ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ಸಮಾಜದಲ್ಲಿ ಡಾ.ಶಿವಕುಮಾರ ಶ್ರೀಗಳ ಸೇವೆ ಅನನ್ಯವಾಗಿದ್ದು, ತ್ರಿವಿಧ ದಾಸೋಹಗಳ ಮೂಲಕ ಸಮಾಜಕ್ಕೆ ಮಾದರಿಯಾಗಿ ನಡೆದುಕೊಂಡಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.ತಾಲೂಕಿನ ಗುಮ್ಮಸಂದ್ರದ ರುದ್ರಮುನೀಶ್ವರ ಮಠದಲ್ಲಿ ಗುರುವಾರ ಕಿರಿಯ ಶ್ರೀಗಳ ಪಟ್ಟಾಭೀಷೇಕ ಹಾಗೂ ಡಾ.ಶಿವಕುಮಾರ ಮಹಾಶಿವಯೋಗಿಗಳ ಭವನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ಶಿವಕುಮಾರ ಶ್ರೀಗಳು ಸಮಾಜದಲ್ಲಿ ಒಂದು ದೊಡ್ಡ ಶೈಕ್ಷಣಿಕ ಸೇವೆ ನಡೆಸಿ ಎಲ್ಲಾ ಮಠಾಧಿಪತಿಗಳಿಗೆ ಆದರ್ಶ ಪೀಠಾಧಿಪತಿಗಳಾಗಿ, ದೇಶದಲ್ಲಿರುವ ಎಲ್ಲಾ ಪ್ರಜ್ವಲ ಪೀಠಾಧಿಪತಿಗಳಿಗೂ ಹಿರಿಯರಾಗಿ, ಮಾರ್ಗದರ್ಶಕರಾಗಿ ದೇಶಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ ಎಂದರು.ಸಮಾಜಕ್ಕೆ ಮಠಗಳ ಪಾತ್ರ ಮಹತ್ವವಾಗಿದೆ. ರುದ್ರಮುನೇಶ್ವರ ಮಠದ ಮಠಾಧ್ಯಕ್ಷ ಡಾ.ಚಂದ್ರಶೇಖರ ಸ್ವಾಮೀಜಿ ಯಾವುದೇ ಮೂಲಭೂತ ಸೌಲತ್ತುಗಳಿಲ್ಲದೇ ಭಕ್ತರ ಸಹಕಾರದಿಂದ ಮಠ ಕಟ್ಟಿ ಈ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಕಲಿಸುವ ಮೂಲಕ ಧಾರ್ಮಿಕ-ಆಧ್ಯಾತ್ಮಿಕತೆಯನ್ನು ಕಲಿಸಿದ್ದಾರೆ. ಈ ಮಠದ ಕಿರಿಯ ಶ್ರೀಗಳಿಗೆ ಮತ್ತು ಅಭಿವೃದ್ಧಿಗೆ ಸದಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸುತ್ತೂರು ಮಠದ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಂಸ್ಕಾರ ಹೊಂದಿದ್ದ ಮನುಷ್ಯನಿಗೆ ಸಮಾಜದಲ್ಲಿ ಬೆಲೆ ಹೆಚ್ಚಿರುತ್ತದೆ. ಅದರಂತೆ ಮನುಷ್ಯ ನಡೆ- ನುಡಿ ಎರಡರಲ್ಲೂ ಮಾದರಿಯಾಗಬೇಕು. ಮಗುವಿನ ಭವಿಷ್ಯ ರೂಪಿಸುವುದು ತಾಯಿ, ತಾಯಿಯಿಂದ ಉತ್ತಮ ಸಂಸ್ಕಾರ ಕಲಿತ ಮಗು ಭವಿಷ್ಯದಲ್ಲಿ ಉತ್ತಮ ನಾಯಕನಾಗಲು ಸಾಧ್ಯ ಎಂದು ತಿಳಿಸಿದರು.ರುದ್ರಮುನೇಶ್ವರ ಮಠದ ಮಠಾಧ್ಯಕ್ಷ ಡಾ.ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಕೆಲ ದಿನಗಳಿಂದ ನನ್ನ ಆರೋಗ್ಯ ಕ್ಷೀಣಿಸುತ್ತಿದ್ದು, ಶ್ರೀಮಠಕ್ಕೆ ಉತ್ತರಾಧಿಕಾರಿ ಆಯ್ಕೆ ವಿಚಾರವಾಗಿ ಚಿಂತನೆ ನಡೆಸುತ್ತಿದ್ದ ವೇಳೆ ಅನೇಕ ಮಠಾಧ್ಯಕ್ಷರ ಹಾಗೂ ಮಠದ ಭಕ್ತರೊಂದಿಗೆ ಚರ್ಚಿಸಿ, ಕಣ್ಣೂರು ಗ್ರಾಮದ ವಟುವನ್ನು ಆಯ್ಕೆಮಾಡಿ ಇಂದು ಪಟ್ಟಾಭೀಷೇಕ ನಡೆಸುತ್ತಿದ್ದು, ಇದಕ್ಕೆ ಸಹಕಾರ ನೀಡಿದ ಎಲ್ಲಾ ಮಠಾಧ್ಯಕ್ಷರಿಗೆ, ಭಕ್ತರಿಗೆ ಅಭಾರಿಯಾಗಿದ್ದೇನೆ ಎಂದು ಭಾವುಕರಾದರು.
