ಸಾರಾಂಶ
ಲಕ್ಷ್ಮೇಶ್ವರ: ತಾಲೂಕಿನ ಆದರಳ್ಳಿ ಗವಿಸಿದ್ದೇಶ್ವರ ಮಠದ ಡಾ.ಕುಮಾರ ಮಹಾರಾಜರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಸಮಾಜದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣ ಮಾಡಿ ಬಂಜಾರದ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಕುಮಾರ ಮಹಾರಾಜರನ್ನು ಗಡಿಪಾರು ಮಾಡಬೇಕೆಂದು ಲಕ್ಷ್ಮೇಶ್ವರ ಲಂಬಾಣಿ ಸಮಾಜದ ಅಧ್ಯಕ್ಷ ಶಿವಣ್ಣ ಲಮಾಣಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ಬಂಜಾರ ಸಮಾಜ ಮುಖಂಡರು ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು.ಸವಣೂರು ತಾಲೂಕಿನ ಕೃಷ್ಣಪೂರ ತಾಂಡಾದ ಕುಮಾರ ಮಹಾರಾಜರು ನಮ್ಮ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ಗವಿಸಿದ್ದೇಶ್ವರ ಮಠಕ್ಕೆ ಬಂದ ಮೇಲೆ ನಮ್ಮ ತಾಲೂಕಿನಲ್ಲಿ ಬಂಜಾರ ಸಮಾಜದ ಒಗ್ಗಟ್ಟನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಶಾಂತಿ ಕಾಪಾಡಬೇಕಾದ ಸ್ವಾಮಿಗಳು ಸಮಾಜದ ಶಾಂತಿ ಭಂಗ ಮಾಡುವ ಕೆಲಸ ಮಾಡಬಾರದು. ಬಂಜಾರ ಸಮಾಜವು ಕುಮಾರ ಮಹಾರಾಜರನ್ನು ನಮ್ಮ ಸಮಾಜದ ಸ್ವಾಮಿಗಳು ಅಲ್ಲ. ನಮ್ಮ ಸಮಾಜದ ದೇವರು ಸಂತ ಸೇವಾಲಾಲ್ ಮಹಾರಾಜರು ಮಾತ್ರ. ಇವರು ಯಾರೋ ನಮಗೆ ಗೊತ್ತಿಲ್ಲ, ಬಂಜಾರ ಸಮಾಜದಿಂದ ಶಿರಹಟ್ಟಿ ಪಟ್ಟಣದಲ್ಲಿ ಹಮ್ಮಿಕೊಂಡ ಸಂತ ಸೇವಾಲಾಲ್ ಜಯಂತಿಯಲ್ಲಿ ಇವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿದ್ದರೂ ಸಮಾಜದಲ್ಲಿ ಶಾಂತಿ ನೆಮ್ಮದಿ ಹಾಗೂ ಒಗ್ಗಟ್ಟನ್ನು ಹಾಳು ಮಾಡುವ ಉದ್ದೇಶದಿಂದ ಆದರಳ್ಳಿ ಗ್ರಾಮದಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಹಮ್ಮಿಕೊಂಡು ಸಮಾಜದ ಒಗ್ಗಟ್ಟನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ. ಬೇರೆ ಸಮಾಜದ ಜತೆ ಶಾಂತಿ ಸಹಬಾಳ್ವೆಯಿಂದ ಸಾಗುತ್ತಿರುವ ನಮ್ಮ ಸಮಾಜದ ಜನರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿರುವುದು ಖಂಡನೀಯ ಎಂದರು.
ಈ ವೇಳೆ ಶಿಗ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ ಮಾತನಾಡಿ, ನಮ್ಮ ಸಮಾಜದಿಂದ ಯಾರಿಗೂ ಗುರು ಸ್ವಾಮಿಯೂ ಮಾಡಿಲ್ಲ, ಅವರು ನಮ್ಮ ಸಮಾಜದ ಸ್ವಾಮೀಜಿಯೂ ಅಲ್ಲ. ಅವರು ಆದರಳ್ಳಿಯ ಜನರಿಗೆ ಮಾಟ ಮಂತ್ರ ಹಾಗೂ ಕೈಕಾಲು ಮುರಿಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನಮ್ಮ ಸಮಾಜದವರಿಗೂ ಅಷ್ಟೇ ಅಲ್ಲ, ಎಲ್ಲ ಸಮಾಜದವರಿಗೂ ಭಯ ಹುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವಾಮಿಗಳು ಅಂದರೆ ಮಠಕ್ಕೆ ಬಂದವರಿಗೆ ಆಶೀರ್ವಾದ ಮಾಡಬೇಕು ಹೊರತು ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದರು.ಈ ವೇಳೆ ಜಾನು ಲಮಾಣಿ, ಟೋಪಣ್ಣ ಲಮಾಣಿ, ದೇವಣ್ಣ ಲಮಾಣಿ, ದ್ಯಾಮಣ್ಣ ಲಮಾಣಿ, ಗುರಪ್ಪ ಲಮಾಣಿ, ಥಾವರಪ್ಪ ಲಮಾಣಿ, ಈಶ್ವರಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ಸೋಮು ಲಮಾಣಿ, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ಲಕ್ಷ್ಮಣ ಲಮಾಣಿ, ಪುಟ್ಟಪ್ಪ ಲಮಾಣಿ, ಗೋವಿಂದರೆಡ್ಡಿ ಲಮಾಣಿ, ಚಂದಪ್ಪ ಲಮಾಣಿ, ವೆಂಕಪ್ಪ ಲಮಾಣಿ, ಕೃಷ್ಣಪ್ಪ ಲಮಾಣಿ ಸೇರಿದಂತೆ ಅನೇಕರು ಹಾಜರಿದ್ದರು.