ಡಾ.ಮಹೇಶ್ ಜೋಶಿ ಸರ್ವಾಧಿಕಾರಿ ಧೋರಣೆ: ಪ್ರೊ.ಜಯಪ್ರಕಾಶಗೌಡ

| Published : Nov 15 2024, 12:33 AM IST

ಸಾರಾಂಶ

ಪರಿಷತ್ತಿನ ಅಧ್ಯಕ್ಷರೊಬ್ಬರೇ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ ಹಾಗೂ ಸರ್ಕಾರ ಮೂರು ಸಂಸ್ಥೆಗಳು ಸಮ್ಮೇಳನವನ್ನು ನಡೆಸುತ್ತಿದ್ದು, ಮೂರು ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡದೇ ಪರಿಷತ್ತೊಂದೇ ಎಲ್ಲ ತೀರ್ಮಾನ ಕೈಗೊಂಡಂತೆ ಭಾಸವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ವಿಚಾರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಜಿಲ್ಲಾಡಳಿತ ನೀಡಿರುವ ಸಲುಗೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಆರೋಪಿಸಿದರು.

ಪರಿಷತ್ತಿನ ಅಧ್ಯಕ್ಷರೊಬ್ಬರೇ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ ಹಾಗೂ ಸರ್ಕಾರ ಮೂರು ಸಂಸ್ಥೆಗಳು ಸಮ್ಮೇಳನವನ್ನು ನಡೆಸುತ್ತಿದ್ದು, ಮೂರು ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡದೇ ಪರಿಷತ್ತೊಂದೇ ಎಲ್ಲ ತೀರ್ಮಾನ ಕೈಗೊಂಡಂತೆ ಭಾಸವಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಅಧ್ಯಕ್ಷರು ಹೇಳಿಕೆ ನೀಡುವ ಮುನ್ನ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ತೀರ್ಮಾನಗಳನ್ನು ಪ್ರಕಟಿಸಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಸಮ್ಮೇಳನ ನಡೆಸದೆ ಕೇವಲ ಸಮಿತಿಗಳನ್ನು ರಚನೆ ಮಾಡಿ ಸುಮ್ಮನಾಗಿರುವುದು ರಾಜ್ಯಾಧ್ಯಕ್ಷರ ಪತ್ರಿಕಾ ಹೇಳಿಕೆಗಳಿಂದಾದ ಗೊಂದಲಗಳಿಗೆ ಕಾರಣವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಸರ್ಕಾರದ ಒಂದು ಅಂಗವೆಂಬಂತೆ ಬಿಂಬಿತವಾಗಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಮ್ಮೇಳನಾಧ್ಯಕ್ಷ ಆಯ್ಕೆಯನ್ನು ಗೌಪ್ಯತೆ ಕಾಪಾಡದೇ ವಿವಾದಕ್ಕೆ ಒಳಪಡಿಸಿದ್ದಾರೆ. ೧೯೯೪ರಲ್ಲಿ ನಡೆದ ಸಮ್ಮೇಳನ ಇಂದಿಗೂ ವ್ಯವಸ್ಥಿತ ರೀತಿಯಲ್ಲಿ ನಡೆದಿತ್ತು ಎಂಬ ಮಾತು ಪ್ರಚಲಿತದಲ್ಲಿದೆ. ಅಂದು ಉಳಿದ ಹಣದಲ್ಲಿ ಸ್ಥಳೀಯ ಸಾಂಸ್ಕೃತಿಕ ಪೋಷಕ ಸ್ಥಳಗಳ ನಿರ್ಮಾಣ, ಅಭಿವೃದ್ಧಿ ಮಾಡಲಾಗಿತ್ತು ಎಂದರು.

ನಗರದೊಳಗೆ ಸಮ್ಮೇಳನ ನಡೆಸಲು ಒತ್ತಡ:

ಸಮ್ಮೇಳನ ನಡೆಯುವ ಸ್ಥಳದ ವಿಚಾರವಾಗಿ ಅಧ್ಯಕ್ಷರು ತಮಗೂ ಸಮ್ಮೇಳನದ ಚಟುವಟಿಕೆಗಳಿಗೂ ಸಂಬಂಧವಿಲ್ಲದಂತೆ ಹೇಳಿಕೆ ನೀಡುತ್ತಿದ್ದಾರೆ. ಸ್ಥಳದ ಬಗ್ಗೆ ಜಿಲ್ಲಾಡಳಿತ ಇದುವರೆಗೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ, ನಗರದ ಒಳಗೆ ಸಮ್ಮೇಳನ ನಡೆಯಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಮ್ಮೇಳನಕ್ಕೆ ಸರ್ಕಾರದಿಂದ ೨೫ ಕೋಟಿ ರು. ನೀಡುತ್ತಿದ್ದು, ಜಿಲ್ಲೆಯ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡುವ ತೀರ್ಮಾನವನ್ನು ಘೋಷಿಸಿದ್ದಾರೆ. ನಗರದ ಸಾಂಸ್ಕೃತಿಕ ಪೋಷಕತೆಯ ಸ್ಥಳಗಳ ವ್ಯವಸ್ಥೆಯನ್ನು ಸರಿಪಡಿಸುವತ್ತ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

೨ ಕೋಟಿ ರು.ನಲ್ಲಿ ಸಾಂಸ್ಕೃತಿಕ ಪೋಷಕ ಸ್ಥಳಗಳ ಆಧುನೀಕರಣ:

ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ರೈತ ಸಭಾಂಗಣ, ಅಂಬೇಡ್ಕರ್ ಭವನಗಳು ಅವ್ಯವಸ್ಥೆಯಿಂದ ಕೂಡಿದ್ದು, ಎಲ್ಲಿಯೂ ೩೦೦ ಮಂದಿ ಕುಳಿದು ಸಭೆ ನಡೆಸುವಂತಹ ಸಭಾಂಗಣದ ವ್ಯವಸ್ಥೆ ಇಲ್ಲ. ಸುಮಾರು ೨ ಕೋಟಿ ರು. ವ್ಯಯಿಸಿದರೆ ಸಾಂಸ್ಕೃತಿಕ ಪೋಷಕ ಸ್ಥಳಗಳನ್ನು ಆಧುನೀಕರಣಗೊಳಿಸಬಹುದು ಎಂದು ಅಭಿಪ್ರಾಯಿಸಿದರು.

