ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಬಂಧಿಸಿ: ಎಬಿವಿಪಿ ಆಗ್ರಹ

| Published : Feb 29 2024, 02:01 AM IST / Updated: Feb 29 2024, 02:02 AM IST

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಬಂಧಿಸಿ: ಎಬಿವಿಪಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

‘ಪಾಕಿಸ್ತಾನ ಜಿಂದಾಬಾದ್’ ಎಂದು ದೇಶದ್ರೋಹಿ ಘೋಷಣೆ ಕೂಗಿದವರನ್ನು ಬಂಧಿಸಬೇಕು ಎಂದು ಅಗ್ರಹಿಸಿ ದಾವಣಗೆರೆಯಲ್ಲಿ ಎಬಿವಿಪಿ ಮುಖಂಡರು ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ನಾಸೀರ್ ಹುಸೇನ್ ಬೆಂಬಲಿಗರು ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿರುವುದು ದೇಶ ವಿರೋಧಿ ಕೃತ್ಯ. ದೇಶದ್ರೋಹಿ ಘೋಷಣೆ ಕೂಗಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಪ್ರತಿಭಟನೆ ನಡೆಸಿದರು.

ನಗರದ ಜಯದೇವ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡರು ಮಾತನಾಡಿ, ದೇಶದ್ರೋಹದ ಹೇಳಿಕೆ ನೀಡಿದ ಇಂತಹ ಖದೀಮರು ಕರ್ನಾಟಕದಿಂದ ಆಯ್ಕೆ ಆಗಿರುವುದು ಇಡೀ ಕನ್ನಡ ನಾಡಿನ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ತಕ್ಷಣ ಕಾಂಗ್ರೆಸ್ ಪಕ್ಷ ಇಂತಹ ದೇಶದ್ರೋಹಿ ಚಟುವಟಿಕೆಗಳ ಬಗ್ಗೆ ತನ್ನ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.ಅಲ್ಲದೇ, ಇದನ್ನು ಪ್ರಶ್ನಿಸಿದ ಮಾಧ್ಯಮದವರನ್ನು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಾಸೀರ್ ಹುಸೇನ್ ಮಾಧ್ಯಮದವರನ್ನು ಗದರಿಸಿ, ‘ನಡೀಯೋ ಯಾವನೋ ನೀನು ಎಂದು ಅಸಭ್ಯವಾಗಿ ವರ್ತಿಸುವುದು ಸಂಸದೀಯ ವರ್ತನೆಯಲ್ಲ. ಅವರದು ಅನಾಗರಿಕ ಪ್ರವೃತ್ತಿ ಎಂದಿದ್ದಾರೆ.ಇಂತಹ ಕೃತ್ಯ ನಡೆದಿರುವುದು ಅಸಹನೀಯ. ಇದು ಸಹಿಸಲು ಸಾಧ್ಯವಿಲ್ಲ. ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಅಗತ್ಯ ಎಂದು ಹೇಳಿದ್ದಾರೆ. ಮುನಿಯಪ್ಪ ನವರು ಸೂಕ್ತವಾದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆದ್ದರಿಂದ ನಾಸೀರ್ ಹುಸೇನ್ ರವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.ಈ ಪ್ರತಿಭಟನೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪದಾಧಿಕಾರಿಗಳು ಇದ್ದರು.

ಜಿಂದಾಬಾದ್‌ ಕೂಗಿದವರಿಗೆ ನಾಸಿರ್ ರಕ್ಷಣೆ: ಸಂದೀಪ್‌

ದಾವಣಗೆರೆ: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂರಾಷ್ಟ್ರ ಸೇನೆ ವತಿಯಿಂದ ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಕ್ತ ಕೆ.ಎನ್.ಸಂದೀಪ್‌ ಮಾತನಾಡಿ, ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಸೈಯದ್ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು, ಅವರನ್ನು ಪೊಲೀಸರು ಬಂಧಿಸಿಲ್ಲ. ಬಿಗಿ ಪೊಲೀಸ್ ಭದ್ರತೆ ಇದ್ದರೂ ಕೂಡ ಆ ಸ್ಥಳದಿಂದ ಅವರನ್ನು ನಿರಾಳವಾಗಿ ನಿರ್ಗಮಿಸಲು ಬಿಡಲಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರು ಸೈಯದ್ ನಾಸಿರ್ ಹುಸೇನ್ ರಕ್ಷಣೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಅಲ್ಲದೆ, ಇದನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಸೈಯದ್ ನಾಸಿರ್ ಹುಸೇನ್ ಅವರು, ಏಕವಚನದಲ್ಲಿ ಮಾತನಾಡಿದ್ದು, ಕೂಡಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವರನ್ನು ಬಂಧಿಸಬೇಕು. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.