ವಿವಾದಾತ್ಮಕ ಹೇಳಿಕೆ ಆರೋಪ: ಡಾ. ಪ್ರಭಾಕರ ಭಟ್‌ ಠಾಣೆಗೆ ಹಾಜರು

| Published : Nov 06 2025, 02:45 AM IST

ವಿವಾದಾತ್ಮಕ ಹೇಳಿಕೆ ಆರೋಪ: ಡಾ. ಪ್ರಭಾಕರ ಭಟ್‌ ಠಾಣೆಗೆ ಹಾಜರು
Share this Article
  • FB
  • TW
  • Linkdin
  • Email

ಸಾರಾಂಶ

ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಪುತ್ತೂರು ಗ್ರಾಮಾಂತರ ಠಾಣೆಯ ತನಿಖಾಧಿಕಾರಿಯ ನೊಟೀಸ್ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಪುತ್ತೂರು: ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಪುತ್ತೂರು ಗ್ರಾಮಾಂತರ ಠಾಣೆಯ ತನಿಖಾಧಿಕಾರಿಯ ನೊಟೀಸ್ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಬುಧವಾರ ಸಂಜೆ ಪುತ್ತೂರು ಗ್ರಾಮಾಂತರ ಠಾಣೆಗೆ ಆಗಮಿಸಿದ ಪ್ರಭಾಕರ ಭಟ್, ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ಸೂಚಿಸಿರುವ ಹಿನ್ನೆಲೆ ಪೊಲೀಸರು ಅವರ ಹೇಳಿಕೆ ದಾಖಲಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಪ್ರಭಾಕರ ಭಟ್ ಹಾಜರಾಗುವುದಕ್ಕೆ ಮೊದಲು ದೂರುದಾರೆ ಈಶ್ವರಿ ಪದ್ಮುಂಜ ಅವರು ತನ್ನ ಪರ ವಕೀಲ ಸತೀಶನ್ ಪಿ.ಕೆ ಅವರೊಂದಿಗೆ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ತನ್ನ ದೂರಿಗೆ ಪೂರಕವಾದ ದಾಖಲೆಗಳನ್ನು ನೀಡಿರುವುದಾಗಿ ತಿಳಿದು ಬಂದಿದೆ. ಪ್ರಕರಣದ ಹಿನ್ನಲೆ:

ಅ.೨೦ರಂದು ಪುತ್ತೂರು ತಾಲೂಕಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಾಡಿದ ಭಾಷಣದ ಬಗ್ಗೆ ಈಶ್ವರಿ ಪದ್ಮುಂಜ ಎಂಬವರು ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರಿನಂತೆ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಅ.೨೫ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಡಾ. ಪ್ರಭಾಕರ ಭಟ್ ಅವರ ಮನೆಗೆ ನೋಟೀಸ್ ಜಾರಿಗೊಳಿಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅ. ೨೭ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮಧ್ಯಂತರ ಆದೇಶ ನೀಡಿ ಪೂರ್ಣ ವಿಚಾರಣೆಯನ್ನು ಅ. ೨೯ಕ್ಕೆ ಮುಂದೂಡಿತ್ತು.

ಅ.೨೯ರಂದು ದೂರುದಾರೆ ಈಶ್ವರಿ ಪದ್ಮುಂಜ ಅವರ ಪರ ವಕೀಲರು ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ಬಿಎನ್‌ಎಸ್‌ಎಸ್ ಸೆಕ್ಷನ್ ೩೩೮, ೩೩೯ ಅಡಿ ವಾದ ಮಂಡಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಅಂದು ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ನ.೪ಕ್ಕೆ ಮುಂದೂಡಿತ್ತು.