ಸಾರಾಂಶ
ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಭಾರತದಲ್ಲಿ ನೂತನ ನೀತಿ ಜಾರಿಗೊಳಿಸಿ ಆರ್ಥಿಕ ಸುಧಾರಣೆಗಳ ಮೂಲಕ ದೇಶವನ್ನು ಸಂಕಷ್ಟದಿಂದ ಪಾರು ಮಾಡಿ ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕೀರ್ತಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಹೇಳಿದರು.ಶುಕ್ರವಾರ ಸಂಜೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಾಲೂಕು ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ 1991ರಲ್ಲಿ ನೂತನ ಆರ್ಥಿಕ ನೀತಿ ಮೂಲಕ ಭಾರತವನ್ನು ವಿಶ್ವದ ಆರ್ಥಿಕತೆಗೆ ಪರಿಚಯಿಸುವ ಕೆಲಸ ಮಾಡಿದರು. ಪ್ರಧಾನ ಮಂತ್ರಿಯಾಗಿದ್ದಾಗ ಮಾಹಿತಿ ಹಕ್ಕು ಕಾಯ್ದೆ, ನಿರುದ್ಯೋಗ ನಿವಾರಣೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಆಹಾರಭದ್ರತಾ ಕಾಯ್ದೆ ಜಾರಿಗೆ ತಂದರು. ಆ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿದ ಸರಳ ವ್ಯಕ್ತಿತ್ವದ, ಮೃಧು ಸ್ವಭಾಗದ ಮಹಾನ್ ವ್ಯಕ್ತಿಯಾಗಿದ್ದರು. ಅವರ ಆದರ್ಶಗಳನ್ನ ಕಾಂಗ್ರೆಸ್ ಕಾರ್ಯಕರ್ತರು ಅಳವಡಿಸಿಕೊಳ್ಳ ಬೇಕು ಎಂದರು.
ಹೋಬಳಿ ಕಾಂಗ್ರೆಸ್ ಘಟಕ ಅಧ್ಯಕ್ಷ ಕೆ.ವಿ.ಸಾಜು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಎಂ.ಸುಂದರೇಶ್, ಎಸ್.ಡಿ.ರಾಜೇಂದ್ರ, ಬಿಳಾಲು ಮನೆ ಉಪೇಂದ್ರ,ಸುನೀಲ್ ಕುಮಾರ್, ಜುಬೇದಾ, ದೇವಂತ್ ಗೌಡ, ಮಾಳೂರು ದಿಣ್ಣೆ ರಮೇಶ್, ರಜಿ, ಎಚ್.ಎಂ.ಶಿವಣ್ಣ, ಮಂಜುನಾಥ್, ನಂದೀಶ್, ಸುಬ್ರಹ್ಮಣ್ಯ, ಕಿರಣ,ಶ್ರೀನಿವಾಸ್ ಮತ್ತಿತರರಿದ್ದರು.