ದೊಡ್ಡಬಳ್ಳಾಪುರ: ಇಲ್ಲಿನ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಹಾಗೂ ವಿವಿಧ ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ 97ನೇ ಜನ್ಮದಿನಾಚರಣೆಯನ್ನು ಶುಕ್ರವಾರ ಇಲ್ಲಿನ ಜಯಚಾಮರಾಜೇಂದ್ರ ವೃತ್ತದಲ್ಲಿರುವ ಡಾ.ರಾಜ್‌ಕುಮಾರ್ ಪುತ್ಥಳಿ ಮುಂಭಾಗ ಸಂಭ್ರಮದಿಂದ ಆಚರಿಸಲಾಯಿತು.
ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದ ಬಳಿಕ, ರಾಜ್‌ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.ಬಳಿಕ ಮಾತನಾಡಿದ ಮುಖಂಡರು, ಡಾ.ರಾಜ್‌ಕುಮಾರ್ ಅವರು ಕನ್ನಡದ ಅಸ್ಮಿತೆಯ ಸಂಕೇತ. ಪಾತ್ರಗಳ ಮೂಲಕ ಸಾಮಾಜಿಕ ಸಂದೇಶವನ್ನು ನಿರಂತರವಾಗಿ ನೀಡಿದ ಅವರು, ಎಲ್ಲ ವರ್ಗಗಳು, ಎಲ್ಲ ವಯೋಮಿತಿಯ ಜನತೆಗೆ ಮಾದರಿ ಆಲೋಚನೆಗಳನ್ನು ಬಿತ್ತಿದರು. ಕನ್ನಡ ಚಳವಳಿ, ಹೋರಾಟ, ಭಾಷಾ ಅಸ್ಮಿತೆ, ನಾಡು-ನುಡಿಯ ಚಿಂತನೆಗಳಿಗೆ ಡಾ.ರಾಜ್ಕುಮಾರ್ ಅನ್ವರ್ಥ ಎಂಬಂತೆ ತನ್ನ ಬದುಕನ್ನು ರೂಪಿಸಿಕೊಂಡಿದ್ದರು. ಅವರಿಗೆ ಮರಣೋತ್ತರವಾಗಿ ಭಾರತರತ್ನ ಪುರಸ್ಕಾರ ದೊರೆಯಬೇಕು. ಇದಕ್ಕಾಗಿ ಸಹಿ ಸಂಗ್ರಹ ಅಭಿಯಾನವನ್ನು ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದು ತಿಳಿಸಿದರು.
ದೊಡ್ಡಬಳ್ಳಾಪುರದೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಡಾ.ರಾಜ್‌ಕುಮಾರ್, ಕಂಪನಿ ನಾಟಕಗಳ ಕಾಲದಿಂದಲೂ ಈ ಊರಿನ ಜೊತೆ ಬಾಂಧವ್ಯ ಬೆಸೆದುಕೊಂಡಿದ್ದರು. ಕೆಸಿಎನ್ ಗೌಡರ ಅನೇಕ ಚಿತ್ರಗಳಲ್ಲಿ ಅವರು ಪಾತ್ರ ಮಾಡಿದ್ದು, ದೊಡ್ಡಬಳ್ಳಾಪುರ ಸುತ್ತಮುತ್ತಲ ಅನೇಕ ತಾಣಗಳಲ್ಲಿ ಅವರ ಹಲವು ಚಿತ್ರಗಳು ಚಿತ್ರೀಕರಣಗೊಂಡಿದ್ದವು ಎಂಬುದು ವಿಶೇಷ ಎಂದು ತಿಳಿಸಿದರು.ಸರ್ಕಾರ ಡಾ.ರಾಜ್‌ಕುಮಾರ್ ಅವರ ದಿನವನ್ನು ಕಲಾವಿದರ ದಿನವಾಗಿ ಆಚರಿಸಬೇಕು. ಈಗಾಗಲೇ ಸರ್ಕಾರದ ವತಿಯಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಚರಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರಗಳಲ್ಲೂ ಆಚರಣೆ ನಡೆಯಬೇಕು. ಕನ್ನಡದ ಅನನ್ಯತೆಯ ಸಂಕೇತವಾದ ಅವರು, ಅಭಿನಯ, ಗಾಯನ, ರಂಗಭೂಮಿ ಸೇರಿದಂತೆ ಬಹುಬಗೆಯ ಕಲಾಚಟುವಟಿಕೆಗಳ ಸಂಗಮ ಸಂಕೇತ ಎಂದು ಬಣ್ಣಿಸಿದರು.
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ಹಿರಿಯ ಕನ್ನಡಪರ ಹೋರಾಟಗಾರರಾದ ತ.ನ.ಪ್ರಭುದೇವ್, ಸಂಜೀವನಾಯಕ್, ಸಂಘಟನೆಗಳ ಮುಖಂಡರಾದ ಡಿ.ಪಿ.ಆಂಜನೇಯ, ವಿ.ಪರಮೇಶ್, ವೆಂಕಟೇಶ್, ಮುನಿಪಾಪಯ್ಯ, ಗುರುರಾಜಪ್ಪ, ಜೆ.ಆರ್.ರಮೇಶ್, ಅಪ್ಪಿ ವೆಂಕಟೇಶ್, ಟಿ.ಜಿ.ಮಂಜುನಾಥ್, ಎನ್.ಮಹದೇವ್, ಪ್ರಮೀಳಾ ಮಹದೇವ್, ಮಂಜುನಾಥ್, ಜಿ.ಸುರೇಶ್, ಡಿ.ಸಿ.ಚೌಡರಾಜು, ಮರುಳಾರಾಧ್ಯ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
24ಕೆಡಿಬಿಪಿ3- ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಡಾ.ರಾಜ್‌ಕುಮಾರ್ ಅವರ 97ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.