ಚಿಕ್ಕಮಗಳೂರು, ಮಕ್ಕಳು ಭವಿಷ್ಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿಂದ ಪಾಲಕರು ಬಾಲ್ಯದಿಂದಲೇ ಆಂಗ್ಲ ಭಾಷೆ ವ್ಯಾಮೋಹ ಬಿತ್ತುವ ಮುಖಾಂತರ ಕನ್ನಡ ಭಾಷೆ ನಶಿಸುವಂತೆ ಮಾಡುತ್ತಿರುವುದು ದುರ್ಧೈವ ಎಂದು ಲೇಖಕಿ ಡಾ. ಸಬಿತಾ ಬನ್ನಾಡಿ ವಿಷಾದ ವ್ಯಕ್ತಪಡಿಸಿದರು.
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 70ನೇ ಕನ್ನ ಡ ರಾಜ್ಯೋತ್ಸವ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳು ಭವಿಷ್ಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿಂದ ಪಾಲಕರು ಬಾಲ್ಯದಿಂದಲೇ ಆಂಗ್ಲ ಭಾಷೆ ವ್ಯಾಮೋಹ ಬಿತ್ತುವ ಮುಖಾಂತರ ಕನ್ನಡ ಭಾಷೆ ನಶಿಸುವಂತೆ ಮಾಡುತ್ತಿರುವುದು ದುರ್ಧೈವ ಎಂದು ಲೇಖಕಿ ಡಾ. ಸಬಿತಾ ಬನ್ನಾಡಿ ವಿಷಾದ ವ್ಯಕ್ತಪಡಿಸಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ಧ 70ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಭಾಷಾ ಬಳುವಳಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯದೇ ಕೇವಲ ಜೀವನದ ಆಸೆಗಳನ್ನು ಈಡೇರಿಸಿಕೊಳ್ಳಲು ಆಂಗ್ಲ ಭಾಷೆ ಬಳಸುವುದು ತರವಲ್ಲ ಎಂದು ಹೇಳಿದರು.ಕನ್ನಡಿಗರು ಮೊದಲು ಕನ್ನಡ ಕಟ್ಟುವ ಕೆಲಸ ಮಾಡಬೇಕು. ಆಂಗ್ಲ ಭಾಷೆಯಿಂದ ಎಂದಿಗೂ ಜೀವನ ಸಾಗುವುದಿಲ್ಲ. ಕನ್ನಡವೇ ಸತ್ಯ, ನಿತ್ಯವೆಂದು ಅರಿಯಬೇಕು. ಇಂದು ಅನೇಕ ಪ್ರವಾಸಿಗರು ಅಮ್ಮನ ಭಾಷೆ ಕನ್ನಡದಿಂದ ಜಗತ್ತಿನ ಮೂಲೆ ಮೂಲೆಗಳನ್ನು ಮೊಬೈಲ್ ಭಾಷಾ ಅನುವಾದದಿಂದ ಪ್ರವಾಸ ಕೈಗೊಂಡು ಅಲ್ಲಿನ ಸಂಸ್ಕೃತಿ ಪರಿಚಯಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಆಂಗ್ಲಭಾಷೆ ಪ್ರಚಲಿತದಲ್ಲಿಲ್ಲ. ಅಲ್ಲಿನ ಸ್ಥಳೀಯ ಭಾಷೆಯನ್ನೇ ಹೆಚ್ಚು ಮಹತ್ವ ಪಡೆದು ಕೊಂಡಿವೆ. ಯುರೋಪ್, ರಷ್ಯಾದಂಥ ದೇಶದಲ್ಲಿ ಇಂಗ್ಲೀಷ್ ಭಾಷೆ ಮೂಲೆ ಗುಂಪಾಗಿವೆ. ಅದಕ್ಕೆ ಅಲ್ಲಿನ ಜನತೆ ಸ್ವಭಾಷಾ ಮೇಲಿರುವ ಪ್ರೀತಿ. ಹೀಗಾಗಿ ಸಾವಿರಾರು ಇತಿಹಾಸವಿರುವ ಕನ್ನಡವನ್ನು ನಾವುಗಳು ಕಳೆದುಕೊಳ್ಳದೇ ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದರು.