ಸಾರಾಂಶ
ಜನತಾ ಶಿಕ್ಷಣ ಸಮಿತಿ ವತಿಯಿಂದ ಧಾರವಾಡದಲ್ಲಿ ಡಾ. ನ. ವಜ್ರಕುಮಾರ ಅವರ ದ್ವಿತೀಯ ಪುಣ್ಯಸ್ಮರಣೆ ನಡೆಯಿತು. ವಜ್ರಕುಮಾರ ಅವರು ಧಾರವಾಡದ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸಲಾಯಿತು.
ಧಾರವಾಡ: ಧಾರವಾಡ ಶಿಕ್ಷಣ ಕಾಶಿಯಾಗಿ ಹೆಸರುವಾಸಿಯಾಗಲು ಡಾ. ನ. ವಜ್ರಕುಮಾರ ಪಾತ್ರ ಅಪಾರ. ನಗರವು ಒಂದು ಉತ್ತಮ ವಿದ್ಯಾಕೇಂದ್ರವನ್ನಾಗಿ ಮಾಡುವಲ್ಲಿ ಅವರು ಸಫಲರಾದವರು ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಜನತಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾಗಿದ್ದ ಡಾ. ನ. ವಜ್ರಕುಮಾರ ಅವರ ದ್ವಿತೀಯ ಪುಣ್ಯಸ್ಮರಣೆಯಲ್ಲಿ ಅವರು ಮಾತನಾಡಿ, ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದು ವಿದ್ಯಾಗಿರಿಗೆ ಕಾಲಿಟ್ಟ ಡಾ. ಎನ್. ವಜ್ರಕುಮಾರ, ತಮ್ಮ ಸಹಸ್ರಮುಖ ಕರ್ತವ್ಯಗಳಿಂದ ಶಿಕ್ಷಣ ಸಂಸ್ಥೆಗಳ ಯೋಗಕ್ಷೇಮ ನಿರ್ವಹಿಸಿದ ಆಡಳಿತ ಪ್ರತಿಭೆಯಾದರು. ಜೆಎಸ್‌ಎಸ್‌ನಲ್ಲಿರುವ ಪ್ರತಿಯೊಂದು ಸಮಸ್ಯೆಗಳ ಪರಿಹಾರಕ್ಕಾಗಿ ಯೋಜನೆಗಳನ್ನು ರೂಪಿಸುತ್ತಾ, ಸಂಸ್ಥೆಯನ್ನು ಅಪಾಯದಿಂದ ಹೊರತಂದರು. ಅಂದು ಡಾ. ನ. ವಜ್ರಕುಮಾರ ಅವರು ಇಟ್ಟ ದಿಟ್ಟ ಹೆಜ್ಜೆ ಇಂದು ಜೆಎಸ್‌ಎಸ್ ಕೆಜಿಯಿಂದ ಪಿಜಿಯ ವರೆಗೆ 25 ಸಂಸ್ಥೆಗಳನ್ನು ಹೊಂದಿದ್ದು, ೨೨ ಸಾವಿರಕ್ಕೂ ವಿದ್ಯಾರ್ಥಿಗಳಿಗೆ ಶಿಕ್ಷಣ ಧಾರೆಯೆರೆಯುತ್ತಿವೆ ಮತ್ತು 700ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿವೆ ಎಂದರು.ಕನ್ನಡ ಪ್ರಾಧ್ಯಾಪಕ ಶ್ರೀಧರ ಹೆಗಡೆ ಮಾತನಾಡಿ, ಡಾ. ಹೆಗ್ಗಡೆ ಅವರ ಸಾರಥಿಯಾಗಿ ವಜ್ರಕುಮಾರ ಸೇವೆ ಸಲ್ಲಿಸಿದ್ದಾರೆ. ಉಡುಪಿ ಹರಿದಾಸ ಭಟ್ಟರ ಅರ್ಥಶಾಸ್ತ್ರದ ಶಿಷ್ಯರಾಗಿದ್ದ ವಜ್ರಕುಮಾರ ಅವರು ಅಲ್ಲಿ ಎನ್‌ಎಸ್‌ಎಸ್ ಅಧಿಕಾರಿಯಾಗಿ ಸಾಕಷ್ಟು ಸಾಧನೆ ಮಾಡಿದ್ದರು. ಅವರ ಆ ಸೇವಾ ಸಾಮರ್ಥ್ಯ ಜನತಾ ಶಿಕ್ಷಣ ಸಮಿತಿಯ ಜೀರ್ಣೋದ್ಧಾರಕ್ಕಾಗಿ ಸಹಕಾರಿಯಾಯಿತು ಎಂದರು. ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾದ್ಯೆ ಕಾರ್ಯಕ್ರಮ ನಿರೂಪಿಸಿದರು.