ಡಾ.ಪ್ರಭಾ ಕನ್ನಡದಲ್ಲಿ ಪ್ರಮಾಣ ವಚನ: ದಾವಣಗೆರೆಯಲ್ಲಿ ಸಂಭ್ರಮ

| Published : Jun 25 2024, 12:31 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಇತಿಹಾಸ ರಚಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ ದೇಶದ ಶಕ್ತಿ ಕೇಂದ್ರದ ಮೆಟ್ಟಿಲುಗಳಿಗೆ ತಲೆ ಹಚ್ಚಿ ನಮಸ್ಕರಿಸಿ, ತಮ್ಮನ್ನು ಆಯ್ಕೆ ಮಾಡಿ ಕಳಿಸಿದ ಕ್ಷೇತ್ರದ ಮತದಾರರಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಸಂಸದರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ತಿನಲ್ಲಿ ಮಾದರಿ ಹೆಜ್ಜೆ ಗುರುತು ದಾಖಲಿಸಿದರು.

- ಸಂಸತ್‌ ಸದನ ಮೆಟ್ಟಿಲಿಗೆ ಹಣೆಹಚ್ಚಿ ನಮನ । ಮಾವ ಶಾಮನೂರು ಬಳಿಕ ಲೋಕಸಭೆ ಪ್ರವೇಶಿಸಿದ ಕಿರಿಯ ಸೊಸೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಇತಿಹಾಸ ರಚಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ ದೇಶದ ಶಕ್ತಿ ಕೇಂದ್ರದ ಮೆಟ್ಟಿಲುಗಳಿಗೆ ತಲೆ ಹಚ್ಚಿ ನಮಸ್ಕರಿಸಿ, ತಮ್ಮನ್ನು ಆಯ್ಕೆ ಮಾಡಿ ಕಳಿಸಿದ ಕ್ಷೇತ್ರದ ಮತದಾರರಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಸಂಸದರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ತಿನಲ್ಲಿ ಮಾದರಿ ಹೆಜ್ಜೆ ಗುರುತು ದಾಖಲಿಸಿದರು.

ತಮ್ಮ ಮಾವನವರ ನಂತರ ಶಾಮನೂರು ಶಿವಶಂಕರಪ್ಪ ಕುಟುಂಬದಿಂದ ಲೋಕಸಭೆ ಪ್ರವೇಶಿಸಿದ, ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾದಿ ಡಾ.ಪ್ರಭಾ ಮಲ್ಲಿಕಾರ್ಜುನ ಇತಿಹಾಸ ರಚಿಸಿರುವುದು ವಿಶೇಷ.

ಗಣಿ ಮತ್ತು ಭೂ ವಿಜ್ಞಾನ ಸಚಿವ, ಪತಿ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಒಲಿಯದ ಲೋಕಸಭಾ ಕ್ಷೇತ್ರವನ್ನು ತಾವು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಗೆದ್ದು, ಸ್ವತಃ ಪತಿ ಎಸ್.ಎಸ್. ಮಲ್ಲಿಕಾರ್ಜುನ, ಮಕ್ಕಳಾದ ಸಮರ್ಥ ಎಂ.ಶಾಮನೂರು, ಶ್ರೇಷ್ಠ ಎಂ.ಶಾಮನೂರು, ಶಿವ ಎಂ.ಶಾಮನೂರು ಸಮೇತ ಲೋಕಸಭೆಗೆ ಪ್ರವೇಶಿಸಿದ ಡಾ.ಪ್ರಭಾ ಮೊಗದಲ್ಲಿ ಎಲ್ಲಿಲ್ಲದ ಸಂಭ್ರಮ ಮನೆಮಾಡಿತ್ತು.

