ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ತಮ್ಮ ಪತಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮಾವ ಡಾ.ಶಾಮನೂರು ಶಿವಶಂಕರಪ್ಪ ಸಾರಥ್ಯದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿದರು.ನಗರದ ತಮ್ಮ ನಿವಾಸ ಶಿವಪಾರ್ವತಿಯಲ್ಲಿ ಮನೆ ದೇವರಿಗೆ ಪೂಜೆ, ಅತ್ತೆ ದಿವಂಗತ ಪಾರ್ವತಮ್ಮ ಶಾಮನೂರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ತಮ್ಮ ಹೆತ್ತ ತಾಯಿ ಗಿರಿಜಮ್ಮ, ಹಾಗೂ ಮಾವನವರಾದ ಡಾ.ಶಾಮನೂರು ಶಿವಶಂಕರಪ್ಪನವರ ಆಶೀರ್ವಾದ ಪಡೆದು, ಶಾಬನೂರು ಶ್ರೀ ಆಂಜನೇಯ ಸ್ವಾಮಿ, ಶ್ರೀ ಈಶ್ವರ ದೇವಸ್ಥಾನಕ್ಕೆ ಪತಿ ಮಲ್ಲಿಕಾರ್ಜುನ ಜೊತೆಗೆ ತೆರಳಿ, ಪೂಜೆ ಸಲ್ಲಿಸಿದರು.
ಶಾಬನೂರಿನಲ್ಲೂ ಅಪಾರ ಬೆಂಬಲಿಗರು, ಅಭಿಮಾನಿಗಳು, ಮುಖಂಡರ ಜಯಘೋಷಗಳ ಮಧ್ಯೆ ಮತಯಾಚಿಸಿದ ನಂತರ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಬಳಿ ಪತಿ ಎಸ್.ಎಸ್.ಮಲ್ಲಿಕಾರ್ಜುನ, ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಇತರರ ಜೊತೆಗೆ ಪೂಜೆ ಸಲ್ಲಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ ನಂತರ ಅಪಾರ ಜನರ ಹರ್ಷೋದ್ಘಾರಗಳ ಮಧ್ಯೆ ವಾಹನವನ್ನೇರಿದರು. ಈ ಮಧ್ಯೆ ವಾಹನದಲ್ಲಿದ್ದಾಗಲೇ ಎಸ್.ಎಸ್.ಮಲ್ಲಿಕಾರ್ಜುನ ಬೆಣ್ಣೆದೋಸೆ ಸವಿದರಲ್ಲದೇ, ಡಾ.ಪ್ರಭಾ ಮಲ್ಲಿಕಾರ್ಜುನರಿಗೂ ತಿನಿಸಿ, ರೋಡ್ ಶೋ ಆರಂಭಿಸಿದರು.ಅತ್ತ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿ, ದರ್ಗಾದಲ್ಲಿ ಪೂಜೆ ಸಲ್ಲಿಸಿದರು. ಶಾಸಕರಾದ ಡಿ.ಜಿ.ಶಾಂತನಗೌಡ, ಶಿವಗಂಗಾ ವಿ.ಬಸವರಾಜ, ಬಿ.ದೇವೇಂದ್ರಪ್ಪ, ಎಂ.ಪಿ.ಲತಾ, ಕೆ.ಎಸ್.ಬಸವಂತಪ್ಪ, ಹಾಗೂ ಶ್ರೇಷ್ಟ ಎಂ.ಶಾಮನೂರು, ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ, ಬಿ.ಎಚ್.ವೀರಭದ್ರಪ್ಪ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ರೋಡ್ ಶೋನಲ್ಲಿ ಸಾಗಿದರು. ದುಗ್ಗಮ್ಮ ಗುಡಿಯಿಂದ ಶುರುವಾದ ಮೆರವಣಿಗೆ ಹಗೇದಿಬ್ಬ ವೃತ್ತ, ಕಾಳಿಕಾದೇವಿ ರಸ್ತೆ, ಚೌಕಿಪೇಟೆ, ಶ್ರೀ ಬಕ್ಕೇಶ್ವರ ದೇವಸ್ಥಾನ, ಹಾಸಬಾವಿ ಸರ್ಕಲ್, ಮಂಡಿಪೇಟೆ, ಲಕ್ಷ್ಮಿ ವೃತ್ತದ ಮಾರ್ಗವಾಗಿ ಪಾಲಿಕೆ ಮುಂಭಾಗ ತಲುಪಿತು.
