ಸಾರಾಂಶ
ಗೆಳೆಯರ ಬಳಗ ಕಾರಂತ ಪುರಸ್ಕಾರವನ್ನು ಸಾಹಿತಿ ಡಾ.ನಾ.ಮೊಗಸಾಲೆ ಇವರಿಗೆ ಪ್ರದಾನಿಸಲಾಯಿತು. ಉಡುಪಿ ರತ್ನ ಪ್ರತಿಷ್ಠಾನ ಕೊಡವೂರು ಸಂಚಾಲಕಿ ಪೂರ್ಣಿಮಾ ಜನಾರ್ದನ ಕೊಡವೂರ ಕಾರಂತರ ಸಂಸ್ಮರಣೆಗೈದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಕಾರಂತರ ವ್ಯಕ್ತಿತ್ವವೇ ಬಹು ವಿಶಿಷ್ಟವಾದದ್ದು, ಅವರ ಸಾಹಿತ್ಯಿಕ ಬದುಕು ಇತರೆಲ್ಲಾ ಸಾಹಿತಿಗಳಿಗಿಂತ ಭಿನ್ನವಾಗಿತ್ತು, ಅದು ಇಂದಿನ ಸಾಹಿತಿಗಳಿಗೂ ಮಾದರಿ ಎಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಪ್ರವರ್ತಕ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯಪಟ್ಟಿದ್ದಾರೆ.ಇಲ್ಲಿನ ಸಾಲಿಗ್ರಾಮದ ಗಿರಿಜಾ ಸಭಾಂಗಣದಲ್ಲಿ ಗೆಳೆಯರ ಬಳಗ ಕಾರ್ಕಡ ವತಿಯಿಂದ ಡಾ.ಕೋಟ ಶಿವರಾಮ ಕಾರಂತ ಜನ್ಮದಿನಾಚರಣೆ ಅಂಗವಾಗಿ ಕಾರಂತ ಸಂಸ್ಮರಣೆ, ಗೆಳೆಯರ ಬಳಗ ಕಾರಂತ ಪುರಸ್ಕಾರ ಕಾರ್ಯಕ್ರಮದಲ್ಲಿ ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ನಾಡು ಕಂಡ ಶ್ರೇಷ್ಠ ಸಾಹಿತಿಯಾಗಿ, ಕಲಾವಿದರಾಗಿ, ಬಹುವಿಧಗಳಲ್ಲಿ ಕಾರಂತರು ಬದುಕಿದ್ದವರು. ಕ್ರಿಯಾಶೀಲತೆಯೇ ಅವರ ಬದುಕಾಗಿತ್ತು. ಅವರಿಂದ ಆ ಸಂದರ್ಭದಲ್ಲಿ ಸಾಹಿತ್ಯಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗಿದೆ. ಆದರೆ ಪ್ರಸ್ತುತ ಆಧುನಿಕ ಜಗತ್ತಿನ ಕಾಲಘಟ್ಟದಲ್ಲಿ ಸಾಹಿತ್ಯಿಕ ಧ್ವನಿಯೇ ಕ್ಷೀಣಿಸುತ್ತಿದೆ ಎಂದರು.ಗೆಳೆಯರ ಬಳಗ ಕಾರಂತ ಪುರಸ್ಕಾರವನ್ನು ಸಾಹಿತಿ ಡಾ.ನಾ.ಮೊಗಸಾಲೆ ಇವರಿಗೆ ಪ್ರದಾನಿಸಲಾಯಿತು. ಉಡುಪಿ ರತ್ನ ಪ್ರತಿಷ್ಠಾನ ಕೊಡವೂರು ಸಂಚಾಲಕಿ ಪೂರ್ಣಿಮಾ ಜನಾರ್ದನ ಕೊಡವೂರ ಕಾರಂತರ ಸಂಸ್ಮರಣೆಗೈದರು.
ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ವಾದಿರಾಜ್ ಕೆ ಉದ್ಘಾಟಿಸಿದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ ಆನಂದ್ ಸಿ. ಕುಂದರ್, ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಸಿ. ಸುರೇಶ್ ತುಂಗ ಶುಭಾಶಂಯ ಕೋರಿದರು.ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ಎಚ್. ಜನಾರ್ದನ ಹಂದೆ ಗೌರವ ಉಪಸ್ಥಿತರಿದ್ದರು.ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಸ್ವಾಗತಿಸಿದರು. ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ ನಿರೂಪಿಸಿದರು. ಕಾರ್ಯದರ್ಶಿ ಕೆ.ಶೀನ ವಂದಿಸಿದರು.