ಕ್ಷೇತ್ರದ ಅಭಿವೃದ್ಧಿಗೆ ಎಲೆಮರೆಕಾಯಿಯಂತೆ ದಿ. ನೀಲೇಗೌಡರ ಸೇವೆ: ಶಿಕ್ಷಕ ಮಲ್ಲಿಗೆರೆ ನಂದೀಶ್

| Published : Jul 30 2025, 12:45 AM IST

ಕ್ಷೇತ್ರದ ಅಭಿವೃದ್ಧಿಗೆ ಎಲೆಮರೆಕಾಯಿಯಂತೆ ದಿ. ನೀಲೇಗೌಡರ ಸೇವೆ: ಶಿಕ್ಷಕ ಮಲ್ಲಿಗೆರೆ ನಂದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ನೀಲೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಇವರ ಹೆಸರು ಯುವ ಜನತೆಗೆ ಪರಿಚಯವಾಗಬೇಕು. ಆದ್ದರಿಂದ ರೈಲ್ವೆ ನಿಲ್ದಾಣದ ಬಳಿ ಇರುವ ವೃತ್ತಕ್ಕೆ ''ದಿ.ಬಿ.ವೈ.ನೀಲೇಗೌಡ ವೃತ್ತ'' ಎಂದು ನಾಮಕರಣ ಮಾಡಬೇಕಾಗಿರುವುದಾಗಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ದಿ.ಬಿ.ವೈ.ನೀಲೇಗೌಡರು ಶಾಸಕರಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿದ್ದಕ್ಕಿಂತಲೂ ಪಿಎಸ್ ಎಸ್ ಕೆ ಸಕ್ಕರೆ ಕಾರ್ಖಾನೆ ಸಂಸ್ಥಾಪಕರಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ ಎಂದು ಶಿಕ್ಷಕ ಮಲ್ಲಿಗೆರೆ ನಂದೀಶ್ ಹೇಳಿದರು.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಪಿಎಸ್ಎಸ್ ಕೆ ಸಂಸ್ಥಾಪಕರೂ, ಮಾಜಿ ಶಾಸಕರಾದ ದಿ.ಬಿ.ವೈ.ನೀಲೇಗೌಡರ ಬಹಳ ಅರ್ಥಪೂರ್ಣ ಜನ್ಮದಿನಾಚರಣೆಯಲ್ಲಿ ನೀಲೇಗೌಡರನ್ನು ಕುರಿತು ಉಪನ್ಯಾಸ ನೀಡಿದರು.

ಮೂಲತಃ ಪಾಂಡವಪುರ ತಾಲೂಕಿನ ಹಳೆಸಾಯಪ್ಪನಹಳ್ಳಿಯ ಬಿ.ವೈ.ನೀಲೇಗೌಡರು ಪಾಂಡವಪುರ ಉಪವಿಭಾಗದ ಕಣ್ಮಣಿಯಾಗಿದ್ದಾರೆ. ಪಾಂಡವಪುರದ ಮೊದಲ ಚುನಾಯಿತ ಶಾಸಕರಾಗಿ ಎರಡು ಅವಧಿಗೆ 10 ವರ್ಷಗಳ ಕಾಲ ಕ್ಷೇತ್ರಕ್ಕೆ ದುಡಿದಿದ್ದರು ಎಂದರು.

ಶಿಕ್ಷಣ, ರಸ್ತೆ ಅಭಿವೃದ್ಧಿ, ನೀರಾವರಿ ಮುಂತಾದ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿದ್ದಾರೆ. ಚಿನಕುರಳಿ ಗ್ರಾಮದ ಶ್ರೀರಾಮೇಶ್ವರ ಪ್ರೌಢಶಾಲೆ, ವಿಶ್ವೇಶ್ವರ ನಗರದ ಪಿ.ಎಸ್.ಎಸ್. ಕೆ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯನ್ನು ಸ್ಥಾಪಿಸಿ ಅನುದಾನವನ್ನು ಸರ್ಕಾರದಿಂದ ಕೊಡಿಸಿದ್ದಾರೆ ಎಂದು ಹೇಳಿದರು.

ವಿದ್ಯಾ ಪ್ರಚಾರ ಸಂಘಕ್ಕೂ ಕೂಡ ಕಾರ್ಖಾನೆಯಿಂದ ಅನುದಾನ ಕೊಟ್ಟಿದ್ದಾರೆ. ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದ ನೀಲೇಗೌಡ ಅವರು, ತಮ್ಮ ಅಪಾರ ದೂರದೃಷ್ಟಿಯಿಂದ ಜನ ಸೇವೆ ಮಾಡಿ ಮುತ್ಸದ್ದಿ ರಾಜಕಾರಣಿ ಎನಿಸಿಕೊಂಡಿದ್ದಾರೆ ಎಂದರು.

ನೀಲೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಇವರ ಹೆಸರು ಯುವ ಜನತೆಗೆ ಪರಿಚಯವಾಗಬೇಕು. ಆದ್ದರಿಂದ ರೈಲ್ವೆ ನಿಲ್ದಾಣದ ಬಳಿ ಇರುವ ವೃತ್ತಕ್ಕೆ ''''ದಿ.ಬಿ.ವೈ.ನೀಲೇಗೌಡ ವೃತ್ತ'''' ಎಂದು ನಾಮಕರಣ ಮಾಡಬೇಕಾಗಿರುವುದಾಗಿ ಅಭಿಪ್ರಾಯಪಟ್ಟರು.

