ಕಳೆದ ಲೋಕಸಭೆ ಚುನಾವಣೆಯಲ್ಲಿ ಅಲೋಕ್‌ಗೆ ಟಿಕೆಟ್ ಕೇಳಿದೆವು. ಹೈಕಮಾಂಡ್ ಡಾ.ಕೆ.ಸುಧಾಕರ್ ಅವರಿಗೆ ನೀಡಿದರು. ಮರು ಮಾತಾಡದೆ ಶಿರಸಾವಹಿಸಿ ಕೆಲಸ ಮಾಡಿ 86 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಂಸದ ಡಾ.ಕೆ. ಸುಧಾಕರ್ ಅಂತಹ ನಾಯಕರ ಅವಶ್ಯಕತೆ ಭಾರತ ದೇಶಕ್ಕಿದೆ. ರಾಜ್ಯದಲ್ಲಿ ಮಂತ್ರಿಗಳಾಗಿ ಅವರು ಮಾಡಿರುವ ಕೆಲಸದ ಅನುಭವ ದೇಶದ ಜನತೆಗೆ ಸಿಗಬೇಕು ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.ನಗರ ಹೊರವಲಯ ಕಂದವಾರ ಗ್ರಾಮದ ನಿರಾಶ್ರಿತರ ಕಾಲೋನಿಯಲ್ಲಿ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 10 ಸಾವಿರ ಬೆಡ್‌ಶೀಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಅಲೋಕ್‌ಗೆ ಟಿಕೆಟ್ ಕೇಳಿದೆವು. ಹೈಕಮಾಂಡ್ ಡಾ.ಕೆ.ಸುಧಾಕರ್ ಅವರಿಗೆ ನೀಡಿದರು. ಮರು ಮಾತಾಡದೆ ಶಿರಸಾವಹಿಸಿ ಕೆಲಸ ಮಾಡಿ 86 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲಾಯಿತು ಎಂದರು.ಮುಂದಿನ ಸಾರಿ ಹೈಕಮಾಂಡ್ ಸುಧಾಕರ್ ಅವರಿಗೆ ಕೊಟ್ಟರೆ ನಾವು ದೂಸರಾ ಮಾತನಾಡುವುದಿಲ್ಲ. ಅವರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳಿಸುತ್ತೇವೆ. ಕೇಂದ್ರದಲ್ಲಿ ಅವರಿಗೆ ಭವಿಷ್ಯವಿದ್ದು ಮಂತ್ರಿಯಾಗುವ ಅವಕಾಶಗಳೂ ಇವೆ. ಅವರು ಮಂತ್ರಿಯಾದರೆ ಇಲ್ಲಿ ಸಂದೀಪ್‌ರೆಡ್ಡಿ ಅವರಂತಹ ಯುವಕರನ್ನು ಬೆಳೆಸುವ ಕೆಲಸ ಮಾಡುವರು ಎಂಬ ವಿಶ್ವಾಸವಿದೆ ಎಂದರು.ಸಂದೀಪ್‌ರೆಡ್ಡಿ ಅಂತಹವರ ಧ್ವನಿ ವಿಧಾನಸೌಧದಲ್ಲಿ ಬರಬೇಕು. ಇತ್ತೀಚೆಗೆ ಯಾವ್ಯಾವುದೋ ಧ್ವನಿಗಳು ಅಲ್ಲಿ ಕೇಳಿಸುತ್ತಿವೆ. ಶಿವಲಿಂಗೇಗೌಡನಂತವು ಕೂಡ ಇವೆ. ನಾಯಿಗಳು ಕೋತಿಗಳು ಕುರಿಗಳು ಎಂದು ಏನೇನೋ ಮಾತಾಡುತ್ತಿದ್ದಾನೆ. ನಾವು ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿದ್ದೆವು. ನಮಗೆ ಆತನ ಧ್ವನಿ ಕೇಳಿಸುವುದಿಲ್ಲ. ಮಧ್ಯಾಹ್ನ ಊಟಕ್ಕೆ ಬಿಟ್ಟ ಮೇಲೆ ಮೊಬೈಲ್‌ನಲ್ಲಿ ನೋಡಿದರೆ ಏನೇನೋ ಮಾತಾಡಿರುವುದು