ಕನ್ನಡ ಸಮರ್ಥ, ಪ್ರಾಚೀನತೆ, ಶಕ್ತಿಯುತ ಹಾಗೂ ಸುಂದರ ಲಿಪಿ ಹೊಂದಿರುವ ಭಾಷೆಯಾಗಿದೆ. ಎಳೆ ವಯಸ್ಸಿನಿಂದಲೇ ಹಳೇಗನ್ನಡ ಪರಿಚಯ ಮಾಡಬೇಕು. ಆದರೆ, ಈಚೆಗೆ ಕನ್ನಡ ಶಾಲೆಗೆ ತೆರಳಿದರೆ ಅಪರಾಧವೆಂದು ಬಿಂಬಿತವಾಗಿವೆ. ಸಾವಿರಾರು ಸಾಲಸೋಲ ಮಾಡಿ ಬಡವರ್ಗದ ಜನರು ಆಂಗ್ಲ ಭಾಷೆ ಶಾಲೆಗಳಿಗೆ ದಾಖಲಿಸಿ ಭಾಷಾ ಅಳಿವಿಗೆ ಮುಂದಾಗುವುದು ಸಮಂಜಸವಲ್ಲ ಎಂದು ಹೇಳಿದರು.ಪಂಪ, ಕುಮಾರವ್ಯಾಸರ ಹಳೇಗನ್ನಡ ಆರಂಭದಲ್ಲಿ ಕಷ್ಟವೆನಿಸಬಹುದು. ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡರೆ ಸುಲಲಿತವಾಗಿ ಪರಿಣಿತಿ ಹೊಂದಿ ಮಾತಿನ ವಾಕ್ಯ ಸ್ಪಷ್ಟವಾಗಲಿದೆ. ಕನ್ನಡವನ್ನು ಕಷ್ಟಪಟ್ಟು ಕಲಿಯದೇ, ಇಷ್ಟಪಟ್ಟು ಕಲಿ ಯುವ ಆಸಕ್ತಿ ಪಾಲಕರು, ರಾಜಕಾರಣಿಗಳು ಸಮಾಜಕ್ಕೆ ಬಿತ್ತುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಮೂಡಲಗಿರಿಯಯ್ಯ ಕನ್ನಡಿಗರು ಒಟ್ಟಾಗಿ ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾದರೆ ಭಾಷೆ ಅಳಿವಿನ ಆತಂಕವಿರುವುದಿಲ್ಲ. ಮೈ ಮರೆತು ಮಾತೃಭಾಷೆಗಿಂತ, ಆಂಗ್ಲ ಭಾಷೆ ವ್ಯಾಮೋಹಕ್ಕೆ ಒಳಗಾದರೆ ಭಾಷಾ ಸಂಸ್ಕೃತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಕ್ಷೇಮಪಾಲನ ಅಧಿಕಾರಿ ಜಿ.ಮಹೇಶ್ವರಪ್ಪ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ಎಂ.ನಟೇಶ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎ.ಸಿ.ಪುಟ್ಟಸ್ವಾಮಿ, ಸಮಾಜಶಾಸ್ತ್ರ ಮುಖ್ಯಸ್ಥ ಎ.ಆರ್. ಶಿವರಾಜ್, ಆಂತರಿಕ ಕಿರು ಪರೀಕ್ಷೆ ಸಂಚಾಲಕ ಡಿ.ಕೆ.ಲೋಕೇಗೌಡ, ಗ್ರಂಥಪಾಲಕ ಎಂ.ಎನ್.ದೇವರಾಜ್ ಉಪಸ್ಥಿತ ರಿದ್ದರು. ಐ.ಕ್ಯೂ.ಎ.ಸಿ ಸಂಚಾಲಕ ದೀಕ್ಷಿತ್‌ಕುಮಾರ್ ಸ್ವಾಗತಿಸಿ ದರು. ವಿದ್ಯಾರ್ಥಿನಿ ಹರ್ಷಿತಾ ಪ್ರಾರ್ಥಿಸಿದರು. ಉಪನ್ಯಾಸಕಿ ಮಾಲತಿ ನಿರೂಪಿಸಿ, ವಂದಿಸಿದರು. 25 ಕೆಸಿಕೆಎಂ 1ಚಿಕ್ಕಮಗಳೂರಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕನ್ನ ಡ ರಾಜ್ಯೋತ್ಸವ ಸಮಾರಂಭವನ್ನು ಲೇಖಕಿ ಡಾ. ಸಬಿತಾ ಬನ್ನಾಡಿ ಉದ್ಘಾಟಿಸಿದರು. ಪ್ರಾಂಶುಪಾಲ ಡಾ. ಮೂಡಲಗಿರಿಯಯ್ಯ, ನಟೇಶ್, ಪುಟ್ಟಸ್ವಾಮಿ, ಶಿವರಾಜ್ ಇದ್ದರು.