಥವರ ಸಾಲಿನಲ್ಲಿ ಡಾ. ಗುರುರಾಜ ಹೆಬ್ಬಾರ್ ಸೇರುತ್ತಾರೆ. ಯಾರೇ ಆಗಲಿ ಸಾಧ್ಯವಾದರೆ ಒಳ್ಳೆಯದನ್ನು ಮಾಡಿ, ಅವಕಾಶ ಸಿಗದಿದ್ದರೆ ಉತ್ತಮ ಕೆಲಸ ಮಾಡುವವರ ಜೊತೆ ಕೈಜೋಡಿಸಿ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕೆಂಗೇರಿಯ ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜನಕಲ್ಯಾಣ ರೀಸರ್ಚ್ ಚಾರಿಟೇಬಲ್ ಟ್ರಸ್ಟ್ ಆವರಣದಲ್ಲಿ ಡಾ ಗುರುರಾಜ ಹೆಬ್ಬಾರ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಜನಕಲ್ಯಾಣ ರಿಸರ್ಚ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಂಜೀವಿನಿ ಸಹಕಾರಿ ಆಸ್ಪತ್ರೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ. ರಾಷ್ಟ್ರೀಯ ಸೇವಾ ಯೋಜನೆ, ಹಿಮ್ಸ್, ಪರಿಪೂರ್ಣ ಚಾರಿಟೇಬಲ್ ಟ್ರಸ್ಟ್, ಕಾಮಧೇನು ಸಹಕಾರಿ ವಿದ್ಯಾಶ್ರಮ, ರೈತ ಬಂಧು ಸಹಕಾರಿ ಸಂಘ, ವಿದ್ಯಾಸೌಧ ಶಿಕ್ಷಣ ಸಂಸ್ಥೆ ಮತ್ತು ಪ್ರಶಾಂತಿ ಸೇವಾ ಟ್ರಸ್ಟ್, ಕಟ್ಟಾಯ ಹೋಬಳಿ ಗ್ರಾಮಸ್ಥರು ಸೇರಿ ವಿವಿಧ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಾ.ಗುರುರಾಜ ಹೆಬ್ಬಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಹಾಗೂ ದೇಹದಾನ-ನೇತ್ರದಾನ ನೋಂದಣಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾನು ಸ್ವಾಮೀಜಿಯಾಗಿ ಪೀಠ ಅಲಂಕರಿಸಿ 20 ದಿನಗಳು ಕಳೆದಿವೆ. ಸ್ವಾಮೀಜಿಯಾಗಿ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ನಗರಸಭೆ ಅಧ್ಯಕ್ಷರು ಡಾ. ಹೆಬ್ಬಾರ್ ಹೆಸರಿನಲ್ಲಿ ಉದ್ಘಾಟನೆಗೊಂಡಿರುವ ವೃತ್ತದಲ್ಲಿ ರಸ್ತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಹೆಸರಿನಲ್ಲಿ ವಾರ್ಡ್ ರಚನೆ ಮಾಡಬೇಕೆನ್ನುವುದು ನಮ್ಮ ಮನವಿಯಾಗಿದೆ ಎಂದರು.
ಡಾ. ಗುರುರಾಜ ಹೆಬ್ಬಾರ್ ಅವರು ಇಡೀ ಹಾಸನ ಜಿಲ್ಲೆ ನೆನಪಿನಲ್ಲಿಡುವಂಥ ಅನುಪಮ ಸೇವೆ ಮಾಡಿದ್ದಾರೆ. ಗುರುರಾಜ ಹೆಬ್ಬಾರ್ ಶ್ರೇಷ್ಠ ದಾರ್ಶನಿಕರು, ಈ ಸಮಾಜಕ್ಕಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡವರು. ಡಾ. ಗುರುರಾಜ ಹೆಬ್ಬಾರ್ ಟ್ರಸ್ಟ್ ಮೂಲಕ ಇನ್ನಷ್ಟು ಸಮಾಜ ಸೇವಾ ಕೆಲಸವಾಗಲಿ. ಸಮಾಜ ಬದಲಾಯಿಸುವ ಮಾರ್ಗೋಪಯ ಪ್ರತಿ ಕುಟುಂಬದಲ್ಲೂ ಇರಲಿ, ಆಗಲೇ ಈ ದೇಶ ಸುಭಿಕ್ಷವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಡಾ.ಗುರುರಾಜ ಹೆಬ್ಬಾರ್ ಅವರ ಕಾಲಾವಧಿಯಲ್ಲಿ ಶಾಶ್ವತವಾದ ಕೆಲಸ ಮಾಡಿದ್ದು, ನಮ್ಮ ತಂದೆ ದಿ. ಎಚ್.