ಈ ಕ್ರೀಡೋತ್ಸವದ ವಿಶೇಷ ಆಕರ್ಷಣೆಯಾಗಿ ಏಕಲವ್ಯ ಪ್ರಶಸ್ತಿ ವಿಜೇತರು, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರು, ಬೆಂಗಳೂರು ಬುಲ್ಸ್ ತಂಡದ ಕೋಚ್ ಮತ್ತು ಸಹಾಯಕ ಕೋಚ್‌ಗಳು, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕ್ರತರು ಹಾಗೂ ವಿವಿಧ ಕ್ರೀಡಾ ಕ್ಷೇತ್ರದ ಸಾಧಕರಿಗೆ ಭವ್ಯ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕನ್ನಡ ಪ್ರಭವಾರ್ತೆ ಹಾಸನ
ಕ್ರೀಡಾಭಿಮಾನಿಗಳಿಗೆ ಹೊಸ ವರ್ಷದ ಕೊಡುಗೆಯಾಗಿ, ಡಾ. ಸೂರಜ್ ರೇವಣ್ಣ ಸ್ಪೋರ್ಟ್ಸ್ ಅ್ಯಂಡ್ ಕಲ್ಚರ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿರುವ ಡಾ. ಸೂರಜ್ ರೇವಣ್ಣ ಕಪ್ ೫.೦ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯು ಜನವರಿ 3 ಮತ್ತು 4 ರಂದು ಚನ್ನರಾಯಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಅಸೋಸಿಯೇಶನ್ ವರ್ಕಿಂಗ್ ಅಧ್ಯಕ್ಷ ನಾಗರಾಜು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಶ್ರೇಷ್ಠ ಕಬಡ್ಡಿ ತಂಡಗಳು ಭಾಗವಹಿಸುವ ಈ ಪಂದ್ಯಾವಳಿಯು ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅತ್ಯುತ್ತಮ ವೇದಿಕೆಯಾಗಲಿದೆ ಎಂದರು.
ಕ್ರೀಡಾ ಸಂಸ್ಕ್ರತಿಯನ್ನು ಬೆಳೆಸುವ ಜೊತೆಗೆ ಗ್ರಾಮೀಣ ಪ್ರತಿಭೆಗಳನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ಈ ಟೂರ್ನಿಯ ಪ್ರಮುಖ ಉದ್ದೇಶವಾಗಿದೆ. ಜನವರಿ 3ರಂದು ಸಂಜೆ 7 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ವಿಧಾನಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ ಅವರು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿ.ಎನ್. ಪುಟ್ಟಸ್ವಾಮಿಗೌಡ, ಎಚ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು,ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಸ್ವಾಮೀಜಿ, ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಜನವರಿ 4ರಂದು ಸಂಜೆ 7 ಗಂಟೆಗೆ ನಡೆಯುವ ಗೌರವ ಸಮಾರಂಭದಲ್ಲಿ ಮಾಜಿ ಪ್ರಧಾನಮಂತ್ರಿ ಹಾಗೂ ರಾಜ್ಯಸಭಾ ಸದಸ್ಯರಾದ ಎಚ್.ಡಿ. ದೇವೇಗೌಡ ಅವರು ಭಾಗವಹಿಸಿ, ಕ್ರೀಡಾಪಟುಗಳಿಗೆ ಗೌರವ ಸಲ್ಲಿಸಲಿದ್ದಾರೆ.ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಕುಸುಮ ಬಾಲಕೃಷ್ಣ, ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ, ವಿಧಾನಪರಿಷತ್ ಉಪಾಧ್ಯಕ್ಷ ಎಂ.ಕೆ. ಪ್ರಾಣೇಶ್ ಕುಮಾರ್, ಲೋಕಸಭಾ ಸದಸ್ಯ ಡಾ. ಸಿ.ಎನ್. ಮಂಜುನಾಥ್, ಮಾಜಿ ಸಂಸದ ಪ್ರತಾಪ್ ಸಿಂಹ, ಅರಕಲಗೂಡು ಶಾಸಕ ಎ. ಮಂಜು, ಹಾಸನ ಶಾಸಕ ಸ್ವರೂಪ್ ಪ್ರಕಾಶ್, ವಿಧಾನಪರಿಷತ್ ಸದಸ್ಯ ವಿವೇಕಾನಂದ ಕೆ. ಸೇರಿ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಈ ಕ್ರೀಡೋತ್ಸವದ ವಿಶೇಷ ಆಕರ್ಷಣೆಯಾಗಿ ಏಕಲವ್ಯ ಪ್ರಶಸ್ತಿ ವಿಜೇತರು, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರು, ಬೆಂಗಳೂರು ಬುಲ್ಸ್ ತಂಡದ ಕೋಚ್ ಮತ್ತು ಸಹಾಯಕ ಕೋಚ್‌ಗಳು, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕ್ರತರು ಹಾಗೂ ವಿವಿಧ ಕ್ರೀಡಾ ಕ್ಷೇತ್ರದ ಸಾಧಕರಿಗೆ ಭವ್ಯ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದೆಲ್ಲೆಡೆಯಿಂದ ಆಗಮಿಸುವ ತಂಡಗಳ ನಡುವೆ ನಡೆಯುವ ರೋಚಕ ಪಂದ್ಯಾವಳಿಗಳು ಕ್ರೀಡಾಭಿಮಾನಿಗಳಿಗೆ ಅಪೂರ್ವ ಅನುಭವ ನೀಡಲಿವೆ ಎಂದರು.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಆಯೋಜಕರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್ ಅಧ್ಯಕ್ಷ ಬಾಲಚಂದ್ರು, ಪ್ರಧಾನ ಕಾರ್ಯದರ್ಶಿ ಬಿ.ಆರ್. ರಕ್ಷಿತ್, ನಿರ್ದೇಶಕ ಸತೀಶ್, ನಾಗೇಶ್, ಸಲಹೆಗಾರರು ವಿಕಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.