ಕಾಂಗ್ರೆಸ್ಸಿನ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಹೂವು ಮೇಲೆತ್ತಿದಂತೆ ಸುಲಭವಾಗಿ ಗೆದ್ದು ತೋರಿಸಿದ್ದಾರೆ ಡಾ.ಪ್ರಭಾ. ಸಂಸದೆ ಡಾ.ಪ್ರಭಾ ಗೆಲುವಿನಲ್ಲಿ ಪತಿ, ಸಚಿವ ಮಲ್ಲಿಕಾರ್ಜುನ ಅತ್ಯಂತ ಸಂಭ್ರಮದಲ್ಲಿ ಇದ್ದುದು ಕಂಡುಬಂತು. ಕ್ಷೇತ್ರದ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಮೂಲಕ ಕಾಂಗ್ರೆಸ್ಸಿಗೆ ವಿಜಯಲಕ್ಷ್ಮೀ ಒಲಿಯುವಂತೆ ಮಾಡಿದ ಪತ್ನಿ ಡಾ.ಪ್ರಭಾ ಬಗ್ಗೆ ಮನಸ್ಸಿನಲ್ಲೇ ಹೆಮ್ಮೆಪಡುತ್ತಿದ್ದರು. ಫ್ಯಾಮಿಲಿ ಗ್ಯಾಲರಿಯಲ್ಲಿ ಮಕ್ಕಳಾದ ಸಮರ್ಥ, ಶ್ರೇಷ್ಠ, ಶಿವ ಜೊತೆಗೆ ಕುಳಿತು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಪತ್ನಿ ಡಾ.ಪ್ರಭಾ ಪ್ರಮಾಣ ವಚನ ಸ್ವೀಕರಿಸುವ ದೃಶ್ಯವನ್ನು ಕಣ್ಮನ ತುಂಬಿಕೊಂಡರು.

ಡಾ.ಪ್ರಭಾ ಲೋಕಸಭೆ ಅಂಗಳದಲ್ಲೂ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು. ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ನಾಲ್ಕೈದು ಭಾಷೆಗಳನ್ನು ಬಲ್ಲವರು ಪ್ರಭಾ. ಬಹುಭಾಷೆಗಳ ಮೇಲೆ ಹಿಡಿತ ಹೊಂದಿದ್ದಾರೆ. ದಂತ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ, ತಾವು ಓದಿದ ಕಾಲೇಜಿನ ಆಡಳಿತ ಮಂಡಳಿ ಸದಸ್ಯರೂ ಆಗಿದ್ದಾರೆ.

ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮನ್ನು ಸಂಸದೆಯಾಗಿ ಆಯ್ಕೆ ಮಾಡಿದ ಕ್ಷೇತ್ರದ ಮತದಾರರು, ಪಕ್ಷದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಜನ ಪ್ರತಿನಿಧಿಗಳು, ವಿಶೇಷವಾಗಿ ಕಾರ್ಯಕರ್ತರು, ಎಲ್ಲಾ ಸಮುದಾಯ ಬಾಂಧವರು, ಹಿತೈಷಿಗಳಿಗೆ ಡಾ.ಪ್ರಭಾ ಕೃತಜ್ಞತೆ ಸಲ್ಲಿಸಿದ್ದಾರೆ.

ಇತ್ತ ದಾವಣಗೆರೆಯ ನಿವಾಸ ಶಿವ ಪಾರ್ವತಿಯಲ್ಲಿಯೂ ಸಂಭ್ರಮವೋ ಸಂಭ್ರಮ. ತಮ್ಮ ಕಿರಿಯ ಸೊಸೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಮಾಣ ವಚನ ಸ್ವೀಕರಿವ ದೃಶ್ಯಗಳನ್ನು ಟಿವಿಯಲ್ಲಿ ತಮ್ಮ ಹಿತೈಷಿ, ಹಿರಿಯ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮತ್ತಿತರರ ಜೊತೆಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವೀಕ್ಷಿಸಿದರು. ಸೊಸೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ನಂತರ ತಮ್ಮ ಕುಟುಂಬದಿಂದ ಲೋಕಸಭೆ ಪ್ರವೇಶಿಸಿದ ಡಾ.ಪ್ರಭಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಅಭಿಮಾನದಿಂದ ಶ್ಲಾಘಿಸಿದರು.

- - - (-ಫೋಟೋಗಳಿವೆ.)