ಜಿಲ್ಲೆಯ ಸಂಸದರು, ಮಾಜಿ ಸಚಿವರು ಮತ್ತು ಹಾಲಿ ಶಾಸಕರೆಲ್ಲರನ್ನೂ ನೇಗಿಲಯೋಗಿ ಸಮಿತಿ ವತಿಯಿಂದ ಭೇಟಿ ಮಾಡಿ ಅಹವಾಲು ಸಲ್ಲಿಸಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು. ಜತೆಗೆ ನೀಲೇಗೌಡರ ಜೀವನ ಕುರಿತು ಪುಸ್ತಕವನ್ನು ಸಮಿತಿ ವತಿಯಿಂದ ಹೊರ ತರಲು ತೀರ್ಮಾನಿಸಲಾಯಿತು.

ಟ್ರಸ್ಟ್ ಗೌರವಾಧ್ಯಕ್ಷರಾದ ಎಸ್. ಮಲ್ಲಿಕಾರ್ಜುನಗೌಡರು ಟ್ರಸ್ಟ್ ವತಿಯಿಂದ ದತ್ತಿ ನಿಧಿ ಸ್ಥಾಪಿಸಿ ಗಣ್ಯರ ಜನ್ಮ ದಿನ ಕಾರ್ಯಕ್ರಮಗಳನ್ನು ಆಚರಿಸಬೇಕೆಂದು ಅಭಿಪ್ರಾಯಪಟ್ಟರು.

ಟ್ರಸ್ಟ್ ರಾಜ್ಯಾಧ್ಯಕ್ಷ ಡಿ.ರವಿಕುಮಾರ್ ಮಾತನಾಡಿ, ದಿ.ಬಿ.ವೈ.ನೀಲೇಗೌಡರರ ದೂರ ದೃಷ್ಟಿಯಿಂದ ಪಿಎಸ್ ಎಸ್ ಕೆ ನಿರ್ಮಾಣವಾಗಿ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ರೈತರ ಬದುಕಿಗೆ ಹೊಸಬೆಳಕನ್ನು ನೀಡಿದ ಮಹಾನ್ ಚೇತನ. ನೀಲೇಗೌಡರ ಸಾಧನೆ ಬಗ್ಗೆ ಜೀವನ ಚರಿತ್ರೆ ಪುಸ್ತಕವನ್ನು ಹೊರತರಬೇಕು ಎಂದು ಹೇಳಿದರು.

ತಾಲೂಕು ಟ್ರಸ್ಟ್ ಗೆ ರೂಮ್ ಉಚಿತವಾಗಿ ನೀಡಿದ ವೆಂಕಟೇಶ್ವರ ಕಾಂಪ್ಲೆಕ್ಸ್ ಮಾಲೀಕ ಲಾರಿ ವೆಂಕಟೇಶ್ ಅವರನ್ನು ಗೌರವಿಸಲಾಯಿತು. ಇಂಗಲಗುಪ್ಪೆ ಗ್ರಾಮದ ಲಯನ್ ಇ.ಎಸ್ ನಾಗರಾಜ್ ದಿ.ಬಿ.ವೈ.ನೀಲೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಟ್ರಸ್ಟ್ ಗೌರವಾಧ್ಯಕ್ಷ ಎಸ್.ಮಲ್ಲಿಕಾರ್ಜುನಗೌಡ, ದತ್ತಿ ನಿಧಿ ಸ್ಥಾಪಿಸಿ ಗಣ್ಯರ ಜನ್ಮ ದಿನಾಚರಣೆ ಕಾರ್ಯಕ್ರಮಗಳನ್ನು ಆಚರಿಸಬೇಕೆಂದು ಅಭಿಪ್ರಾಯಪಟ್ಟರು. ಈ ವೇಳೆ ನೇಗಿಲ ಯೋಗಿ ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಗೌರವಾಧ್ಯಕ್ಷ ಎಸ್.ಮಲ್ಲಿಕಾರ್ಜುನೇಗೌಡ, ಖಜಾಂಚಿ, ರೈಟರ್ ಸ್ವಾಮಿಗೌಡ, ಪದಾಧಿಕಾರಿಗಳಾದ ಪೊಲೀಸ್ ಜವರೇಗೌಡ, ಬಿ.ಎಸ್.ಜಯರಾಂ, ಹೊಸಕೋಟೆ ವಿಜಯಕುಮಾರ್, ರಾಮಲಿಂಗೇಗೌಡ, ಗಿರಿಗೌಡ, ಅನಿತಾ ಲೋಕೇಶ್, ಸಿ.ಎಸ್.ಸುಬ್ಬೇಗೌಡ, ಶಂಕನಹಳ್ಳಿ ಕುಮಾರ್, ಎಚ್.ಕೆ.ಜನಾರ್ಧನ್, ಚಿನಕುರಳಿ ಭಾಸ್ಕರ್, ನಿಂಗೇಗೌಡ, ಕೃಷ್ಣೇಗೌಡ, ಮಂಜುಳಾ, ಸುಪ್ರಿಯಾ, ಚಂದ್ರಶೇಖರಯ್ಯ, ನಾಗೇಶ್, ಹೇಮಂತ್ ಇತರರಿದ್ದರು.