ಮಿಷನ್ ಶಕ್ತಿ ಯೋಜನೆ ಸದುಪಯೋಗಪಡೆದುಕೊಳ್ಳಿ

| Published : Jul 07 2024, 01:28 AM IST

ಸಾರಾಂಶ

ಇಂದು ಮಹಿಳೆಯರು ಸ್ವತಂತ್ರವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಲು ತಯಾರಿದ್ದಾರೆ

ಗದಗ: ಮಿಷನ್ ಶಕ್ತಿ ಯೋಜನೆಯು ಮಹಿಳೆಯರ ಸುರಕ್ಷತೆ, ಭದ್ರತೆ ಹಾಗೂ ಸಬಲೀಕರಣಕ್ಕಾಗಿ ವಿಶೇಷವಾದ ರೂಪರೇಷೆಗಳನ್ನು ಹೊಂದಿದೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡದ ಯೋಜನಾಧಿಕಾರಿ ಭಾರತಿ ಶೆಟ್ಟರ್ ಹೇಳಿದರು.

ಅವರು ನಗರದ ಜಿಲ್ಲಾಡಳಿತ ಭವನದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಪಂ, ಮಹಿಳಾ ಮತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಿಷನ್ ಶಕ್ತಿ ಯೋಜನೆಯ ರೂಪರೇಷೆಗಳ ಕುರಿತು ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ, ಮೇಲ್ವಿಚಾರಕಿಯರಿಗೆ ಹಿರಿಯ ಮೇಲ್ವೀಚಾರಕಿಯರಿಗೆ ಏರ್ಪಡಿಸಿದ ಅರಿವು ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ಮಿಷನ್ ಶಕ್ತಿ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಮಿಷನ್ ಶಕ್ತಿ ಯೋಜನೆಯಡಿ ಲಭ್ಯವಿರುವ ಸೌಲಭ್ಯ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಧಾ.ಜಿ.ಮಣ್ಣೂರು ಮಾತನಾಡಿ, ಮಿಷನ್ ಶಕ್ತಿ ಯೋಜನೆಯ ಕಾರ್ಯವೈಖರಿ ದೇಶಕ್ಕೆ ಮಾದರಿಯಾಗಬೇಕು ಹಾಗೂ ಮಹಿಳೆಯರಿಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳು ನೀಡಿದ ಎಲ್ಲ ಯೋಜನೆಗಳ ಸೌಲಭ್ಯ ಪಡೆದುಕೊಂಡು ಅವರು ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಸಮಾಜದ ಎಲ್ಲ ಸ್ಥರದ ಮಹಿಳೆಯರನ್ನು ಜಾಗೃತಗೊಳಿಸುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ಅಧಿಕಾರಿಗಳ ಗುರುತರ ಜವಾಬ್ದಾರಿ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕಮಲಾ ಬೈಲೂರ ಮಾತನಾಡಿ, ಇಂದು ಮಹಿಳೆಯರು ಸ್ವತಂತ್ರವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಲು ತಯಾರಿದ್ದಾರೆ. ಸಮಾಜದ ಪ್ರತಿಯೊಂದು ಸ್ಥರದ ಮಹಿಳೆಯರಿಗೆ ಸಮಯಕ್ಕೆ ಸರಿಯಾಗಿ ಸರಿಯಾದ ಮಾಹಿತಿ ಸಹಕಾರ ಹಾಗೂ ಮಾರ್ಗದರ್ಶನದ ಸಮಾಲೋಚನೆ. ಅಗತ್ಯ ನೆರವು ನೀಡುವುದು ಈ ಯೋಜನೆಯ ಗುರಿಯಾಗಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೇಟೆಪ್ಪನವರ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಅಪೌಷ್ಠಿಕತೆ ಹೊಗಲಾಡಿಸಲು ಪೋಷಣಾ ಅಭಿಯಾನ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಯೋಜನೆ, ಹಲವಾರು ಸೇವೆಗಳು ಒಂದೇ ಕಡೆ ಸಿಗುಂತಾಗಲು ಸಖಿ ಒನ್ ಸ್ಟಾಪ್ ಸೆಂಟರ್, ಗರ್ಭೀಣಿ, ಬಾಣಂತಿಯರಿಗೆ ಆರ್ಥಿಕ ಸಹಾಯವಾಗಲು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಭಾಗ್ಯಲಕ್ಷ್ಮಿ, ಸುಕನ್ಯ ಸಮೃದ್ಧಿ ಯೋಜನೆ, ಮಹಿಳೆ ಮತ್ತು ಮಕ್ಕಳ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯ ಜತೆಗೆ ಮಿಷನ್ ಶಕ್ತಿ ಯೋಜನೆಯು ಸಮಾಜದ ಪ್ರತಿಯೊಬ್ಬ ಹೆಣ್ಣು ಮಗು, ಮಹಿಳೆಯರಿಗೆ ಸುರಕ್ಷತೆ, ಭದ್ರತೆ ಹಾಗೂ ಸಬಲೀಕರಣಕ್ಕಾಗಿ ಅಗತ್ಯ ಕ್ರಮಗಳನ್ನು ಹೆಚ್ಚಿನ ಉತ್ಸುಕತೆಯಿಂದ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮಾಡಬೇಕೆಂದು ಹೇಳಿದರು.

ಈ ವೇಳೆ ಐಸಿಡಿಎಸ್ ಅಧಿಕ್ಷಕ ರಾಜು ಕಂಠಿಗೊಣ್ಣವರ, ಕಚೇರಿ ವಿಭಾಗ ಅಧಿಕ್ಷಕಿ ಪ್ರಭಾವತಿ ಮುದಿಗೌಡರ್, ಸ್ತ್ರೀ ಶಕ್ತಿ ವಿಭಾಗ ಅಧಿಕ್ಷಕಿ ಕಸ್ತೂರಿ ಬಳ್ಳೋಳ್ಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕ ಶ್ರೀಧರ ಪೂಜಾರ ನಿರೂಪಿಸಿದರು. ಮಧು ಉಪ್ಪಾರ ವಂದಿಸಿದರು.