ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮಿತ್ರ ಡಾ.ವಿ. ಲಕ್ಷ್ಮೀನಾರಾಯಣ್ ಒಂದು ಮಾತು ಹೇಳಿ ಹೋಗಿದ್ದರೆ ನೋವಾಗುತ್ತಿರಲಿಲ್ಲ. ಹೇಳದೇ ಕೇಳದ ಹೋಗಿ ನೋವುಂಟು ಮಾಡಿದ ಎಂದು ಹಿರಿಯ ರಂಗಕರ್ಮಿ ಎಚ್. ಜನಾರ್ಧನ್ ಭಾವುಕರಾದರು.ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟ (ಪಿಯುಸಿಎಲ್), ಸಿಪಿಐ (ಎಂಎಲ್) ಲಿಬರೇಷನ್, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಪ್ರಗತಿಪರ ಸಂಘಟನೆಗಳು ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ಡಾ.ವಿ. ಲಕ್ಷ್ಮೀನಾರಾಯಣ್ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಕ್ಕರಹಳ್ಳಿಯ ತಂಬೂರಿ ತಾಯಿ ಸಿದ್ದಮ್ಮ ಅವರ ಗೀತೆಯನ್ನು ಹಾಡಿದ ಜನ್ನಿ ಅವರು, ದುರಿತ ಕಾಲದಲ್ಲಿ ದೊಡ್ಡ ಜೀವ ನಮ್ಮಿಂದ ಮರೆಯಾಗಿದೆ. 4 ದಶಕಗಳಿಂದ ಅಂತರ್ಯ ಮತ್ತು ಬದ್ಧತೆಯಿಂದ ಕೆಲಸ ಮಾಡಿದ ಜೀವ ಡಾ.ವಿ. ಲಕ್ಷ್ಮೀನಾರಾಯಣ್ ಅವರು ಎಂದು ಸ್ಮರಿಸಿದರು.ಪಿಯುಸಿಎಲ್ ಮೈಸೂರು ಶಾಖೆ ಅಧ್ಯಕ್ಷ ಪ್ರೊ.ಕೆ. ಕಾಳಚನ್ನೇಗೌಡ ಮಾತನಾಡಿ, ವೈದ್ಯರಾದ ಡಾ. ಲಕ್ಷ್ಮೀನಾರಾಯಣ್ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಚಿಕಿತ್ಸಕರಾಗಿದ್ದರು. ಅಂಬೇಡ್ಕರ್ ಮಾರ್ಕ್ಸ್ ವಿಚಾರಧಾರೆಯನ್ನು ಪ್ರಚುರಪಡಿಸಿದರು ಎಂದರು.
ಯುವ ಸಮುದಾಯದಲ್ಲಿ ಕ್ರಾಂತಿಕಾರಿ ಆಲೋಚನೆ ಬಿತ್ತಿದ ಅವರು, ಎಲ್ಲಿಯೇ ಮಾನವ ಹಕ್ಕು ಉಲ್ಲಂಘನೆ ಮತ್ತು ದೌರ್ಜನ್ಯವಾದರೆ ಸತ್ಯ ಶೋಧನೆಗೆ ಮುಂದಾಗುತ್ತಿದ್ದರು. ಅವರು ನಮೆಲ್ಲರ ಪಾಲಿಗೆ ಹೆಡ್ ಮಾಸ್ಟರ್ ರೀತಿ ಇದ್ದರು ಎಂದು ಅವರು ಹೇಳಿದರು.ಡಾ.ವಿ.ಲಕ್ಷ್ಮಿನಾರಾಯಣ ಅವರ ನಾದಿನಿ ರೂಪ ಮಾತನಾಡಿ, ರತಿರಾವ್ ಮತ್ತು ಲಕ್ಷ್ಮೀನಾರಾಯಣ ಅವರ ಅಂತರ್ಜಾತಿ ವಿವಾಹಕ್ಕೆ ನಮ್ಮ ತಂದೆಯವರು ಒಪ್ಪಿರಲಿಲ್ಲ. ಅವರಿಬ್ಬರ ಜಾತಕ ನೋಡಿದಾಗ ಜ್ಯೋತಿಷಿ ಎರಡೇ ತಿಂಗಳಿಗೆ ವಿಚ್ಛೇದನವಾಗಲಿದೆ ಎಂದು ಭವಿಷ್ಯ ನುಡಿದಿದ್ದರು. 48 ವರ್ಷಗಳ ದಾಂಪತ್ಯ ಜೀವನ ನಡೆಸಿದರು. ಅನ್ಯೋನ್ಯವಾಗಿ ಬಾಳ್ವೆ ಮಾಡಿದರು. ತಂದೆಯವರಿಗೆ ಡಾ. ಲಕ್ಷ್ಮೀನಾರಾಯಣ ಅವರೇ ಮೆಚ್ಚಿನ ಅಳಿಯರಾದರು ಎಂದು ಸ್ಮರಿಸಿದರು.