ನಿಟುವಳ್ಳಿಯಿಂದ ಎಸ್ಸೆಸ್ ಮಲ್ಲಿಕಾರ್ಜುನ ರೋಡ್ ಶೋಗೆ ಚಾಲನೆ ನೀಡಿದರು. ಡಾ.ಪ್ರಭಾ ಮಲ್ಲಿಕಾರ್ಜುನ್‌ರಿದ್ದ ರೋಡ್ ಶೋ ಎಚ್‌ಕೆಆರ್ ವೃತ್ತ, ಡಾಂಗೇ ಪಾರ್ಕ್, ಶಿವಪ್ಪಯ್ಯ ವೃತ್ತ, ತ್ರಿಶೂಲ್ ಚಿತ್ರ ಮಂದಿರ ರಸ್ತೆ ಮಾರ್ಗ ವಾಗಿ ಹಳೆ ಪಿಬಿ ರಸ್ತೆ ಸೇರಿ, ಪಾಲಿಕೆ ಬಳಿ ಶಾಮನೂರು ಶಿವಶಂಕರಪ್ಪ ನೇತೃತ್ವದ ಮೆರವಣಿಗೆಯೊಂದಿಗೆ ವಿಲೀನವಾಯಿತು. ಅಲ್ಲಿಂದ ಉತ್ತರ-ದಕ್ಷಿಣ ಕ್ಷೇತ್ರಗಳಿಂದ ಬಂದು ಸೇರಿದ ಮೆರವಣಿಗೆಗಳು ಸಾಗಿ, ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಎಲ್ಲಿ ನೋಡಿದರಲ್ಲಿ ಜನಸಾಗರವೇ ಕಂಡು ಬಂದಿತು. ಸಿದ್ದರಾಮಯ್ಯ, ಶಾಮನೂರು ಶಿವಶಂಕರಪ್ಪ, ಎಸ್ಸೆಸ್ ಮಲ್ಲಿಕಾರ್ಜುನ, ಡಾ.ಪ್ರಭಾ ಮಲ್ಲಿಕಾರ್ಜುನ ಪರ ಮಾರ್ಗದುದ್ದಕ್ಕೂ ಬೆಂಬಲಿಗರು, ಕಾರ್ಯಕರ್ತರು ಜಯಘೋಷ ಮೊಳಗಿಸಿದರು.ಪಕ್ಷದ ಹಿರಿಯ ಮುಖಂಡರು ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಎಸ್.ರಾಮಪ್ಪ, ನಂದಿಗಾವಿ ಶ್ರೀನಿವಾಸ, ಅರಸೀಕೆರೆ ಕೊಟ್ರೇಶ, ಬಿ.ಎಂ.ವಾಗೀಶ ಸ್ವಾಮಿ, ಡಾ.ಟಿ.ಜಿ.ರವಿಕುಮಾರ, ಸಮರ್ಥ ಎಂ.ಶಾಮನೂರು, ಡಿ.ಬಸವರಾಜ, ಕೆ.ಚಮನ್ ಸಾಬ್, ಅಬ್ದುಲ್ ಲತೀಫ, ದಿನೇಶ ಶೆಟ್ಟಿ, ಮುದೇಗೌಡ್ರ ಗಿರೀಶ, ಹಿರಿಯ ವಕೀಲ ಪ್ರಕಾಶ ಪಾಟೀಲ, ಆರ್.ಎಚ್. ನಾಗಭೂಷಣ, ಮಾಗಾನಹಳ್ಳಿ ಪರಶುರಾಮ, ಬಿ.ಎಚ್.ವೀರಭದ್ರಪ್ಪ, ಎಲ್.ಎಂ.ಹನುಮಂತಪ್ಪ, ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ, ಎ.ನಾಗರಾಜ, ಗಣೇಶ ಹುಲ್ಮನಿ, ಪ್ರವೀಣ ಹುಲ್ಮನಿ, ಕೆ.ಎಲ್.ಹರೀಶ ಬಸಾಪುರ, ಶ್ರೀಕಾಂತ ಬಗರೆ, ಡಿ.ವಿ.ಮಲ್ಲಿಕಾರ್ಜುನ ಸ್ವಾಮಿ, ಎಲ್ಎಂಎಚ್ ಸಾಗರ್, ಎ.ಬಿ.ರಹೀಂ, ಎಚ್.ಜೆ.ಮೈನುದ್ದೀನ್ ಸೇರಿ ಅನೇಕ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಮೆರವಣಿಗೆಯಲ್ಲಿದ್ದರು.
ಮಾರ್ಗದಲ್ಲಿ ಅಲ್ಲಲ್ಲಿ ಕ್ರೇನ್ ಮೂಲಕ ಅಭಿಮಾನಿಗಳು, ಬೆಂಬಲಿಗರು ದೊಡ್ಡ ದೊಡ್ಡ ಹಾರಗಳನ್ನು ಡಾ.ಪ್ರಭಾ ಮಲ್ಲಿಕಾರ್ಜುನ, ಎಸ್.ಎಸ್.ಮಲ್ಲಿಕಾರ್ಜುನರಿಗೆ ಹಾಕಿ, ಜಯಘೋಷ ಕೂಗಿದರು. ರಸ್ತೆಯುದ್ದಕ್ಕೂ ಶಾಲು, ಹಾರ, ಮೈಸೂರು ಪೇಟ ತೊಡಿಸಿ ಸಚಿವ ಮಲ್ಲಿಕಾರ್ಜುನ, ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಅಭಿನಂದಿಸುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಶ್ರೀ ಶಿವಯೋಗಿ ಮಂದಿರ ಬಳಿ ಬಸವನಗೌಡ ರಸ್ತೆಯಲ್ಲಿ ಶಿವಪ್ಪಯ್ಯ ವೃತ್ತದಿಂದ ಆಗಮಿ ಸಿದ ಎಸ್ಸೆಸ್ ಮಲ್ಲಿಕಾರ್ಜುನರಿಂದ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಬೆಂಬಲಿಗರು, ಸ್ಥಳೀಯ ವ್ಯಾಪಾರಸ್ಥರು ಕನ್ನಡ ನಾಡು, ನುಡಿಯ ಸಂಕೇತ ಪೇಟ ಹಾಕಿಸಿ, ಶುಭಾರೈಸಿದರು. ಮಾರ್ಗದುದ್ದಕ್ಕೂ ಡಾ.ಪ್ರಭಾರ ಭಾವಚಿತ್ರ ಹಿಡಿದ ಬಿಳಿ ಬಾವುಟ ಹಿಡಿದು, ಜಯ ಘೋಷ ಕೂಗುತ್ತಿದ್ದ ಕಾರ್ಯಕರ್ತರು ಗಮನ ಸೆಳೆದರು.