ಅರ್ಥ ವ್ಯವಸ್ಥೆಗೆ ಹೊಸರೂಪ ನೀಡಿದ ಡಾ.ಸಿಂಗ್‌

| Published : Dec 28 2024, 12:47 AM IST

ಸಾರಾಂಶ

ಡಾ.ಮನಮೋಹನ್‌ಸಿಂಗ್‌ ಸುಧಾರಣೆಗಳು ಭಾರತವನ್ನು ದಿವಾಳಿತನದಿಂದ ರಕ್ಷಿಸಿದವು ಮಾತ್ರವಲ್ಲದೇ , ದೇಶದ ಆರ್ಥಿಕ ಅಭಿವೃದ್ಧಿಯ ಪಥವನ್ನು ಏರುತ್ತಿರುವ ಜಾಗತಿಕ ಶಕ್ತಿಯಾಗಿ ಮರು ವ್ಯಾಖ್ಯಾನಿಸುವಂತೆ ಮಾಡಿದವು. ಮೇ 22, 2004 ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿಂಗ್, ಸತತ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ದೇಶದ ಆರ್ಥಿಕ ಸುಧಾರಣೆಯ ಹರಿಕಾರರಾಗಿದ್ದರು. ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಪರಿಚಯಿಸುವ ಮೂಲಕ ಭಾರತದ ಆರ್ಥಿಕತೆ ಹೊಸ ಮಗ್ಗುಲಿಗೆ ಹೊರಳುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಅಗಲಿಕೆ ದೇಶಕ್ಕೆಮಾತ್ರವಲ್ಲ, ಜಗತ್ತಿನ ಆರ್ಥಿಕತೆಗೂ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.ನಗರದಲ್ಲಿ ವರದಿಗಾರರ ಜತೆ ಮಾತನಾಡಿದ ಶಾಸಕರು, 1991 ರಲ್ಲಿ ಪಿ.ವಿ.ನರಸಿಂಹ ರಾವ್‌ ನೇತೃತ್ವದ ಸರ್ಕಾರದಲ್ಲಿ ಡಾ.ಮನಮೋಹನ್‌ ಸಿಂಗ್‌ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದರು. ಆಗ ಅವರು ತಮ್ಮ ಚೊಚ್ಚಲ ಬಜೆಟ್‌ ಮಂಡಿಸಿದ್ದರು. ಬಜೆಟ್‌ ನಂತರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ್ದರು. ಸುಧಾರಣೆಯ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು ಎಂದರು.

ದೇಶದ ಅರ್ಥ ವ್ಯವಸ್ಥೆ ಸುಧಾರಣೆ

ಅವರ ಐತಿಹಾಸಿಕ ಸುಧಾರಣೆಗಳು ಭಾರತವನ್ನು ದಿವಾಳಿತನದಿಂದ ರಕ್ಷಿಸಿದವು ಮಾತ್ರವಲ್ಲದೇ , ದೇಶದ ಆರ್ಥಿಕ ಅಭಿವೃದ್ಧಿಯ ಪಥವನ್ನು ಏರುತ್ತಿರುವ ಜಾಗತಿಕ ಶಕ್ತಿಯಾಗಿ ಮರು ವ್ಯಾಖ್ಯಾನಿಸುವಂತೆ ಮಾಡಿದವು. ಮೇ 22, 2004 ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿಂಗ್, ಮೇ 26, 2014 ರವರೆಗೆ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ಅವಧಿಯ ಭಾರತದ ಪ್ರಧಾನಿ ಎನಿಸಿಕೊಂಡಿದ್ದಾರೆ.

ಬಡ ಕುಟುಂಬದಲ್ಲಿ ಜನಿಸಿದ ಡಾ.ಮನಮೋಹನ್ ಸಿಂಗ್ ರವರು ಶಿಕ್ಷಣ, ಅರ್ಥಶಾಸ್ತ್ರ ಮತ್ತು ರಾಜಕೀಯದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ. ಬಡತನದ ಹಿನ್ನೆಲೆಯಿಂದ ಬಂದು ದೇಶದ ಅರ್ಥ ವ್ಯವಸ್ಥೆ ಸುಧಾರಣೆಯಲ್ಲಿ ಮಹತ್ವದ ಕೊಡುಗೆ ನೀಡಿ, 10 ವರ್ಷ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ನಾಯಕ ಎಂದರು.

ಮನಮೋಹನ್ ಸಿಂಗ್ ರವರು ಬಾಲ್ಯದಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ಪಾಕಿಸ್ತಾನದ ಗಾಹ್ ಗ್ರಾಮದಲ್ಲಿ ವಾಸಿಸಿದ್ದರು. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇರಲಿಲ್ಲ. ಗ್ರಾಮದಲ್ಲಿ ಶಾಲೆಯೂ ಇರಲಿಲ್ಲ. ದೂರದ ಶಾಲೆಗೆ ಬರಿಗಾಲಲ್ಲಿ ಮೈಲುಗಟ್ಟಲೆ ನಡೆದುಕೊಂಡು ಹೋಗುತ್ತಿದ್ದರು. ಬೀದಿ ದೀಪದ ಕೆಳಗೆ ಕೂತು ಸಿಂಗ್‌ ಓದುತ್ತಿದ್ದರು.ಬಾಲ್ಯದಲ್ಲೇ ತಾಯಿಯ ಕಳೆದುಕೊಂಡ ಬಾಲಕ ಮನಮೋಹನ್ ಸಿಂಗ್ ರವರು ಅಜ್ಜಿಯ ಮಡಿಲಲ್ಲೇ ಬಾಲ್ಯ ಕಳೆದರು.ಆರ್‌ಬಿಐ ಗವರ್ನರ್‌, ಅರ್ಥಶಾಸ್ತ್ರಜ್ಞ, ವಿತ್ತ ಸಚಿವ ಮತ್ತು ಪ್ರಧಾನಿಯಾಗಿ ಅವರ ಕೊಡುಗೆ ಈ ದೇಶಕ್ಕೆ ಅನನ್ಯವಾಗಿದೆ ಎಂದರು.

ಪ್ರಗತಿಪರ ದೃಷ್ಟಿಕೋನದ ನಾಯಕ

ಮನ ಮೋಹನ್ ಸಿಂಗ್ ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ ಮತ್ತು ಅವರ ಪ್ರಗತಿಪರ ದೃಷ್ಟಿಕೋನ ಮತ್ತು ಅವಿಸ್ಮರಣೀಯ ಕೊಡುಗೆಗಳು ದೇಶದ ಮುಂದಿನ ತಲೆಮಾರಿಗೆ ಮತ್ತು ಮೊದಲ ಬಾರಿ ರಾಜಕೀಯ ಪ್ರವೇಶಿಸಿ ಶಾಸಕರಾದ ನಮ್ಮಂತಹವರಿಗೆ ಸ್ಫೂರ್ತಿಯಾಗಲಿವೆ ಎಂದು ತಿಳಿಸಿದ್ದಾರೆ.

ಸಿಕೆಬಿ-2 ಪ್ರದೀಪ್ ಈಶ್ವರ್