ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವೈದ್ಯರತ್ನ ಡಾ.ಸಿ.ಎನ್.ಮಂಜುನಾಥ್ ಅವರು ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂದು ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಪಿ.ಮಹೇಶ್ಚಂದ್ರಗುರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವ ಕಂಡ ಹೃದಯ ತಜ್ಞ, ಹೃದಯವಂತ ಧನ್ವಂತರಿ ಮತ್ತು ಲಕ್ಷಾಂತರ ಹೃದಯಗಳ ರಕ್ಷಕ ಡಾ.ಸಿ.ಎನ್. ಮಂಜುನಾಥ್ ಕೃಷಿ ಸಂಸ್ಕೃತಿಯಲ್ಲಿ ಅರಳಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯನ್ನು ಇಡೀ ದಕ್ಷಿಣ ಏಷ್ಯಾದಲ್ಲಿ ಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಬೆಳೆಸಿದ ಧನ್ಯಜೀವಿ. ತಮ್ಮ ಸೇವಾವಧಿಯಲ್ಲಿ 75 ಲಕ್ಷ ಮಂದಿ ಹೊರ ರೋಗಿಗಳಿಗೆ ಚಿಕಿತ್ಸೆ ಹಾಗೂ 8 ಲಕ್ಷ ಮಂದಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಆಧುನಿಕ ಧನ್ವಂತರಿ ಎಂಬ ಜನಮನ್ನಣೆಗೆ ಡಾ.ಸಿ.ಎನ್. ಮಂಜುನಾಥ್ ಪಾತ್ರರಾಗಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆ ನಿರ್ವಹಣೆಗೆ ಕಾಯಕಲ್ಪ ಹಾಗೂ ಮಾನವಸ್ಪರ್ಶ ನೀಡಿದ ಇವರು ನಮ್ಮ ಕಾಲದ ಬಹುದೊಡ್ಡ ಮಾನವತಾವಾದಿ ಮತ್ತು ವೈದ್ಯರತ್ನ ಎಂಬುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.ಡಾ.ಸಿ.ಎನ್. ಮಂಜುನಾಥ್ ಇತ್ತೀಚೆಗೆ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸತತ 18 ವರ್ಷಗಳ ಸಾರ್ಥಕ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ.ಸಿ.ಎನ್. ಮಂಜುನಾಥ್ ಅವರು ರಾಜಕೀಯಕ್ಕೆ ಬರಬೇಕು, ಸಂಸದರಾಗಬೇಕು ಮತ್ತು ಮತ್ತಷ್ಟು ಬೆಳಗಬೇಕೆಂಬ ಬೇಡಿಕೆಯನ್ನು ಮಂಡಿಸುತ್ತಿರುವುದು ವೃತ್ತಿಧರ್ಮ ಪರಿಪಾಲನೆ ದೃಷ್ಟಿಯಿಂದ ಅಸಮರ್ಥನೀಯವಾಗಿದೆ. ಕರ್ನಾಟಕದಿಂದ ಒಂದು ಲೋಕಸಭಾ ಸ್ಥಾನವನ್ನು ಗೆಲ್ಲಬಹುದೆಂಬ ದುರಾಸೆಯಿಂದ ಇವರನ್ನು ಚುನಾವಣ ಕಣಕ್ಕೆ ಇಳಿಸಬೇಕೆಂಬ ರಾಜಕೀಯ ಸಂಚನ್ನು ಕೋಮುವಾದಿಗಳು ಮತ್ತು ಜಾತಿವಾದಿಗಳ ಕೂಟ ರೂಪಿಸಿದೆ ಎಂದು ಆರೋಪಿಸಿದ್ದಾರೆ.
ಬದುಕಿನುದ್ದಕ್ಕೂ ಜಾತ್ಯತೀತ ಎಂದು ಗಂಟೆ ಬಾರಿಸಿ ಕೊನೆಗಳಿಗೆಯಲ್ಲಿ ಕುಟುಂಬ ರಾಜಕಾರಣದ ಹಿತದೃಷ್ಟಿಯಿಂದ ಕೋಮುವಾದಿಗಳ ಜೊತೆ ಕೈ ಜೋಡಿಸಿದ ಎಚ್.ಡಿ.ದೇವೆಗೌಡರು ತಮ್ಮ ಜೀವಮಾನ ಪೂರ್ತಿ ಸಂಪಾದಿಸಿದ ಸಾರ್ವಜನಿಕ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.ಡಾ.ಸಿ.ಎನ್. ಮಂಜುನಾಥ್ ಪರೋಕ್ಷವಾಗಿ ತಮಗೆ ರಾಜಕೀಯ ಒಲವಿರುವುದನ್ನು ಖಚಿತಪಡಿಸಿದ್ದಾರೆ. ಇವರಂತಹ ಶ್ರೇಷ್ಠ ವೈದ್ಯರನ್ನು ದೇಶ ಕಳೆದುಕೊಳ್ಳಬಾರದು. ಇವರು ಮುಂಬರುವ ಸಂಸತ್ತಿನ ಚುನಾವಣೆಗೆ ಕೋಮುವಾದಿಗಳು ಮತ್ತು ಜಾತಿವಾದಿಗಳ ವಕ್ತಾರರಾಗಿ ಸ್ಪರ್ಧಿಸಿದರೆ ಇಷ್ಟು ವರ್ಷ ಸಂಪಾದಿಸಿರುವ ಪ್ರೀತ್ಯಾದರಗಳು ಖಂಡಿತ ಮರೆಯಾಗುತ್ತವೆ. ಇವರು ಸೂಕ್ತ ಆತ್ಮಾವಲೋಕನ ಮಾಡಿಕೊಂಡು ಇಷ್ಟು ವರ್ಷ ಅನುಸರಿಸಿದ ಘನತೆಯ ಹೆದ್ದಾರಿಯಲ್ಲಿ ಮುಂದೆ ಸಾಗಬೇಕೆಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ ಎಂದಿದ್ದಾರೆ.
ಡಾ.ಸಿ.ಎನ್.ಮಂಜುನಾಥ್ ವೈದ್ಯಲೋಕವೆಂಬ ಅರಮನೆಯಿಂದ ರಾಜಕಾರಣವೆಂಬ ಕೊಚ್ಚೆಗೆ ಬಂದು ದೇಶದ ಜನತೆಗೆ ದ್ರೋಹ ಮಾಡಬಾರದು ಎಂದು ಅವರು ತಿಳಿಸಿದ್ದಾರೆ.