ಮಠದ ಭಕ್ತರಲ್ಲಿ ನನಗೆ ಸಹಕಾರ ನೀಡಿದಂತೆ ಇನ್ನೂ ಮುಂದೆ ನಮ್ಮ ಕಿರಿಯ ಶ್ರೀಗಳಿಗೂ ಸಹಕಾರ ನೀಡುವ ಮೂಲಕ ಮಠದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.ಭವನದಲ್ಲಿ ಕೊಠಡಿಗಳನ್ನು ನಿರ್ಮಿಸಲು ಮನವಿ:ರುದ್ರಮುನೇಶ್ವರ ಮಠದಲ್ಲಿ ಭಕ್ತರ ಸಹಕಾರದಿಂದ ನೂತನವಾಗಿ ನಿರ್ಮಾಣಗೊಂಡಿರುವ ಡಾ.ಶ್ರೀ ಶಿವಕುಮಾರ ಮಹಾಶಿವಯೋಗಿಗಳ ಭವನದಲ್ಲಿ ಐದು ಕೊಠಡಿಗಳ ಅವಶ್ಯಕತೆ ಇದ್ದು, ಶಾಸಕರು ಇದಕ್ಕೆ ಸಹಕಾರ ನೀಡಬೇಕೆಂದು ಪೀಠಾಧ್ಯಕ್ಷ ಶ್ರೀ ಚಂದ್ರಶೇಖರ್ ಮಹಾಸ್ವಾಮೀಜಿ ಮನವಿ ಮಾಡಿದರು. ಸ್ವಾಮೀಜಿಗಳ ಮನವಿಗೆ ಸ್ಪಂದಿಸಿದ ಶಾಸಕ ಎಚ್.ಸಿ.ಬಾಲಕೃಷ್ಣ ಮುಂದಿನ ವರ್ಷದೊಳಗೆ ಶ್ರೀಗಳ ಆಶಯದಂತೆ ಕೊಠಡಿಗಳನ್ನು ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಎ.ಮಂಜುನಾಥ್, ಮಾಜಿ ಎಂಎಲ್ಸಿ ಅ.ದೇವೇಗೌಡ, ಮಾಜಿ ಮಹಾಪೌರರು ಗಂಗಾಬಿಂಕೆ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭೆಯ ರಾಮನಗರ ಜಿಲ್ಲಾ ಅಧ್ಯಕ್ಷ ಯೋಗಾನಂದ್, ಬಮೂಲ್ ನರಸಿಂಹಮೂರ್ತಿ, ಶಿವಪ್ರಸಾದ್, ಪೊಲೀಸ್ ವಿಜಯ್ ಕುಮಾರ್, ಮಹೇಶ್, ಅನಿಲ್, ದೊಡ್ಡಿ ಲೋಕೇಶ್ ಸೇರಿ ವಿವಿಧ ಮಠಾಧ್ಯಕ್ಷರು ಉಪಸ್ಥಿತರಿದ್ದರು.