ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ ಪವಾರ ಅವರು ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿರುವ ಸುದ್ದಿ ಆಘಾತ ತಂದಿದೆ. ಬಾರಾಮತಿ ಕ್ಷೇತ್ರದ ಜನಪ್ರಿಯ ನಾಯಕರಾಗಿ ರಾಜ್ಯದ ಡಿಸಿಎಂ ಹುದ್ದೆಯಲ್ಲಿ ಜನಸೇವೆಗೆ ತೊಡಗಿದ್ದ ಅವರ ನಿಧನ ಮಹಾರಾಷ್ಟ್ರ, ದೇಶಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ನಿಕಟಪೂರ್ವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ದುಃಖ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ ಪವಾರ ಅವರು ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿರುವ ಸುದ್ದಿ ಆಘಾತ ತಂದಿದೆ. ಬಾರಾಮತಿ ಕ್ಷೇತ್ರದ ಜನಪ್ರಿಯ ನಾಯಕರಾಗಿ ರಾಜ್ಯದ ಡಿಸಿಎಂ ಹುದ್ದೆಯಲ್ಲಿ ಜನಸೇವೆಗೆ ತೊಡಗಿದ್ದ ಅವರ ನಿಧನ ಮಹಾರಾಷ್ಟ್ರ, ದೇಶಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ನಿಕಟಪೂರ್ವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ದುಃಖ ವ್ಯಕ್ತಪಡಿಸಿದ್ದಾರೆ. ಜನಾನುರಾಗಿಯಾಗಿದ್ದ ಅವರು ರೈತರ ಹಾಗೂ ದೀನ ದಲಿತರ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದರು. ಪಾರದರ್ಶಕ ವ್ಯಕ್ತಿತ್ವದ ಅಜಿತ ಪವಾರ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದರು. ತಳಮಟ್ಟದಲ್ಲಿ ಪಕ್ಷ ಬಲಪಡಿಸಿದ್ದರು. ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಮೌಲಿಕ ಯೋಗದಾನ ನೀಡಿದ್ದರು. ವಿಶೇಷವಾಗಿ ಹಣಕಾಸು, ನೀರಾವರಿ ಮತ್ತು ಕೃಷಿ ಕ್ಷೇತ್ರಗಳಲ್ಲಿ ಅವರ ಕಾರ್ಯಕ್ಷಮತೆ ಗಮನಾರ್ಹವಾಗಿತ್ತು. ರೈತ ಸಮಸ್ಯೆಗಳು, ನೀರಿನ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಕುರಿತು ಅವರು ತೆಗೆದುಕೊಂಡ ಕ್ರಮಗಳು ಚರ್ಚೆಗೆ ಒಳಗಾಗಿದ್ದವು. ಕೆಲವೊಮ್ಮೆ ಅವರ ನಿರ್ಧಾರಗಳು ವಿವಾದಗಳಿಗೆ ಕಾರಣವಾದರೂ, ಬಲವಾದ ನಾಯಕತ್ವ ಗುಣದಿಂದ ಎಲ್ಲವನ್ನೂ ನಿಭಾಯಿಸಿದ್ದರು. ಪವಾರ ಕುಟುಂಬದೊಂದಿಗೆ ನನ್ನದು ಆತ್ಮೀಯ ಒಡನಾಟ ಹಾಗೂ ಗರಿಷ್ಠ ಸಂಬಂಧವಿದೆ. ಸಹೋದರ ಸಮಾನನಾಗಿದ್ದ ಅಜಿತ ಪವಾರ ಒಬ್ಬ ಸರ್ವೋತ್ತಮ ನಾಯಕನಾಗಿದ್ದ, ಹೃದಯವಂತ ನಾಯಕನನ್ನು ಸಮಾಜವು ಬಹುಬೇಗನೆ ಕಳೆದುಕೊಳ್ಳುವಂತಾಯಿತು. ಮಹಾರಾಷ್ಟ್ರದಲ್ಲಿ ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯಲ್ಲಿ ಅಜಿತ ಪವಾರ ಹಾಗೂ ಶರದ ಪವಾರ ಕುಟುಂಬದವರು ಬಹಳಷ್ಟು ಸಹಾಯ ಸಹಕಾರ ನೀಡಿದ್ದನ್ನು ಮರೆಯುವಂತಿಲ್ಲ. ಅಂತೆಯೇ ಶರದ್ ಪವಾರ ಹಾಗೂ ಅಜಿತ ಪವಾರ ಅವರು ಬಾರಾಮತಿಯಲ್ಲಿ ಕೃಷಿಕ್ಷೇತ್ರದಲ್ಲಿ ಮಾಡಿರುವ ಸಾಧನೆಯು ನನ್ನ ಮೇಲೆ ಅತೀಯಾದ ಪ್ರಭಾವ ಬೀರಿತು. ಅಂತೆಯೆ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಸ್ಥಾಪನೆಯಲ್ಲಿ ಪವಾರ ಕುಟುಂಬದ ಕೊಡುಗೆ ಬಹುದೊಡ್ಡದು. ಕೆಲಸದ ವಿಷಯದಲ್ಲಿ ಅವರದು ಕೇವಲ ಆಶ್ವಾಸನೆಯಾಗಿರಲಿಲ್ಲ, ಅದನ್ನು ತಕ್ಷಣ ಕೃತಿಯಲ್ಲಿ ತರುತ್ತಿದ್ದರು. ಅವರೊಬ್ಬ ನೇರವಾದಿ ಮತ್ತು ಸ್ಪಷ್ಟವಾದಿಯಾಗಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ಬಹಳ ದುಃಖ ತಂದಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಕರುಣಿಸಲೆಂದು ಪ್ರಾರ್ಥಿಸುತ್ತೇನೆಂದು ಡಾ.ಕೋರೆಯವರು ಕಂಬನಿ ಮಿಡಿಸಿದ್ದಾರೆ.