ಶರಣರ, ಪ್ರವಾದಿಗಳ ಸಂದೇಶಗಳೆರಡೂ ಒಂದೇ: ಡಾ. ಬಸವಲಿಂಗ ಶ್ರೀ

| Published : Feb 18 2024, 01:31 AM IST

ಶರಣರ, ಪ್ರವಾದಿಗಳ ಸಂದೇಶಗಳೆರಡೂ ಒಂದೇ: ಡಾ. ಬಸವಲಿಂಗ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರ ಸಂಜೆ ಇಲ್ಲಿನ ಭೈರಿದೇವರಕೊಪ್ಪದ ಸನಾ ಎಜ್ಯುಕೇಶನಲ್‌ ಸನಾ ಮನ್ಸೂರಿ ಎಜುಕೇರ್‌ ಅಕಾಡೆಮಿಯ ಸಂಕುಸ್ಥಾಪನೆ, ಗ್ರಂಥಗಳ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.

ಹುಬ್ಬಳ್ಳಿ: ಬಸವಾದಿ ಶರಣರ ಹಾಗೂ ಪ್ರವಾದಿಗಳ ಸಂದೇಶಗಳೆರಡೂ ಒಂದೇ ಆಗಿದ್ದು, ಅವುಗಳ ಮಹತ್ವ, ಕಲ್ಪನೆ ಅರಿತು ನಡೆದರೆ ಜೀವನದಲ್ಲಿ ಸನ್ಮಾರ್ಗ ದೊರೆಯಲಿದೆ ಎಂದು ಶಿರೂರಿನ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರ ಹಾಗೂ ಮಹಾಂತ ತೀರ್ಥಕ್ಷೇತ್ರದ ಡಾ. ಬಸವಲಿಂಗ ಶ್ರೀಗಳು ಹೇಳಿದರು.

ಅವರು ಶನಿವಾರ ಸಂಜೆ ಇಲ್ಲಿನ ಭೈರಿದೇವರಕೊಪ್ಪದ ಸನಾ ಎಜ್ಯುಕೇಶನಲ್‌ ಕ್ಯಾಂಪಸ್‌ನಲ್ಲಿ ಸನಾ ಮಹಮ್ಮದ ಹುಸೇನ ಮಳಗಿ ಚಾರಿಟೇಬಲ್‌ ಫೌಂಡೇಶನ್‌ ಮತ್ತು ಬಸವಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸನಾ ಮನ್ಸೂರಿ ಎಜುಕೇರ್‌ ಅಕಾಡೆಮಿಯ ಸಂಕುಸ್ಥಾಪನೆ, ಗ್ರಂಥಗಳ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಯಾವುದೇ ಧರ್ಮದಲ್ಲಾಗಲಿ ಎಲ್ಲಿಯೂ ವಿರೋಧಿಸುವುದನ್ನು ಕಲಿಸಿಲ್ಲ. ಎಲ್ಲರನ್ನು ಪ್ರೀತಿಸುವುದು, ಗೌರವಿಸುವುದನ್ನೇ ಕಲಿಸುತ್ತದೆ. ಹಾಗಾಗಿ, ಯಾವುದೇ ಧರ್ಮವಾಗಲಿ ಅದನ್ನು ಗೌರವಿಸುವ ಕಾರ್ಯವಾಗಬೇಕಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ ಕುಂಞ ಮಾತನಾಡಿ, ಭಾರತ ಸಮಾನತೆ, ಸಹೋದರತ್ವ ಹೊಂದಿದ ದೇಶ. ಆದರೆ, ಇಂದು ಧರ್ಮದ ಹೆಸರಿನಲ್ಲಿ ಹಗತನೆ, ವೈರತ್ವ ಮೂಡಿಸುವ ಕಾರ್ಯವಾಗುತ್ತಿದೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಅಧರ್ಮಿಗಳಾಗುತ್ತಿದ್ದಾರೆ. ಅಧರ್ಮಿಗಳ ಕೈಯಲ್ಲಿ ಧರ್ಮ ಸಿಲುಕಿ ನಲಗುತ್ತಿದೆ. ಇಂತಹವರಿಂದ ಧರ್ಮವನ್ನು ಕಾಪಾಡುವ ಕಾರ್ಯವಾಗಬೇಕಿದೆ. ನಿಜವಾದ ಧರ್ಮದ ಕುರಿತು ಜನರಿಗೆ ಮನವರಿಕೆ ಮಾಡುವ ಕಾರ್ಯವಾದಾಗ ಮಾತ್ರ ಜನರಲ್ಲಿ ಜಾಗೃತಿ ಮೂಡಿ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಲಿದೆ.

