ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಾಲೆಗಳಿಗೆ ನೀರು ಹರಿಸಿ ಜನ ಜಾನುವಾರುಗಳಿಗೆ ನೀರು ಕೊಡಿ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡರನ್ನು ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳ ಕೂಗಿದರು.
ನಾಲೆಗಳಿಗೆ ನೀರು ಹರಿಸದಿದ್ದರೆ ಮಂಗಳವಾರ ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ಫಲಾನುಭವಿಗಳ ಸಮಾವೇಶಕ್ಕೆ ಬರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತ ಸಂಘದಿಂದ ಘೇರಾವ್ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.ಬಿಸಿಲ ಬೇಗೆಯಿಂದ ಅಂತರ್ಜಲ ಬತ್ತಿಹೋಗುತ್ತಿವೆ. ಕೆಆರ್‌ಎಸ್ ಜಲಾಶಯದಿಂದ ಎಲ್ಲ ನಾಲೆಗಳಿಗೆ ನೀರು ಹರಿಸಿದರೆ ಅಂತರ್ಜಲ ಮಟ್ಟ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಬರುವ ಸಾಧ್ಯತೆಗಳಿವೆ. ಹಾಗಾಗಿ ಶೀಘ್ರ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ದಿನ 2 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸಿದ ಸರ್ಕಾರ ಇದೀಗ ರಾಜ್ಯದ ಜನ-ಜಾನುವಾರುಗಳಿಗೆ ನೀರು ಕೊಡಲು ಮೀನಾ ಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ನಾಲೆಗಳಿಗೆ ನೀರು ಹರಿಸುವ ವಿಚಾರವಾಗಿ ಸ್ಥಳದಲ್ಲೇ ಉತ್ತರಿಸುವಂತೆ ಶಾಸಕರನ್ನು ಆಗ್ರಹಿಸಿದರು.ನಂತರ ರೈತರನ್ನು ಸಮಾಧಾನ ಪಡಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ನೀರು ಹರಿಸುವ ವಿಚಾರದಲ್ಲಿ ನಾನ್ನೊಬ್ಬನೆ ತೀರ್ಮಾನ ಮಾಡುವುದಲ್ಲ. ನಾಲೆಗಳಿಗೆ ನೀರು ಹರಿಸುವ ವಿಚಾರವನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚೆ ಮಾಡಿ ನಂತರ ನೀರು ಹರಿಸಲಾಗುವುದು. ಅಲ್ಲಿವರೆಗೂ ಕಾಯವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಪ್ರಸನ್ನ ಗೌಡ, ಕೆ. ಶೆಟ್ಟಹಳ್ಳಿ ಶ್ರೀಕಂಠಯ್ಯ, ಬಿಎಸ್.ರಮೇಶ್, ಕಡತನಾಳು ಬಾಲಣ್ಣ, ಅಗ್ರಹಾರ ಶಂಕರೇಗೌಡ, ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು, ದಲಿತ ಸಂಘಟನೆಯ ರವಿಚಂದ್ರ, ಉಗಮ ಟ್ರಸ್ಟ್‌ನ ಪ್ರಿಯಾರಮೇಶ್, ಎಂ.ಶೆಟ್ಟಹಳ್ಳಿ ಪುರುಷೋತ್ತಮ್, ಮಹೇಶ್ ಸೇರಿದಂತೆ ಇತರ ರೈತ ಮುಖಂಡರು ಭಾಗವಹಿಸಿದ್ದರು.ನಾಲೆಗೆ ನೀರು ಹರಿಸುವಂತೆ ಹೆದ್ದಾರಿ ತಡೆದು ಪ್ರತಿಭಟನೆಶ್ರೀರಂಗಪಟ್ಟಣ:ಜನ-ಜಾನುವಾರು ಹಾಗೂ ಕುಡಿವ ನೀರಿಗಾಗಿ ತಕ್ಷಣ ನಾಲೆಗಳ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ಹಾಗೂ ರೈತ ಮುಖಂಡ ಕೆ.ಎಸ್ ನಂಜುಂಡೇಗೌಡರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ರೈತರು ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಜಲಾಶಯದಲ್ಲಿ ನೀರಿಲ್ಲದಿದ್ದರೂ ಸರ್ಕಾರ ತಮಿಳುನಾಡಿಗೆ ನೀರು ಹರಿಸಿ ಇದೀಗ ಇಲ್ಲಿನ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತೆ ಮಾಡಿದೆ. ರೈತರಿಗೆ ಅಲ್ಪ ಸ್ವಲ್ಪ ಬೆಳೆ ಬೆಳೆಯಲು ಕಟ್ಟು ನೀರು ಬಿಡಲು ಒಪ್ಪದ ಸರ್ಕಾರ ತಮಿಳುನಾಡಿನ ಪರ ನಿಂತು ಕೆಲಸ ಮಾಡಿ ನಾಡಿನ ಜನರಿಗೆ ಕುಡಿಯಲು ನೀರು ಕೊಡದೆ ಇಲ್ಲಿನ ಜನರನ್ನೇ ಬಲಿ ಕೊಡುವಂತೆ ಕೆಲಸ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.ಬತ್ತಿಹೋಗುತ್ತಿರುವ ಅಂತರ್ಜಲ ಉಳಿಸಲು ಹಾಗೂ ಜನ ಜಾನುವಾರುಗಳು ನೀರು ಕುಡಿದು ಬದುಕಲು ತಕ್ಷಣ ನಾಲೆಗಳ ಮೂಲಕ ನೀರು ಹರಿಸಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ದ ತೀವ್ರ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಮಹದೇವು, ಕೃಷ್ಣ, ರವಿ,ಲಕ್ಷ್ಮಣ, ಶ್ರೀನಿವಾಸು ರಾಮಚಂದ್ರು, ಮಹದೇವು ಸೇರಿದಂತೆ ಹಲವರು ಭಾಗವಹಿಸಿದ್ದರು.