ಸಾರಾಂಶ
ಉಡುಪಿ: ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಲ್ಲಿ ಓರ್ವರಾಗಿದ್ದ ದಿನೇಶ ಅಮ್ಮಣ್ಣಾಯ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿಯ ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.ದಾಮೋದರ ಮಂಡೆಚ್ಚ ಮತ್ತು ಹರಿನಾರಾಯಣ ಬೈಪಡಿತ್ತಾಯರಿಂದ ಅನುಕ್ರಮವಾಗಿ ಭಾಗವತಿಕೆ ಮತ್ತು ಹಿಮ್ಮೇಳವಾದನ ಅಭ್ಯಾಸ ಮಾಡಿ ಪುತ್ತೂರು ಮೇಳದಲ್ಲಿ ಹಿಮ್ಮೇಳ ವಾದಕರಾಗಿ ವೃತ್ತಿ ಜೀವನ ಆರಂಭಿಸಿ, 21 ವರ್ಷ ಕರ್ನಾಟಕ ಮೇಳದಲ್ಲಿ, ಕದ್ರಿ, ಎಡನೀರು, ಕುಂಟಾರು ಮೇಳಗಳಲ್ಲಿ ಒಟ್ಟೂ ಸುಮಾರು ನಾಲ್ಕು ದಶಕಗಳ ಕಲಾಸೇವೆ ಗೈದಿದ್ದರು. ಎಡನೀರು ಮಠದ ಭಕ್ತರಾಗಿದ್ದ ಅಮ್ಮಣ್ಣಾಯರು ಸ್ವಾಮೀಜಿದ್ವಯರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದರು.ತಮ್ಮ ಸುಮಧುರ ಕಂಠ ಮಾಧುರ್ಯ ಮತ್ತು ರಾಗಸಂಯೋಜನೆಯಿಂದ ಮಾನಿಷಾದ, ಸತ್ಯ ಹರಿಶ್ಚಂದ್ರ, ಕಾಡ ಮಲ್ಲಿಗೆ, ಪಟ್ಟದ ಪದ್ಮಲೆ ಸೇರಿದಂತೆ ಹಲವು ಕನ್ನಡ, ತುಳು ಪ್ರಸಂಗಗಳನ್ನು ಪರಿಣಾಮಕಾರಿಯಾಗಿ ಹಾಡಿ ಕಲಾರಸಿಕರ ಮನ ಗೆದ್ದಿದ್ದರು. ಕರುಣರಸ ಪ್ರಸ್ತುತಿಯಲ್ಲಿ ಅಸಾಧಾರಣ ಸಿದ್ಧಿ ಪ್ರಸಿದ್ಧಿ ಪಡೆದಿದ್ದರು. ಅವರ ಅಕಾಲಿಕ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.