ಸುತ್ತೂರು- ಶಿಲ್ಲಾಂಗ್ ನಡುವೆ ಶಾಶ್ವತ ಸಂಬಂಧ ಬೆಸೆಯಬೇಕು

| Published : Aug 26 2024, 01:32 AM IST

ಸಾರಾಂಶ

ಮೇಘಾಲಯ ಬೆಟ್ಟಗುಡ್ಡಗಳಿಂದ ಕೂಡಿರುವ ರಾಜ್ಯವಾಗಿದೆ. ಅಲ್ಲಿ ಅನೇಕ ಮಂದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಮೇಘಾಲಯದ ಸಂಬಂಧ ಕೇವಲ ನಾನು ರಾಜ್ಯಪಾಲನಾಗಿರುವ ಅವಧಿಗೆ ಮಾತ್ರ ಸೀಮಿತವಾಗಬಾರದು. ಹೀಗಾಗಿ, ಸುತ್ತೂರು ಮತ್ತು ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಡುವೆ ಶಾಶ್ವತ ಸಂಬಂಧ ಬೆಳೆಯಬೇಕು. ಈ ಸಂಬಂಧ ಬೆಸೆಯಲು ಸೇತುವೆಯಾಗಿ ನಾನು ಕೆಲಸ ಮಾಡುತ್ತೇನೆ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ತಿಳಿಸಿದರು.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಭಾನುವಾರ ನಡೆದ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 109ನೇ ಜಯಂತಿ ಮಹೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇಘಾಲಯ ಬೆಟ್ಟಗುಡ್ಡಗಳಿಂದ ಕೂಡಿರುವ ರಾಜ್ಯವಾಗಿದೆ. ಅಲ್ಲಿ ಅನೇಕ ಮಂದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆ ಹಾಗೂ ಅವರ ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ದೊರೆಕಿಸಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ನಮ್ಮ ಮೈಸೂರಿನಲ್ಲಿ ಸುತ್ತೂರು ಮಠವು ಈ ಭಾಗದ ಜನರಿಗೆ ಶ್ರೇಷ್ಠ ಮಟ್ಟದ ಶಿಕ್ಷಣ ಸೌಲಭ್ಯ ನೀಡಿದೆ. ಇದೇ ಸೌಲಭ್ಯವನ್ನು ಮೇಘಾಲಯಕ್ಕೂ ವಿಸ್ತರಿಸಬೇಕು. ಅದಕ್ಕಾಗಿ ತಾವು ಅಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕು. ಅದಕ್ಕೂ ಮೊದಲು ಸುತ್ತೂರು ಶ್ರೀಗಳು ಶಿಲ್ಲಾಂಗ್‌ ರಾಜಭವನಕ್ಕೆ ಬರಬೇಕು ಎಂದು ಆಹ್ವಾನಿಸಿದರು.

ಮೇಘಾಲಯ ರಾಜ್ಯಪಾಲರಾಗಿ ನೇಮಕವಾಗಿ ರಾಜಭವನ ಪ್ರವೇಶ ಮಾಡಿದ ಮರು ದಿನವೇ ಉನ್ನತ ಅಧಿಕಾರಿಗಳ ಸಭೆ ನಡೆಸಿ, ರಾಜಭನವನ ದೇವಸ್ಥಾನವಿದ್ದಂತೆ. ಅದರ ಪಾವಿತ್ರ್ಯತೆ ಕಾಪಾಡಬೇಕು. ಇದಕ್ಕಾಗಿ ರಾಜಭವನದ ಆವರಣದಲ್ಲಿ ಮಾಂಸಾಹಾರ ಹಾಗೂ ಮದ್ಯಪಾನ ಸೇವಿಸಬಾರದು ಎಂದು ನಿರ್ಣಯ ಮಾಡಿ, ಮಾಂಸ ಹಾಗೂ ಮದ್ಯವನ್ನು ನಿಷೇಧಿಸಲಾಗಿದೆ. ಹಿಂದೆ ಹೇಗಿತ್ತೋ ಗೊತ್ತಿಲ್ಲ, ಮುಂದೆ ಏನಾಗುತ್ತದ್ದೋ ಗೊತ್ತಿಲ್ಲ. ಆದರೆ ನಾನು ರಾಜಭವನದಲ್ಲಿ ಇರುವ ತನಕ ಇದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.

ನಮ್ಮ ನಾಡಿನ ಜನತೆಯ ಪ್ರೀತಿ ಗೌರವವನ್ನು ಹುಸಿ ಮಾಡುವುದಿಲ್ಲ. ನಾಡಿಗೆ ಕೆಟ್ಟ ಹೆಸರು ತರುವುದಿಲ್ಲ. ಈ ನೆಲದ ಸಂಸ್ಕೃತಿಗೆ ಧಕ್ಕೆ ತರುವುದಿಲ್ಲ. ನೀವು ಗೊಬ್ಬರ ಹಾಕಿ ಬೆಳೆಸಿದ ಮರ ಇದು. ಇಲ್ಲಿಯ ಋಣ ಇದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡುತ್ತೇನೆ. ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.