ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವ್ಯಾಪಾರೀಕರಣವಾಗುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ಡಾ.ರಾಜೇಶ್ವರಿ ಅವರು ಕಡಿಮೆ ವೆಚ್ಚದಲ್ಲಿ ಜನರ ಆರೋಗ್ಯಕ್ಕೆ ಚಿಕಿತ್ಸೆ ನೀಡುವ ಮೂಲಕ ಮನೆ ಮಾತಾಗಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಶ್ಲಾಘಿಸಿದರು.ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ 8 ನೇ ವರ್ಷದ ಎಂ.ಶಿವಲಿಂಗಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಡಾ.ರಾಜೇಶ್ವರಿ ಅವರು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿ ಜನರ ಕಾಪಾಡುವ ನಿಟ್ಟಿನಲ್ಲಿ ರೋಗಿಗಳನ್ನು ತಾಳ್ಮೆಯಿಂದ ಉಪಚರಿಸಿ ಸರಳ ಔಷಧಿಗಳನ್ನು ನೀಡಿ ಮನೆ ಮಾತಾಗಿದ್ದಾರೆ. ಇವರ ಸೇವೆ ಅಮೂಲ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜೇಶ್ವರಿಯವರು ತಂದೆ ಮತ್ತು ಮಾವನವರು ನಡೆದ ಹಾದಿಯಲ್ಲಿ ಕೆ.ಆರ್.ಪೇಟೆ ತಾಲೂಕಿನಲ್ಲಿ ಜನರ ಮೆಚ್ಚುಗೆ ಗಳಿಸಿ ಡಾ.ರಾಜೇಶ್ವರಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಸಲಹಾ ಶುಲ್ಕ 200-300 ರು. ಇರುವ ಸಂದರ್ಭದಲ್ಲಿ ಇವರು ಕೇವಲ 50 ರು ಗೆ ಚಿಕಿತ್ಸೆ ಸಲಹೆ ನೀಡುತ್ತಿ ರುವುದು ಪ್ರಶಂಸನೀಯ ಎಂದರು.ಎಂ.ಶಿವಲಿಂಗಯ್ಯ ಅವರು ಗ್ರಾಮ ಸಹಾಯಕರಾಗಿ ರೈತರ ಸೇವೆ ಮಾಡುತ್ತಾ ಬಂದವರು. ಸ್ವಯಂ ನಿವೃ ತ್ತಿ ನಂತರವೂ ಸಹ ಜನರಿಗೆ ಬೇಕಾದ ಸೇವೆ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕವಾಗಿ ದುಡಿದವರು. ಸಮಾಜ ಸೇವಕ ಶಿವಲಿಂಗಯ್ಯ ಹೆಸರಿನ ಸಮಾಜ ಸೇವಾ ಪ್ರಶಸ್ತಿಯನ್ನು ವೈದ್ಯರಾದ ರಾಜೇಶ್ವರಿ ಅವರಿಗೆ ನೀಡುತ್ತಿರುವುದು ಅರ್ಥ ಪೂರ್ಣ ಹಾಗೂ ಪ್ರಶಸ್ತಿಗೂ ಗೌರವ ಹೆಚ್ಚಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ವೈದ್ಯೆ ಡಾ.ಎನ್.ಆರ್.ರಾಜೇಶ್ವರಿ ಮಾತನಾಡಿ, ತಾವು ಮಾಡಿರುವ ಮುಷ್ಟಿಯಷ್ಟು ಕೆಲಸಕ್ಕೆ ಇಷ್ಟು ದೊಡ್ಡ ಪ್ರಶಸ್ತಿ ನೀಡುತ್ತಿರುವುದು ಮುಜುಗರ ಉಂಟುಮಾಡಿದೆ. ನಿಮ್ಮ ಅಭಿಮಾನವನ್ನು ಉಳಿಸಿಕೊಳ್ಳುವ ಭರವಸೆ ನೀಡುತ್ತೇನೆ. ನಮ್ಮ ತಾಯಿ ಪ್ರಯತ್ನದಿಂದ ವೈದ್ಯಳಾಗುವ ಅವಕಾಶ ಸಿಕ್ಕಿದ್ದು ಆಕಸ್ಮಿಕ. ಇದು ತಾಯಿಯ ಭಿಕ್ಷೆ ಎಂದು ಹೇಳಿದರೆ ತಪ್ಪಾಗಲಾರದು. ಕೊನೆಯ ಉಸಿರಿರುವವರೆಗೂ ವೈದ್ಯಕೀಯ ಸೇವೆಯನ್ನು ಮುಂದುವರೆಸುವ ಇಚ್ಛೆ ಇದೆ ಎಂದರು.ಕರ್ನಾಟಕ ಸಂಘ ಕೊಡಮಾಡುವ ಎಂ.ಶಿವಲಿಂಗಯ್ಯ ಸಮಾಜ ಸೇವಾ ಪ್ರಶಸ್ತಿಯನ್ನು ಕೆಆರ್ ಪೇಟೆಯ ಖ್ಯಾತ ವೈದ್ಯರಾದ ಎನ್.ಆರ್.ರಾಜೇಶ್ವರಿ ಅವರಿಗೆ 100 ಸಾವಿರ ರು. ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ ಅಧ್ಯಕ್ಷತೆ ವಹಿಸಿದ್ದರು. ರೈತ ನಾಯಕಿ ಕೆ.ಎಸ್.ನಂದಿನಿ ಜಯರಾಮ್ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ದತ್ತಿ ದಾನಿಗಳಾದ ಎಂ.ಕೆ.ಲಕ್ಷ್ಮಿ, ಕುಟುಂಬ ವರ್ಗದ ಮಂಜುಳಾ ಉದಯಶಂಕರ್, ರತ್ನಶ್ರೀ ಹರೀಶಕುಮಾರ್, ವತ್ಸಲಾ ಪ್ರಕಾಶ, ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.