ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಮರಾಠಿಕ್ಯಾಂಪ್ ಮತ್ತು ಚೌಡಿಕಟ್ಟೆ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಶಾಲೆ ಮಕ್ಕಳ ಪೋಷಕರೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಪೋಷಕರು, ಗ್ರಾಮಸ್ಥರೊಂದಿಗೆ ಚರ್ಚೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಮರಾಠಿಕ್ಯಾಂಪ್ ಮತ್ತು ಚೌಡಿಕಟ್ಟೆ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಶಾಲೆ ಮಕ್ಕಳ ಪೋಷಕರೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ಕಳೆದ ನಾಲ್ಕು ದಿನಗಳಿಂದಲೂ ಮಕ್ಕಳು ಶಾಲೆಗೆ ಹೋಗದಿ ರುವುದರಿಂದ ಪೋಷಕರು ಸಹ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ. ಪ್ರತಿಯೊಂದಕ್ಕೂ ನಡೆದು ಕೊಂಡು ಹೋಗುವ ಸ್ಥಿತಿಯಿದೆ. ಮಕ್ಕಳು ಅಂಗನವಾಡಿ, ಶಾಲೆಗೆ ಹೋಗಲು, ಪಡಿತರ ತರಲು, ಪೊಲೀಯೊ ಲಸಿಕೆ ಹಾಕಿಸಲು ಕಾಡು ಹಾದಿ ಮೂಲಕವೇ ಹೋಗಬೇಕು. ಬೇಸಿಗೆಯಲ್ಲಿ ನಡೆದು ಕೊಂಡು ಹೋಗಬಹುದು. ಮಳೆ ಬಂದರೆ ನಡೆಯಲು ಅಥವಾ ದ್ವಿಚಕ್ರ ವಾಹನದಲ್ಲಿ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.ಗ್ರಾಪಂ ಮಾಜಿ ಸದಸ್ಯ ದೇವಂತ್ ಗೌಡ ಮಾತನಾಡಿ, ಅಂಗನವಾಡಿಗೆ ಹೋಗುವ 13 ಮಕ್ಕಳು ಮರಾಠಿ ಕ್ಯಾಂಪ್ ನಲ್ಲಿರುವುದರಿಂದ ಇಲ್ಲಿರುವ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ಆರಂಭಿ ಸಲು ನಿರ್ಧರಿಸಲಾಗಿದೆ. ವಲಯ ಅರಣ್ಯಾಧಿಕಾರಿಗಳು ಸಮುದಾಯ ಭವನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಇಲಾಖೆಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆಂದರು.
ಈ ಸಂದರ್ಭದಲ್ಲಿ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಗ್ರಾಮಸ್ಥರ ಆಂತಕ ಗೊತ್ತಾಗುತ್ತದೆ. ಗ್ರಾಮದಲ್ಲಿ ಸಮಸ್ಯೆ ಬಂದಾಗ ಗ್ರಾಮಸ್ಥರು ಒಟ್ಟಾಗಿ ಎದುರಿಸಬೇಕು. ಇದು ಎಲ್ಲರ ಸಮಸ್ಯೆ. ಮಕ್ಕಳಿಗೆ ಶಾಲೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬರಲು ಒಂದೊಂದು ದಿನ ಒಬ್ಬರು ಜವಾಬ್ಧಾರಿ ತೆಗೆದು ಕೊಳ್ಳಬೇಕು ಗ್ರಾಮಸ್ಥರಿಗೆ ತಿಳಿಸಿದರು. ಅಲ್ಲದೆ ಕಂದಾಯ ಗ್ರಾಮದಲ್ಲಿ ಗುಂಪು ಮನೆಗೆ ಹಕ್ಕು ಪತ್ರ ಕೊಡಲು ಅವಕಾಶವಿದೆ ಎಂದರು.ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಿದೆ. ಬೈರಾಪುರ ಶಾಲೆಗೆ ಹೋಗುವ ರಸ್ತೆ ಮತ್ತು ಉಂಬಳೆ ಬೈಲು ಗ್ರಾಮದ ರಸ್ತೆ ಅಭಿವೃದ್ಧಿ ಪಡಿಸಬೇಕು. ಮಳೆ ಬಂದಾಗ ವಾಹನ ಓಡಾಡಲು - ನಡೆದು ಕೊಂಡು ಹೋಗಲು ಸಾಧ್ಯವಿಲ್ಲ. ರಸ್ತೆ ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಅವಲತ್ತುಕೊಂಡರು.ಮರಾಠಿ ಕ್ಯಾಂಪ್ ನಿಂದ ಬೈರಾಪುರ ಗ್ರಾಮಕ್ಕೆ ಹೋಗಲು ಕಾಡಂಚಿನ ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಿಸಿ ಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಈ ಸ್ಥಳವನ್ನು ಗ್ರಾಮಸ್ಥರೊಂದಿಗೆ ಪರಿಶೀಲನೆ ಮಾಡಿದ ಡಾ.ಕೆ.ಪಿ.ಅಂಶುಮಂತ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ಸಾಗರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮರಾಠಿಕ್ಯಾಂಪ್ ನಿಂದ ಬೈರಾಪುರ ಗ್ರಾಮಕ್ಕೆ ರಸ್ತೆ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಿ ಬೇಕಾಗುವ ಅನುದಾನದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಬೈರಾಪುರದ ಅಂಗನವಾಡಿಗೆ ಭೇಟಿ ನೀಡಿ ಮರಾಠಿ ಕ್ಯಾಂಪ್ ನಲ್ಲಿ 13 ಮಕ್ಕಳು ಇರುವುದರಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಸಮನ್ವತೆಯಿಂದ ಎರಡು ಕಡೆ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು. ಶಾಲಾ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು.ಈ ಸಂದರ್ಭದಲ್ಲಿ ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಮಣ್ಯ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವಿ.ಉಪೇಂದ್ರ, ಮುತ್ತಿನ ಕೊಪ್ಪ ಗ್ರಾಪಂ ಮಾಜಿ ಸದಸ್ಯ ದೇವಂತ್ ಗೌಡ, ಮಹೇಶ್, ಮುಖಂಡ ಜಾನ್, ಗ್ರಾಮಸ್ಥರು ಇದ್ದರು.