ಮನುಷ್ಯ ಮನುಷ್ಯರನ್ನು ಧ್ವೇಷಿಸುವ ಕಾರ್ಯ ಮಾಡುವವರು ಧರ್ಮರಾಕ್ಷಸರು. ಸತ್ಯವನ್ನು ಜೋರಾಗಿ ಹೇಳುವ ಕಾರ್ಯವಾಗಬೇಕು. ಇಲ್ಲದೇ ಇದ್ದರೆ ಅಲ್ಲಿ ಸುಳ್ಳಿನ ಸಾಮ್ರಾಜ್ಯ ವಿಜೃಂಭಿಸುತ್ತದೆ ಎಂದು ಡಾ. ಬಿ.ಆರ್‌. ಅಂಬೇಡ್ಕರ್ ನುಡಿದಿದ್ದಾರೆ. ನಾವೆಲ್ಲರೂ ಜಾತಿ, ಧರ್ಮ ಎಂಬ ಮನೋಭಾವನೆ ಕೈಬಿಟ್ಟು ಪರಸ್ಪರ ಸಹೋದರತ್ವದ ಭಾವನೆ ಹೊಂದಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಭೂ ದಾನಿ, ಸ್ತ್ರೀರೋಗ ತಜ್ಞೆ ಡಾ. ಮೆಹರುನ್ನಿಸಾ ಮನ್ಸೂರಿ ಮಾತನಾಡಿ, ಶ್ರೀಮಂತರಂತೆ ಕಡುಬಡವರಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಸದುದ್ದೇಶದಿಂದ ಈ ಭೂಮಿಯನ್ನು ದಾನ ಮಾಡಿದ್ದೇನೆ. ಉಳ್ಳವರು ಬಡವರು, ನಿರ್ಗತಿಕರಿಗೆ ದಾನ ಮಾಡಿ. ನಾವು ಸತ್ತಾಗ ಏನನ್ನೂ ತಗೆದುಕೊಂಡು ಹೋಗುವುದಿಲ್ಲ. ನಮ್ಮ ಹಿಂದೆ ಬರುವುದು ನಾವು ಮಾಡಿದ ಒಳ್ಳೆಯ ಕೆಲಸ. ಪ್ರತಿಯೊಬ್ಬರೂ ಸೇವಾಮನೋಭಾವ ಹೊಂದಿ ಎಂದರು.

ಸಂಸ್ಥೆಯ ಚೇರಮನ್‌ ಎಂ.ಎಂ. ಮಳಗಿ ಮಾತನಾಡಿ, ಇಂದು ಸಮಾಜದಲ್ಲಿ ದ್ವೇಷದ ರಾಜಕಾರಣ ವ್ಯಾಪಕವಾಗಿ ಹರಡುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ. ಒಬ್ಬರು ಮತ್ತೊಬ್ಬರನ್ನು ಪ್ರೀತಿಸುವುದನ್ನು ಬಿಟ್ಟು ದ್ವೇಷಿಸುವ ಕಾರ್ಯಗಳಾಗುತ್ತಿವೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಹಿಂದು-ಮುಸ್ಲಿಮರ ಕುರಿತು ಜನರಲ್ಲಿ ಮೂಡಿರುವ ತಪ್ಪುಕಲ್ಪನೆ ತೆಗೆದುಹಾಕುವ ಕಾರ್ಯವಾಗಬೇಕಿದೆ. ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಬಸವ ಭಕ್ತಿ ವಚನಗಳು, ಬಸವ ತತ್ವ ಹಾಗೂ ಇಸ್ಲಾಂ, ಇಸ್ಲಾಂ ಮತ್ತು ಪರಧರ್ಮ ಸಹಿಷ್ಣುತೆ, ಕುರ್‌ಆನ್‌ ಪರಿಚಯ, ಮುಹಮ್ಮದ- ಜಗತ್ತು ಕಂಡ ಅದ್ಭುತ ವ್ಯಕ್ತಿ ಎಂಬ ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಾಯಿತು. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಸಿಂಡಿಕೇಟ್‌ ಸದಸ್ಯ ಯು.ಟಿ. ಇಫ್ತಿಕಾರ ಫರೀದ ಅಲಿ, ಬಸವಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ, ಮುತುವಲ್ಲಿ ಎಸ್‌.ಎಂ. ಹುಡೇದ ಮಾತನಾಡಿದರು.

ಪದ್ಮಶ್ರೀ ಪುರಸ್ಕೃತ ಅಬ್ದುಲ್‌ಖಾದರ ನಡಕಟ್ಟಿನ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಅಯ್ಯುಬ ಸವಣೂರ, ಅಶ್ರಫಅಲಿ ಬಶೀರ ಮಹಮ್ಮದ, ಎಸ್‌.ಬಿ. ಸಿಂಧಗಿ, ಖಾಲಿದ ಮಳಗಿ, ಡಾ. ಅಬ್ದುಲ್‌ ಕರೀಂ ಸೇರಿದಂತೆ ಹಲವರಿದ್ದರು.