ಲಕ್ಷ್ಮೀನಾರಾಯಣ ಅವರ ಸಹೋದ್ಯೋಗಿ ಸಾಯಿನಾಥ್ ಮಾತನಾಡಿ, ಪ್ರಗತಿಪರ ಸಿದ್ಧಾಂತಕ್ಕೆ ಬದ್ಧರಾಗಿದ್ದ ಲಕ್ಷ್ಮೀನಾರಾಯಣ ಯಾವತ್ತೂ ರಾಜಿಯಾಗಲಿಲ್ಲ. ಅದಕ್ಕೆ ಅಂಟಿಕೊಂಡು ಬದುಕಿದ. ಅವನಿಗೆ ಪುಸ್ತಕವೆಂದರೆ ಜೀವ. ತಂತ್ರಜ್ಞಾನದ ತಿಳವಳಿಕೆಯೂ ಅಪಾರ. ಅವನ ಆಸೆಯಂತೆ ದೇಹವನ್ನು ವೈದ್ಯ ಕಾಲೇಜಿಗೆ ಹಸ್ತಾಂತರಿಸಲಾಯಿತು. ಮಿತ್ರ ನಮೆಲ್ಲರ ಮನದಲ್ಲಿ ಇದ್ದಾನೆ. ಅವನು ಎಲ್ಲೂ ಹೋಗಿಲ್ಲ ಎಂದರು.ಪ್ರಗತಿಪರ ಚಿಂತಕರಾದ ನಾ. ದಿವಾಕರ, ಜಿ.ಪಿ. ಬಸವರಾಜು, ಪ್ರೊ. ಕಾಳೇಗೌಡ ನಾಗವಾರ, ಪ್ರೊ. ಜಗನ್ನಾಥ್, ಸಿ. ಬಸವಲಿಂಗಯ್ಯ, ಕೆ.ಆರ್. ಸುಮತಿ, ಕೆ.ಆರ್. ಗೋಪಾಲಕೃಷ್ಣ, ಸ್ಟ್ಯಾನ್ಲಿ, ಪರಶುರಾಮ್, ಬಿ. ರವಿ, ಉಮಾದೇವಿ, ಸೀಮಾ, ಸವಿತಾ ಮಲ್ಲೇಶ್, ರಂಗಸ್ವಾಮಿ, ಡಾ. ಪದ್ಮಶ್ರೀ, ಹರಿಹರ ಆನಂದಸ್ವಾಮಿ ಮೊದಲಾದವರು ಇದ್ದರು.ಪ್ರವಾಸ ಮತ್ತು ಆಹಾರ ಪ್ರಿಯರಾದ ನಮ್ಮ ತಂದೆಯವರಿಗೆ ಓದುವುದು ಅದಕ್ಕಿಂತ ಮೆಚ್ಚಿನ ಕಾರ್ಯವಾಗಿತ್ತು. ಓದಿದ್ದನ್ನು ಮತ್ತೊಬ್ಬರಿಗೆ ಹಂಚುತ್ತ ಖುಷಿಪಡುತ್ತಿದ್ದರು. ನಾನು ಓದುವಾಗ ಯಾವಾಗಲೂ ಒತ್ತಡ ಹಾಕಿಲ್ಲ. ತಮ್ಮ ಆಯ್ಕೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಬಹಳ ವಿನಮ್ರ ವ್ಯಕ್ತಿತ್ವದ ನಮ್ಮ ತಂದೆಯವರ ಬಗ್ಗೆ ಹೆಮ್ಮೆ ಇದೆ.
- ಅಪೂರ್ವ, ಲಕ್ಷ್ಮೀನಾರಾಯಣ ಅವರ ಪುತ್ರ