ಡಾ। ಕೆ.ಸುಧಾಕರ್‌ ಪರವಾಗಿ ಮಾದಿಗರ ಹೋರಾಟ ಸಮಿತಿ ಅಧ್ಯಕ್ಷ ಪ್ರಚಾರ

| Published : Apr 17 2024, 02:00 AM IST

ಸಾರಾಂಶ

ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಇತಿಹಾಸದಲ್ಲಿ ಎಂದಿಗೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಪ್ರಾತಿನಿಧ್ಯ ಶೇಕಡ 40 ದಾಟಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈ ಪ್ರಾತಿನಿಧ್ಯ ಶೇ.50 ದಾಟಿ ಶೇ.60 ಆಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಮಂದ ಕೃಷ್ಣ ಮಾದಿಗ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಇತಿಹಾಸದಲ್ಲಿ ಎಂದಿಗೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಪ್ರಾತಿನಿಧ್ಯ ಶೇಕಡ 40 ದಾಟಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈ ಪ್ರಾತಿನಿಧ್ಯ ಶೇ.50 ದಾಟಿ ಶೇ.60 ಆಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಮಂದ ಕೃಷ್ಣ ಮಾದಿಗ ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಪರವಾಗಿ ಅವರು ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ 77 ಸಚಿವರಲ್ಲಿ 27 ಒಬಿಸಿ, 12 ಪರಿಶಿಷ್ಟ ಜಾತಿ ಹಾಗೂ 8 ಪರಿಶಿಷ್ಟ ಪಂಗಡದವರಾಗಿದ್ದಾರೆ 47 ಸಚಿವರು ಅಂದರೆ ಶೇ.61ರಷ್ಟು ಸಚಿವರು ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಮೋದಿ ಅವರ ಕಾಲದಲ್ಲಿ ಹಿಂದುಳಿದವರಿಗೆ, ದಲಿತರಿಗೆ ಅಧಿಕಾರ ಸಿಕ್ಕಿದೆ ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರ್ ರಚಿತ ಸಂವಿಧಾನ 60 ವರ್ಷ ಜಮ್ಮು ಕಾಶ್ಮೀರದಲ್ಲಿ ಜಾರಿಯಾಗಿರಲಿಲ್ಲ. ಜಮ್ಮು ಕಾಶ್ಮೀರದಲ್ಲಿ ದಲಿತರಿಗೆ ಮೀಸಲಾತಿ ಸಿಕ್ಕಿರಲಿಲ್ಲ. ಪ್ರಧಾನಿ ಮೋದಿಯವರು ಆರ್ಟಿಕಲ್‌ 370 ರದ್ದು ಮಾಡಿದ ನಂತರವೇ ಅಲ್ಲಿ ದಲಿತರಿಗೆ ಮೀಸಲಾತಿ ಸಿಕ್ಕಿದೆ. ಜೊತೆಗೆ ಮೇಲ್ಜಾತಿಯ ಬಡವರಿಗೂ ಶೇ.10 ಮೀಸಲಾತಿ ದೊರೆತಿದೆ. ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇ.33 ಮೀಸಲಾತಿಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ತ್ರಿವಳಿ ತಲಾಖ್ ರದ್ದು ಮಾಡಿ ಬಡ ಮುಸ್ಲಿಂ ಮಹಿಳೆಯರಿಗೆ ನೆರವಾಗಿದ್ದಾರೆ ಎಂದು ಹೇಳಿದರು.

