ಕನ್ನಡಪ್ರಭ ವಾರ್ತೆ ಮಂಡ್ಯ
ಒಳ್ಳೆಯ ಸಂಸ್ಕಾರ ಕಲಿಯಲು, ಆದರ್ಶವನ್ನು ಅಳವಡಿಸಿಕೊಳ್ಳಲು ವರನಟ ಡಾ.ರಾಜ್ ಕುಮಾರ್ ಅವರು ನಟಿಸಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿರುವ ಪ್ರತಿಯೊಂದು ಚಲನಚಿತ್ರಗಳು ಮಾದರಿಯಾಗಿವೆ ಎಂದು ಮೈಸೂರು ಮಹಾರಾಣಿ ಮಹಿಳಾ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಪಿ.ವಿ.ನಾಗರಾಜ ತಿಳಿಸಿದರು.ನಗರದ ಸರ್ಕಾರಿ ಮಹಿಳಾ ಕಾಲೇಜಿನ (ಸ್ವಾಯತ್ತ)ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಮಹಿಳಾ ಕಾಲೇಜು ಆಶ್ರಯದಲ್ಲಿ ನಡೆದ ವರನಟ ಡಾ.ರಾಜ್ ಕುಮಾರ್ ಅವರ 97ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಚಿತ್ರಗಳಲ್ಲಿ ಪೌರಾಣಿಕ, ಸಾಮಾಜಿಕ, ಕೌಟುಂಬಿಕ ಸೇರಿದಂತೆ ಸಮಾಜಕ್ಕೆ ಎಲ್ಲಾ ರೀತಿಯಲ್ಲೂ ಬೇಕಾದ ಒಳ್ಳೆಯ ಸಂದೇಶಗಳನ್ನು ಕಲಾ ಮಾಧ್ಯಮದ ಮೂಲಕ ನೀಡಿದ ಮೇರು ನಟ ರಾಜಕುಮಾರ ಅವರ ಚಿತ್ರಗಳು ಯಾವುದೇ ಪಾತ್ರ. ಸಂಭಾಷಣೆ ಹಾಗೂ ಹಾಡುಗಳು ಸಹ ಸೆನ್ಸಾರ್ ಕತ್ತರಿಗೆ ಒಳಪಟ್ಟಿಲ್ಲ ಎಂಬುದನ್ನು ಅರಿಯಬೇಕು ಎಂದರು.ಕನ್ನಡ ಚಿತ್ರರಂಗದ ಮೇರುನಟ, ಗಾಯಕ ಮತ್ತು ಸಾಂಸ್ಕೃತಿಕ ಐಕಾನ್. ‘ನಟಸಾರ್ವಭೌಮ’ ಎಂದೇ ಕರೆಯಲ್ಪಡುವ ಇವರು 5 ದಶಕಗಳ ವೃತ್ತಿಜೀವನದಲ್ಲಿ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಇವರು, ಕನ್ನಡ ಚಿತ್ರರಂಗದ ಧ್ರುವತಾರೆ ಎಂದು ಶ್ಲಾಘಿಸಿದರು.
ದೇಶ ಅಭಿವೃದ್ಧಿ ಹಾಗೂ ಭವಿಷ್ಯಯುವ ಜನತೆಯಿಂದ ಮಾತ್ರ ಸಾಧ್ಯ. ಯುವ ಸಮೂಹವು ನೈತಿಕತೆ, ಮಾನವೀಯತೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಡಾ.ರಾಜ್ ಕುಮಾರ್ ಮೇರುನಟರಾಗಿ ಸ್ವಲ್ಪವೂ ಕೂಡ ಅಹಂ ಇಲ್ಲದೆ ಸಾಮಾನ್ಯರಲ್ಲಿ ಸಾಮನ್ಯರಾಗಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರ ಕೀರ್ತಿ ತಂದು ಕೊಟ್ಟರು. ಅವರ ಸರಳ ಜೀವನ ಶೈಲಿ ಹಾಗೂ ನೈತಿಕ ಮೌಲ್ಯ ಆದರ್ಶಗಳನ್ನು ಯುವ ಜನತೆಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಡಾ.ರಾಜ್ ಕುಮಾರ್ ಅವರು ಉನ್ನತ ಪ್ರಶಸ್ತಿಯನ್ನು ಪಡೆದು ನಿರ್ಮಾಪಕರನ್ನೇ ಅನ್ನದಾತರೆಂದು ಅವರಿಗೆ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತಿದ್ದರು. ಅವರ ಸರಳ ಜೀವನ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.ಇದೇ ವೇಳೆ ಸರ್ಕಾರಿ ಮಹಿಳಾ ಕಾಲೇಜಿನ ಸಮಾಜ ಶಾಸ್ತ್ರ ಪ್ರಾಧ್ಯಾಪಕ ಮನ್ಸೂರ್ ಪಾಷ ಅವರು, ರಾಜ್ ಕುಮಾರ್ ಅವರ ಚಿತ್ರಗೀತೆಯನ್ನು ಹಾಡಿ ಗಮನ ಸೆಳೆದರು. ವೇದಿಕೆಯಲ್ಲಿ ವಾರ್ತಾ ಮತ್ತು ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ರವಿಕಾಂತ್ ಲಂಬಾಣಿ, ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ರಾಜ್ಯ ಅಧ್ಯಕ್ಷ ಎಲ್.ಸಂದೇಶ್, ಹಿರಿಯ ಪತ್ರಕರ್ತರಾದ ದೇವರಾಜು ಕೊಪ್ಪ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರಾದ ದಾನೇಗೌಡ, ಶಿವರಾಜು ಹಾಗೂ ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.