ಸಾರಾಂಶ
ಎಸ್ಪಿ ವರ್ಗಾವಣೆ ಜಟಾಪಟಿಗೆ ಸಿಎಂ ಎಂಟ್ರಿಯಿಂದ ಬ್ರೇಕ್
ಎಸ್ಪಿ ಯಶೋದಾ ವಂಟಗೋಡಿ ವರ್ಗಾವಣೆಭಾರಿ ಪ್ರತಿಷ್ಠೆಗೆ ಕಾರಣವಾಗಿದ್ದ ವರ್ಗಾವಣೆ ಆದೇಶ ವಿವಾದ
ಕನ್ನಡಪ್ರಭ ವಾರ್ತೆ ಕೊಪ್ಪಳಕಳೆದೆರಡು ದಿನಗಳಿಂದ ಕೊಪ್ಪಳ ಎಸ್ಪಿ ವರ್ಗಾವಣೆ ಆದೇಶದ ಹಗ್ಗಾಜಗ್ಗಾಟ ಕೊನೆಗೂ ಸಿಎಂ ಸಿದ್ದರಾಮಯ್ಯ ಅವರ ನೇರ ಮಧ್ಯಪ್ರವೇಶದೊಂದಿಗೆ ಇತ್ಯರ್ಥವಾಗಿದ್ದು, ಡಾ. ರಾಮ ಎಲ್. ಅರಸಿದ್ದಿ ಶನಿವಾರ ರಾತ್ರಿ ಅಧಿಕಾರ ವಹಿಸಿಕೊಂಡರು.
ಈ ಮೂಲಕ ಎಸ್ಪಿಯಾಗಿದ್ದ ಯಶೋದಾ ವಂಟಗೋಡಿ ವರ್ಗಾವಣೆ ಆದೇಶ ಜಾರಿಯಾದಂತಾಗಿದೆ.ಯಶೋದಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿದರೂ ಶಾಸಕರು ಹಾಗೂ ಕೆಲ ಮುಖಂಡರು ಉಳಿಸಿಕೊಳ್ಳುವ ಯತ್ನ ನಡೆಸಿದ್ದರಿಂದ ವರ್ಗಾವಣೆ ಆದೇಶಕ್ಕೆ ಬ್ರೇಕ್ ಬಿದ್ದಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿ ಕೊನೆಗೆ ಸಿಎಂ ಸಿದ್ದರಾಮಯ್ಯ ಅವರ ಅಂಗಳಕ್ಕೆ ತಲುಪಿತು.
ಕೊಪ್ಪಳ ಎಸ್ಪಿ ವರ್ಗಾವಣೆ ಆದೇಶ ರದ್ದು ಮಾಡಿದ್ದರಿಂದ ಅದರ ಜೊತೆಗೆ ಮಾಡಿರುವ ಐದಾರು ಎಸ್ಪಿ ವರ್ಗಾವಣೆಗಳನ್ನು ಬದಲಾಯಿಸಬೇಕಾಗಿತ್ತು. ಹೀಗಾಗಿ, ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರೊಂದಿಗೆ ಮಾತನಾಡಿ, ಈಗಾಗಲೇ ಆದೇಶ ಮಾಡಿರುವುದನ್ನು ತಡೆಯುವುದು ಬೇಡ, ಜಾರಿಯಾಗಲಿ, ಮುಂದೆ ನೋಡೋಣ ಎಂದಿದ್ದಾರೆ.ಇದಕ್ಕೆ ಮರುಮಾತನಾಡದ ಬಸವರಾಜ ರಾಯರಡ್ಡಿ, ನನ್ನದೇನು ಇದರಲ್ಲಿ ಪಾತ್ರವಿಲ್ಲ. ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಕೋರಿಕೊಂಡಿದ್ದರಿಂದ ತಡೆಹಿಡಿಯುವಂತೆ ಹೇಳಿದ್ದೆ. ಯಾರನ್ನೇ ಕೊಡಿ, ಒಳ್ಳೆಯ ಅಧಿಕಾರ ಕೊಡಿ ಎಂದಷ್ಟೇ ಹೇಳಿದ್ದಾರೆ.
ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಈಗಾಗಲೇ ವರ್ಗಾವಣೆ ಆದೇಶ ಮಾಡಲಾಗಿದೆ. ಈಗ ಬದಲಾಯಿಸುವುದು ಸರಿಯಲ್ಲ ಎಂದು ಸಿಎಂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಎಸ್ಪಿಯಾಗಿದ್ದ ಯಶೋದಾ ಅವರನ್ನು ಕೊಪ್ಪಳದಲ್ಲಿಯೇ ಮುಂದುವರೆಸುವ ಯತ್ನ ವಿಫಲವಾಯಿತು.ಎಸ್ಪಿ ವರ್ಗಾವಣೆಯಲ್ಲಿ ಯಾವುದೇ ಪ್ರತಿಷ್ಠೆಯ ಪ್ರಶ್ನೆಯೇ ಇಲ್ಲ. ಇದೊಂದು ಸಹಜ ಪ್ರಕ್ರಿಯೆ. ಸರ್ಕಾರ ಮಾಡಿರುವ ವರ್ಗಾವಣೆ ಇದಾಗಿರುವುದರಿಂದ ಜಾರಿಯಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.ವರ್ಗಾವಣೆಯಲ್ಲಿ ಭಾಗಿಯಾಗುವುದಿಲ್ಲ:
ಯಶೋದಾ ವಂಟಗೋಡಿ ಅವರನ್ನು ಮಂದುವರೆಸುವುದು ಸೂಕ್ತ ಎಂದಷ್ಟೇ ಹೇಳಿದ್ದೆ. ಆದರೆ, ಸಿಎಂ ಸಿದ್ದರಾಮಯ್ಯ ನನಗೆ ಕರೆ ಮಾಡಿ, ಈಗಾಗಲೇ ವರ್ಗಾವಣೆಯಾಗಿರುವುದನ್ನು ತಡೆಯುವುದು ಬೇಡ ಎಂದಿದ್ದರಿಂದ ಆಯಿತು, ಒಳ್ಳೆಯ ಅಧಿಕಾರ ಕೊಡಿ ಎಂದಿದ್ದೇನೆ. ನಾನು ಯಾವತ್ತೂ ವರ್ಗಾವಣೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.