ಬಂದಿದೆ. ಇಷ್ಟೊಂದು ಕೆಟ್ಟದಾಗಿ ಬೈದಿದ್ದಾರಲ್ಲಾ ಎಂದು ಊಟದ ನಂತರ ನಾವು ಹಿಡಿದುಕೊಂಡಿವಿ. ಆಗ ನಾನು ಅತನಿಗೆ ಒಂದು ಮಾತು ಹೇಳಿದೆ. ಇಲ್ಲಿ ಮಾಧ್ಯಮದವರು ರೆಕಾರ್ಡ್ ಮಾಡುತ್ತಿದ್ದಾರೆ. ಹೇಳುವುದು ಬೇಡ. ಅವರಿಗೆ ಅನ್ನುವ ಮಾತು ನನಗೆ ಹೇಳಿದ್ದರೆ ಮುಂದಕ್ಕೆ ಏನು ಮಾಡುತ್ತಿದ್ದೆ ಎಂದು ಹೇಳಿದ್ದೇನೆ ಎನ್ನುವ ಮೂಲಕ ಶಿವಲಿಂಗೇಗೌಡರ ವಿರುದ್ಧ ಹರಿಹಾಯ್ದರು.ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡಬಾರದು. ನಾನು ತಪ್ಪು ಮಾಡಿದ್ದರೆ ನನ್ನ ಬೈಯಬೇಕು. ಅದನ್ನು ಬಿಟ್ಟು ಮನೆಯ ಹೆಣ್ಣು ಮಕ್ಕಳನ್ನು ಎಳೆತಂದು ಬೈಯುವುದು ಸರಿಯಾದ ಕ್ರಮವಲ್ಲ. ಆತ ಹುಚ್ಚನ ಥರ ಆಗಿಬಿಟ್ಟಿದ್ದಾನೆ. ಮೊದಲು ಜೆಡಿಎಸ್‌ನಲ್ಲಿ ಇದ್ದ. ದೇವೇಗೌಡರು ಏನಾದರೂ ಅಂದರೆ ತಿರುಗಿ ಬೀಳುತ್ತಿದ್ದ. ಈಗ ಕಾಂಗ್ರೆಸ್‌ನಲ್ಲಿದ್ದಾನೆ. ದೇವೇಗೌಡರ ಶಿಷ್ಯ ನೀನು ಎಂದರೆ ಬೈಯ್ತಾನೆ. ಈತರ ಬಣ್ಣ ಬದಲಿಸುವ ಕೆಲಸ ಮಾಡಬಾರದು. ನಾವು ಒಂದು ಕಡೆ ಇರ‍್ತೀವಿ. ಒಂದು ಕಡೆ ರಾಜಕಾರಣ ಮಾಡುತ್ತೇವೆ ಎಂದರು.

ಇನ್ನೂ ಎರಡುವರೆ ವರ್ಷ ಇದೆ. ಯಾರೂ ಕೂಡ ಇಷ್ಟು ಬೇಗ ಸಮಾಜಸೇವೆ ಅದು ಇದು ಎಂದು ಮಾಡುವುದಿಲ್ಲ. ಕೊನೇ 6 ತಿಂಗಳು ಇದ್ದಾಗ ಕೆಲಸ ಶುರು ಮಾಡುತ್ತಾರೆ. ಆಗಲೇ ಜನಗಳ ಮೇಲೆ ಪ್ರೀತಿ ಉಕ್ಕುವುದು ಹೆಚ್ಚು. ಅಣ್ಣ ಹೇಗಿದ್ದೀಯಾ? ಎನ್ನುತ್ತಾ ಹೆಗಲ ಮೇಲೆ ಕೈಹಾಕುತ್ತಾರೆ. ಹೆಂಡತಿ ಹೇಗಿದ್ದಾಳೆ ಎಂದರೆ ಹೋಗಯ್ಯೋ ಅವಳು ಸತ್ತು ಎರಡು ವರ್ಷ ಆಯಿತು ಎನ್ನುತ್ತಾರೆ. ಸುಮ್ಮನೆ ಕೇಳೊದು, ಡೌವ್ ಹೊಡೆಯೋದು ಮಾಡುತ್ತಾರೆ. ಆದರೆ ಸಂದೀಪ್‌ರೆಡ್ಡಿ ಕಳೆದ 8 ವರ್ಷಗಳಿಂದ ಸಮಾಜಸೇವೆ ಮಾಡಿಕೊಂಡು ಬಂದಿದ್ದಾರೆ. ಎಂದೂ ಕೂಡ ರಾಜಕೀಯಕ್ಕೆ ಬರುವ ಮಾತಾಡಿರಲಿಲ್ಲ. ಇವತ್ತೇ ತಮ್ಮ ಮನಸ್ಸಿನ ಇಂಗಿತವನ್ನು ಹೇಳಿಕೊಂಡಿದ್ದಾರೆ. ನನಗೆ ಅವಕಾಶ ಕೊಡಿ ಎಂದು ನಿಮ್ಮನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ನಮ್ಮ ವರಿಷ್ಠರು ತೀರ್ಮಾನ ತೆಗೆದುಕೊಳ್ಳಬೇಕು. ಅವರು ಕ್ಷೇತ್ರದ ಅಭ್ಯರ್ಥಿಯ ಜನಪ್ರಿಯತೆ ಏನು ಎಂಬುದನ್ನೆಲ್ಲಾ ಸರ್ವೆ ಮಾಡುತ್ತಾರೆ. ಜೆಡಿಎಸ್ ಬಿಜೆಪಿ ಒಟ್ಟಿಗೆ ಮುಂದಿನ ಚುನಾವಣೆಗೆ ಹೋಗುತ್ತೇವೆ. ನೀವು ಹೇಳಬೇಕು. ನಿಮಗೆ ಎಂತಹ ಅಭ್ಯರ್ಥಿಬೇಕು ಎಂಬುದನ್ನು ತೀರ್ಮಾನಿಸಿ ಎಂದರು.