ಮಾದಿಗರ ಕನಸು ನನಸಾಗಲು ಮೋದಿ ಬೇಕು:

ಮಾದಿಗ ಮೀಸಲಾತಿ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಂತಿರುವ ಸುಧಾಕರ್ ಅವರಿಗೆ ಕೃತಜ್ಞತೆ ಸಲ್ಲಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಮೋದಿ ಅವರು ಮತ್ತೆ ಪ್ರಧಾನಿ ಆಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಮೋದಿ ಅವರು ನಮ್ಮ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಮಾದಿಗರ ಮೂರು ದಶಕಗಳ ಹೋರಾಟ ಫಲಿಸಬೇಕಾದರೆ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕು ಎಂದರು.ಏ.20ಕ್ಕೆ ಮೋದಿ ಕ್ಷೇತ್ರಕ್ಕೆ ಆಗಮನ:

ಸುದ್ದಿಗಾರರೊಂದಿಗೆ ಮಾತನಾಡಿದ ಅಭ್ಯರ್ಥಿ ಡಾ। ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ-7 ರ ಬಳಿಯ ಮೈದಾನದಲ್ಲಿ ಏಪ್ರಿಲ್‌ 20ರಂದು ಬಿಜೆಪಿ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಸಿದ್ಧತೆ ನಡೆಯುತ್ತಿದ್ದು, ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರಿಗೆ ಬಹಳ ಉತ್ಸಾಹ ಬಂದಿದೆ. ಅವರ ಆಗಮನದಿಂದಾಗಿ ಚುನಾವಣೆಯ ಮೇಲೆ ದೊಡ್ಡ ಪರಿಣಾಮವಾಗಲಿದ್ದು, ನನಗೆ ಹೆಚ್ಚು ಲಾಭವಾಗಲಿದೆ ಎಂದರು.ಕಾಂಗ್ರೆಸ್‌ ಗೆದ್ದರೆ ಪ್ರಯೋಜವಿಲ್ಲ: ಅಶೋಕ್‌

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಡಾ। ಕೆ.ಸುಧಾಕರ್‌ ಅವರ ಪರವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗೌರಿಬಿದನೂರು ತಾಲೂಕಿನ ವಾಟದ ಹೊಸಹಳ್ಳಿಯಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಚುನಾವಣೆ ಅಲ್ಲ. ಇದು ನರೇಂದ್ರ ಮೋದಿ ಮತ್ತು ರಾಹುಲ್‌ ಗಾಂಧಿಯವರ ಚುನಾವಣೆ. ಜನರು ನರೇಂದ್ರ ಮೋದಿಯವರನ್ನೇ ಗೆಲ್ಲಿಸಲಿದ್ದು, ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ. ಒಂದು ವೇಳೆ ಚಿಕ್ಕಬಳ್ಳಾಪುರ ಲೋಕಸಭೆಯಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರೆ ರಾಜ್ಯಕ್ಕೆ ಏನೂ ಪ್ರಯೋಜನ ಆಗುವುದಿಲ್ಲ. ಆದರೆ ಬಿಜೆಪಿ ಅಭ್ಯರ್ಥಿ ಸುಧಾಕರ್‌ ಗೆದ್ದರೆ ಮೋದಿಯವರ ಜೊತೆ ಕುಳಿತು ಜನರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಾರೆ ಎಂದರು.ದ್ವಾರಕೀಶ್‌ ಸಾವಿಗೆ ಸುಧಾಕರ್‌ ಸಂತಾಪ:

ಜನರನ್ನು ನಗಿಸುವುದು ಬಹಳ ಕಷ್ಟದ ಕಲೆ. ಆದರೆ ಕಲೆಯನ್ನು ದ್ವಾರಕೀಶ್‌ ಕರಗತ ಮಾಡಿಕೊಂಡಿದ್ದರು. ಅವರು ದೈಹಿಕವಾಗಿ ಅಗಲಿದ್ದರೂ ಅವರ ಕಲೆಗೆ ಸಾವಿಲ್ಲ. ಅರ್ಥಗರ್ಭಿತವಾದ ಹಾಸ್ಯವನ್ನು ಹೇಗೆ ಮಾಡುತ್ತಿದ್ದರು ಎಂದು ಅವರನ್ನು ನೋಡಿ ತಿಳಿಯಬಹುದಿತ್ತು. ಯಾವಾಗಲೂ ನಮ್ಮ ಮನಸ್ಸಿನಲ್ಲೇ ಇರುತ್ತಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಡಾ। ಕೆ.ಸುಧಾಕರ್‌ ಹೇಳಿದರು.