ಎಸ್. ಪ್ರಕಾಶ್ ಅವರು ಡಾ. ಗುರುರಾಜ ಹೆಬ್ಬಾರ್ ಜೊತೆ ಒಡನಾಟ ಹೊಂದಿದ್ದರು. ನಾನೂ ಕೂಡ ಶಾಸಕನಾಗಿ ಡಾ. ಗುರುರಾಜ ಹೆಬ್ಬಾರ್ ಅವರ ಆಶೀರ್ವಾದ ಹಾಗೂ ಸಂಜೀವಿನಿ ಆಸ್ಪತ್ರೆ ಅಧ್ಯಕ್ಷರಾಗಿದ್ದ ಅವರು ನನಗೆ ಅಧ್ಯಕ್ಷರಾಗಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸದಾ ನೆನಪಿಸಿಕೊಳ್ಳುತ್ತೇನೆ ಎಂದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಡಾ. ಗುರುರಾಜ ಹೆಬ್ಬಾರ್ ಸಮಾಜದಲ್ಲಿ ನೊಂದು ಬೆಂದವರ ಕಡೆಗೆ ಹೆಚ್ಚು ಗಮನಹರಿಸುತ್ತಿದ್ದರು. ಇವರ ಬಳಿ ಆಸ್ಪತ್ರೆಗೆ ರೋಗಿಗಳು ಬಂದಾಗ ಚಿಕಿತ್ಸೆ ನೀಡಿ ಅವರಿಗೆ ಭರವಸೆಯ ಮಾತನಾಡಿ ಕಾಯಿಲೆ ವಾಸಿ ಮಾಡುತ್ತಿದ್ದರು. ಗುರುರಾಜ ಹೆಬ್ಬಾರ್ ವೈದ್ಯರಾಗಿ ಕೇವಲ ಆಸ್ಪತ್ರೆಗೆ ಮಾತ್ರ ಸೀಮಿತವಾಗಿರಲಿಲ್ಲ. ಸರಕಾರಿ ಹುದ್ದೆಯಲ್ಲಿದ್ದರೂ ತ್ಯಜಿಸಿ ಜನರಿಗೆ ಹತ್ತಿರವಾಗಿ ಏನನ್ನಾದರೂ ಗುರುತರ ಸೇವೆ ಮಾಡಬೇಕೆಂದು ಪಣತೊಟ್ಟವರು ಎಂದು ಬಣ್ಣಿಸಿದರು. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ. ಕರಿಸಿದ್ದಪ್ಪ ಮಾತನಾಡಿ, ಗುರುರಾಜ ಹೆಬ್ಬಾರ್ ಅವರು ಯಾವುದೇ ಸಮಸ್ಯೆಯಿರಲಿ, ಬಗೆಹರಿಸುವ ಕೆಲಸ ಮಾಡುತ್ತಿದ್ದರು. ಎಡಗೈಲಿ ಕೊಟ್ಟ ಸಹಾಯ ಬಲಗೈಗೆ ಗೊತ್ತಾಗಬಾರದು ಎಂಬ ನಿಟ್ಟಿನಲ್ಲಿ ಸಹಾಯ ಮಾಡುತ್ತಿದ್ದರು ಎಂದರು.
ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೊದಲು ನಗರದ ಸರಕಾರಿ ಮಹಿಳಾ ಕಾಲೇಜು ಮುಂಭಾಗ ಡಾ. ಗುರುರಾಜ ಹೆಬ್ಬಾರ್ ಹೆಸರಿನ ರಸ್ತೆಯ ನಾಮಫಲಕ ಅನಾವರಣಗೊಳಿಸಿದರು. ಇದೇ ವೇಳೆ ನೂರಾರು ಜನರು ರಕ್ತದಾನ ಶಿಬಿರ ಹಾಗೂ ದೇಹದಾನ, ನೇತ್ರದಾನ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಡಾ. ಗುರುರಾಜ ಹೆಬ್ಬಾರ್ ಸೇವಾ ಪ್ರಶಸ್ತಿ ಪುರಸ್ಕೃತ, ಬೆಂಗಳೂರಿನ ಐಗಾಟ್ ಸಂಸ್ಥಾಪಕ ನಿರ್ದೇಶಕ ಡಾ ಎನ್.ಎಸ್. ನಾಗೇಶ್, ಸಮಾಜ ಸೇವಾ ಕ್ಷೇತ್ರದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಿರ್ದೇಶಕ ಜಿ.ಬಿ. ಶಿವರಾಜು ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಕಟ್ಟಾಯ ಸರಕಾರಿ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಎಂ. ಬಿಂದುಲತಾರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜನಕಲ್ಯಾಣ ರೀಸರ್ಚ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ವಿ. ಕರೀಗೌಡ, ಡಾ ಗುರುರಾಜ ಹೆಬ್ಬಾರ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಎಚ್.ಪಿ. ಮೋಹನ್, ಅಧ್ಯಕ್ಷೆ ಡಾ. ಜಿ. ಪ್ರತಿಭಾ, ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಧ್ಯಕ್ಷ ಮಾಧವ್ ಶೆಣೈ, ಡಾ. ವೈ.ಎಸ್. ವೀರಭದ್ರಪ್ಪ, ಪರಿಪೂರ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಚ್.ವಿ. ಲಕ್ಷ್ಮೀನಾರಾಯಣ್, ಹಿಮ್ಸ್ ಪ್ರಾಂಶುಪಾಲ ಬಿ.ಸಿ. ರವಿಕುಮಾರ್, ರೈತ ಬಂಧು ಸಹಕಾರಿ ಸಂಘ ಅಧ್ಯಕ್ಷ ಬಿ. ಗೋಪಾಲಕೃಷ್ಣ ಪ್ರಭು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ವಿಶ್ವಪಥ ಎಡಿಟರ್ ಆರ್.ಪಿ. ವೆಂಕಟೇಶ್ ಮೂರ್ತಿ, ಕೆ.ಟಿ. ಜಯಶ್ರೀ, ಶಬ್ಬೀರ್ ಅಹಮದ್, ಇತರರು ಉಪಸ್ಥಿತರಿದ್ದರು.