ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕನ್ನಡದ ವರನಟ ಡಾ‌.ರಾಜ್ ಕುಮಾರ್ ಅವರ ತವರಾದ ಚಾಮರಾಜನಗರ ಗಡಿಭಾಗದಲ್ಲಿರುವ ತಮಿಳುನಾಡಿನ ತಾಳವಾಡಿಯ ಗಾಜನೂರಿನಲ್ಲಿ ಡಾ.ರಾಜ್ ಕುಮಾರ್ ವೃತ್ತವನ್ನು ಡಾ.ಶಿವರಾಜ್ ಕುಮಾರ್ ಉದ್ಘಾಟಿಸಿದರು.

ಅಣ್ಣಾವ್ರ ತವರಾದ ದೊಡ್ಡ ಗಾಜನೂರಿಗೆ ಡಾ.ಶಿವರಾಜಕುಮಾರ್, ಗೀತಾ ಶಿವರಾಜ್ ಕುಮಾರ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡವು ಬುಧವಾರ ಭೇಟಿ ಕೊಟ್ಟು ಅಣ್ಣಾವ್ರ ನೆನಪನ್ನು ಮೆಲುಕು ಹಾಕಿದರು.

ಗಾಜನೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಅಣ್ಣಾವ್ರ ಪ್ರತಿಮೆ ಇಟ್ಟು, ಡಾ.ರಾಜ್ ಕುಮಾರ್ ವೃತ್ತ ಎಂದು ನಾಮಕರಣ ಮಾಡಿದ್ದು ಇದನ್ನು ಶಿವಣ್ಣ ದಂಪತಿ ಉದ್ಘಾಟನೆ ಮಾಡಿದ್ದಾರೆ. ಅಣ್ಣಾವ್ರ ನೆಚ್ಚಿನ ತಾಣವಾದ ದೊಡ್ಡ ಆಲದ ಮರದ ಬಳಿ ಶಿವಣ್ಣ ದಂಪತಿ

ಕೆಲಹೊತ್ತು ಕುಳಿತು ಫೋಟೋಗೆ ಪೋಸ್ ನೀಡಿದ್ದಾರೆ. ಗ್ರಾಮದಲ್ಲಿನ ಹಳೇ ಮನೆ, ಮಂಟೇಸ್ವಾಮಿ ದೇವಾಲಯಕ್ಕೂ ಭೇಟಿ ಕೊಟ್ಟು ಊರಹಬ್ಬದಲ್ಲಿ ಭಾಗಿಯಾಗುವ ಮೂಲಕ ತವರಿನ ಪ್ರೇಮ ಮೆರೆದಿದ್ದಾರೆ. ಇನ್ನು, ನಟ ಶಿವಣ್ಣ ಊರಿಗೆ ಬಂದ ಮಾಹಿತಿ ತಿಳಿದು ಚಾಮರಾಜನಗರ ಸುತ್ತಮುತ್ತಲಿನಿಂದಲೂ ಅಭಿಮಾನಿಗಳು ದೌಡಾಯಿಸಿ ನೆಚ್ಚಿನ ನಟನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.