ಮೋದಿ ಎಂದರೆ ಟ್ರಂಪ್ ಭಯಪಡುತ್ತಾರೆ:

ಜಕಾರಣ ಕೆಟ್ಟದ್ದಲ್ಲ. ಮೋದಿ ಎಂದರೆ ಟ್ರಂಪ್ ಭಯಪಡುತ್ತಾರೆ. ಯೂರೋಪ್ ಒಪ್ಪಂದ ಭಾರತಕ್ಕೆ ಅನುಕೂಲ ಆಗಲಿದೆ. ನಮ್ಮ ತಾಯಿ ತವರು ಸೊಪ್ಪಳ್ಳಿ. ಆ ನೆನಪಿನ ಕಾರಣಕ್ಕಾಗಿ ಇಲ್ಲೊಂದಿಷ್ಟು ಭೂಮಿ ಕೊಂಡಿದ್ದೇನೆ. ಒಳಗೆ ವಿಷ ಇಟ್ಟುಕೊಂಡು ಮೇಲೆ ಮೇಲೆ ಬೆಣ್ಣೆ ಮಾತಾಡುವವರನ್ನು ನಂಬಬೇಡಿ. ಎತ್ತಿನಹೊಳೆ ನೀರು ಸಿಕ್ಕರೆ ನಿಮ್ಮನ್ನು ಹಿಡಿಲಾಗದು. ಸಂದೀಪ್‌ರೆಡ್ಡಿ ಇಲ್ಲಿ ಎಂಎಲ್‌ಎ ಆಗಲು ಲೋಕಸಭೆ ಸದಸ್ಯ, ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ ಎಲ್ಲರೂ ಅನುಕೂಲ ಮಾಡಿಕೊಡಬೇಕು. ಮತ ಹಾಕಿದವರಿಗೆ ಮೋಸ ಮಾಡಬಾರದು.ಮತದಾನದ ವಿಚಾರದಲ್ಲಿ ಬಡವ ಶ್ರೀಮಂತ ಇಬ್ಬರೂ ಒಂದೇ ಎಂದರು.ಈ ವೇಳೆ ಯಲಹಂಕ ಕ್ಷೇತ್ರದ ಯುವ ಮುಖಂಡ ಅಲೋಕ್ ವಿಶ್ವನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಡಾ.ಎಚ್.ಎಸ್.ಮಧುಕರ್, ರಿಯಾಝ್, ಯಲಹಂಕ ವೆಂಕಟೇಶ್, ಮಂಜುನಾಥ್, ಈಶ್ವರ್, ಎಸ್ಸಿ ಮೋರ್ಚಾ ಅಧ್ಯಕ್ಷ ಮುರಳಿ, ಚಿತ್ರ ಸಾಹಿತಿ ವರದರಾಜ್, ಎ.ಸಿ.ಮುನಿಕೃಷ್ಣ, ಎಸ್.ಟಿ.ಡಿ ಮೂರ್ತಿ, ಕೊಂಡೇನಹಳ್ಳಿ ಮುರಳಿ, ಹೊಸ ಹುಡ್ಯ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಜಗದೀಶ್, ಬಿಜೆಪಿ ತಾಲೂಕು ಅಧ್ಯಕ್ಷೆ ಮಲ್ಲಿಕಾ, ಪವನ್ ಕುಮಾರ್, ಮಂಜುನಾಥ್, ಡಾ.ಶಶಿಕುಮಾರ್, ಕರವೇ ರಾಜ್ಯಾಧ್ಯಕ್ಷ ಅಗಲಗುರ್ಕಿ ಚಲಪತಿ ಮತ್ತಿತರರು ಇದ್ದರು.

ಸಿಕೆಬಿ-1 ನಗರ ಹೊರವಲಯ ಕಂದವಾರ ಗ್ರಾಮದ ನಿರಾಶ್ರಿತರ ಕಾಲೋನಿಯಲ್ಲಿ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರಾಶ್ರಿತರಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಬೆಡ್‌ಶೀಟ್ ವಿತರಣೆ ಮಾಡಿದರು