ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ದೋರನಹಳ್ಳಿ ಗ್ರಾಮದ ನಿರಾಶ್ರಿತೆ ನಾಗಮ್ಮ ರಾಮಣ್ಣ ಮಡ್ನಾಳ್ (81) ಅವರಿಗೆ ನೆರವು ದೊರಕಿಸಿ ಕೊಡುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ರವೀಂದ್ರ ಹೊನೋಲೆ ಗ್ರಾಮದ ವೃದ್ಧೆಯ ಮುರುಕಲು ಗುಡಿಸಲಿಗೆ ಭೇಟಿ ನೀಡಿ ವೃದ್ಧೆಯ ಸ್ಥಿತಿಗತಿ ಅವಲೋಕಿಸಿದರು.ವೃದ್ಧೆಯು ವಾಸವಿರುವ ಗುಡಿಸಲು ಮುಳ್ಳು ಕಂಟಿಯ ಮಧ್ಯೆ ಇದ್ದು, ಅಲ್ಲಿ ವಿಷ ಜಂತುಗಳ ತಾಣವೇ ಇದೆ. ಅದರಲ್ಲಿಯೆ ಆಕೆ ನಿತ್ಯ ವಾಸ, ಆಕೆಯ ಸುತ್ತಮುತ್ತಲ ಮನೆಗಳ ಜನರು ಊಟ ನೀಡುತ್ತಾರೆ. ಆಕೆಯ ಗಂಡ ತೀರಿ ಹೋಗಿದ್ದು, ಸಮಾಧಿ ಪಕ್ಕದಲ್ಲೆ ಸುಮಾರು ವರ್ಷಗಳಿಂದ ವಾಸಿಸುತ್ತಿದ್ದಾಳೆ. 4 ಗಂಡು ಮಕ್ಕಳು ಇದ್ದು ದುಶ್ಚಟಗಳಿಗೆ ದಾಸರಾದ ಅವರು ಎಲ್ಲೆಂದರಲ್ಲಿ ಇರುತ್ತಾರೆ. ವೃದ್ಧೆಯ ಬಳಿ ಯಾವುದೆ ಗುರುತಿನ ಚೀಟಿ ಇಲ್ಲದೆ ಸರ್ಕಾರದ ಯಾವುದೆ ಸೌಲಭ್ಯ ಪಡೆಯದೆ ವಂಚಿತೆಯಾಗಿದ್ದಾಳೆ. ಆಕೆಯದ್ದೆ ಖಾಲಿ ನಿವೇಶನವಿದ್ದು ಅಲ್ಲಿಯೇ ಮನೆ ನಿರ್ಮಿಸಲು ನ್ಯಾ.ರವೀಂದ್ರ ಹೊನೋಲೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ನ್ಯಾ. ರವೀಂದ್ರ ಹೊನೋಲೆ ವೃದ್ಧೆಯ ಸಮಸ್ಯೆ ಆಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂರಿನ ಜತೆಗೆ ಮೂಲಸೌಕರ್ಯಗಳು ತಕ್ಷಣ ಒದಗಿಸಲು ಸೂಚಿಸಿದರು.ಮನವಿಗೆ ಸ್ಪಂದಿಸಿದ ಶಹಾಪುರ ತಾಪಂ ಇಒ ಸೋಮಶೇಖರ್ ಬಿರಾದಾರ್, ಶನಿವಾರ ಗ್ರಾಮದ ನಾಗಮ್ಮಳ ಮನೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಮನಗಂಡು ತಕ್ಷಣ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ವೃದ್ಧೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮಾದರಿ ಮನೆ ನಿರ್ಮಿಸಿ ಕೊಡುವಂತೆ ಸೂಚನೆ ನೀಡಿದರು.
ತಾವೇ ಖುದ್ದಾಗಿ ಸ್ಥಳದಲ್ಲಿ ಹಾಜರಿದ್ದು, ಜೋಪಡಿಯ ಸುತ್ತಮುತ್ತಲು ಜೆಸಿಬಿ ಮೂಲಕ ಸ್ವಚ್ಛತೆ ಮಾಡಿಸಿ ಮಾನವೀಯತೆ ಮೆರೆದರು.ಜಿಲ್ಲಾ ನ್ಯಾಯಾಧೀಶರ ಭೇಟಿ ವೇಳೆ ಉಪತಹಸೀಲ್ದಾರ್ ಸಂಗಮೇಶ ನಾಯಕ್, ಆರ್.ಐ. ಮಹೇಂದ್ರಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ದೇವೆಂದ್ರ ಬಿರಾದಾರ್ ಸೇರಿದಂತೆ ಅಂಬೇಡ್ಕರ್ ನಗರದ ನಿವಾಸಿಗಳು ಇದ್ದರು. ತಾಪಂ ಇಒ ಬೇಟಿ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ, ಸದಸ್ಯೆ ತಾಯಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ್, ಗ್ರಾಮ ಆಡಳಿತ ಅಧಿಕಾರಿ, ಹಾಗೂ ಆರೋಗ್ಯ ಅಧಿಕಾರಿಗಳು, ಗ್ರಾಮದ ನಿವಾಸಿಗಳು ಹಾಜರಿದ್ದರು.ನೋಂದವರ, ಸರ್ಕಾರಿ ಸೌಲಭ್ಯ ವಂಚಿತ ವ್ಯಕ್ತಿಗಳು, ಮಾನಸಿಕ ಅಸ್ವಸ್ಥರು, ವಿಕಲಚೇತನರು, ಕೋಮು ಘರ್ಷಣೆಗೆ ಬಲಿಯಾದವರು, ಎಸ್ಸಿ, ಎಸ್ಟಿ, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆ ಕೆಲಸಗಾರರು ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಕಾನೂನು ಸೇವಾ ಪ್ರಾಧಿಕಾರ ನೆರವು ನೀಡಲು ಸದಾ ಸಿದ್ಧವಿದೆ.
ನ್ಯಾ. ರವೀಂದ್ರ ಹೊನೋಲೆ, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರಿ.81 ವಯಸ್ಸಿನ ವೃದ್ಧೆ ನಾಗಮ್ಮಳಿಗೆ ಸರ್ಕಾರದಿಂದ ಸಿಗುವಂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ವಿಳಂಬವಾಗದಂತೆ ತಕ್ಷಣ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಉಮಾಕಾಂತ ಹಳ್ಳೆ, ತಹಸೀಲ್ದಾರ್, ಶಹಾಪುರ.