೨೫ ಕೋಟಿ ರು. ಖರ್ಚಿನ ಮಾಹಿತಿ ಬಹಿರಂಗಪಡಿಸಿ:

ಡಿಜಿಟಲ್ ಮಾಧ್ಯಮ ಯುಗದಲ್ಲಿ ಸಮ್ಮೇಳನ ನಡೆಯುವುದು ಜಗತ್ತಿಗೆ ತಿಳಿದಿದ್ದು, ೩೬ ಲಕ್ಷ ರು. ವ್ಯಯಿಸಿ ಪ್ರಚಾರ ರಥ ನಿರ್ಮಿಸುವ ಬದಲಿಗೆ ಮಿನಿ ಸಭಾಂಗಣ, ಓಪನ್ ಥಿಯೇಟರ್ ನಿರ್ಮಿಸಲು ಮುಂದಾದರೆ ಎಷ್ಟೋ ಅನುಕೂಲವಾಗಲಿದೆ. ಸಮ್ಮೇಳನಕ್ಕೆ ಘೋಷಣೆಯಾಗಿರುವ ೨೫ ಕೋಟಿ ರು. ಯಾವ ಕಾರಣಕ್ಕೆ ಖರ್ಚಾಗಲಿದೆ ಎಂಬುದನ್ನು ಬಹಿರಂಗ ಪಡಿಸಬೇಕು. ಅಖಿಲ ಭಾರತ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಸ್ಥಳೀಯವಾಗಿ ಆಗಬೇಕಾದ ರಸ್ತೆ ಸೇರಿದಂತೆ ಹಲವು ಮೂಲಭೂತ ವ್ಯವಸ್ಥೆಗಳನ್ನು ಸರಿ ಪಡಿಸಲು ಮುಂದಾಗಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಯಾಗಬೇಕು ಎಂಬ ಹೋರಾಟ ವರ್ಷಗಳಿಂದ ನಡೆಯುತ್ತಿದೆ ನಾಲ್ವಡಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಭಾಷೆ ಬೆಳವಣಿಗೆಯಲ್ಲಿ ಪರಿಷತ್ತು ನಿಷ್ಕ್ರಿಯ:

ಕನ್ನಡ ನಾಡಿನ ನೆಲ, ಜಲ, ಅಭಿವೃದ್ಧಿಗೆ ಸಾಹಿತ್ಯ ಪರಿಷತ್ತು ಹೋರಾಟ ಮಾಡಿಲ್ಲ, ಆಧುನಿಕ ಸಾಹಿತ್ಯ, ಪ್ರಾಚೀನ ಸಾಹಿತ್ಯದ ಕುರಿತು ಯಾವುದೇ ಸಮ್ಮೇಳನ ನಡೆಸದ ಪರಿಷತ್ತು, ಕನ್ನಡ ಆಡಳಿತ ಭಾಷೆ, ಕನ್ನಡ ಮಾಧ್ಯಮಗಳ ಬಗ್ಗೆ ಧ್ವನಿಯೆತ್ತದೆ ಸರ್ಕಾರದ ಜೊತೆ ಕೈ ಜೋಡಿಸುವ ಕೆಲಸ ಮಾಡುತ್ತಿದೆ. ಸಮ್ಮೇಳನ ಮಾಡಿ ಲೆಕ್ಕ ಕೊಡುವುದನ್ನು ಉದ್ದಿಮೆಯಾಗಿಸಿಕೊಂಡಿದೆ ಎಂದು ಕಿಡಿಕಾರಿದರು.

ಸಮ್ಮೇಳನದ ಸಿದ್ಧತೆ ನಡೆಯುತ್ತಿದ್ದು, ಮಂಡ್ಯ ನಗರಕ್ಕೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕು. ಪೂರ್ಣ ಪ್ರಮಾಣದಲ್ಲಿ ಸರ್ಕಾರ ಹಣ ಒದಗಿಸುತ್ತಿದ್ದು, ಇದನ್ನು ಕೇಂದ್ರ ಸಾಹಿತ್ಯ ಸಮ್ಮೇಳನವನ್ನಾಗಿ ಪರಿಗಣಿಸದೇ, ಅಖಿಲ ಭಾರತ ಸಾಹಿತ್ಯ ಸಮ್ಮೇಳನವನವೆಂದು ತಿಳಿದು, ಇಲ್ಲಾಗುವ ತೀರ್ಮಾನಗಳೆಲ್ಲವೂ ಉಸ್ತುವಾರಿ ಸಚಿವ ಮೂಲಕವೇ ಆಗಬೇಕು, ಪರಿಷತ್ ಅಧ್ಯಕ್ಷರು ತಮ್ಮ ವೈಯಕ್ತಿಕ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ಸಚಿವರು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪ್ರೊ.ಬಿ.ಶಂಕರೇಗೌಡ, ನಾಗಪ್ಪ, ರಾಜಶೇಖರ್, ಸುರೇಶ್, ಸಿ.ಕುಮಾರಿ ಇದ್ದರು.